ಹಿಂದೂ ಆಗಿರಬೇಕು. ಶ್ರೀರಾಮನ ಭಕ್ತನಾಗಿರಬೇಕು ಸೇರಿದಂತೆ ಅನೇಕ ಅರ್ಹತೆಗಳೊಂದಿಗೆ ಅಯೋಧ್ಯೆ ಶ್ರೀರಾಮನ ಮಂದಿರಕ್ಕೆ ಸಿಇಓ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ 18 ಅಭ್ಯರ್ಥಿಗಳ ಲಿಸ್ಟ್‌ ಅಂತಿಮಗೊಳಿಸಲಾಗಿದೆ.

ಅಯೋಧ್ಯೆ: ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೊದಲ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ನೇಮಕ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ ತಲುಪಿದೆ. ದೇಶಾದ್ಯಂತ ಬಂದಿದ್ದ 5,000ಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲಿಸಿದ ಮೂವರು ಸದಸ್ಯರ ಆಯ್ಕೆ ಸಮಿತಿಯು, ಅಂತಿಮವಾಗಿ 18 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ.

ಆಗಸ್ಟ್ 11 ಮತ್ತು 12 ರಂದು ಈ 18 ಅಭ್ಯರ್ಥಿಗಳಿಗೆ ಮುಖಾಮುಖಿ ಸಂದರ್ಶನ ನಡೆಯಲಿದ್ದು, ಅದರಲ್ಲಿ ಅರ್ಹರನ್ನು ಆಯ್ಕೆ ಮಾಡಲಾಗುವುದು.

ಯಾರೆಲ್ಲಾ ರೇಸ್‌ನಲ್ಲಿದ್ದಾರೆ?

ಸಂದರ್ಶನಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳಲ್ಲಿ ಬಹುತೇಕರು ನಿವೃತ್ತ ಐಎಎಸ್ (IAS) ಅಧಿಕಾರಿಗಳು, ಕಾರ್ಪೊರೇಟ್ ಸಂಸ್ಥೆಗಳ ಮಾಜಿ ಹಿರಿಯ ಅಧಿಕಾರಿಗಳು ಮತ್ತು ನಿವೃತ್ತ ಸೇನಾ ಅಧಿಕಾರಿಗಳಾಗಿದ್ದಾರೆ. ಕಳೆದ ತಿಂಗಳು ದೇಣಿಗೆ ಕಳವು ಆರೋಪದ ಹಿನ್ನೆಲೆಯಲ್ಲಿ ಟ್ರಸ್ಟ್ ಆಡಳಿತವನ್ನು ಮತ್ತಷ್ಟು ವೃತ್ತಿಪರಗೊಳಿಸಲು ಈ ಹೊಸ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು.

ಅರ್ಹತಾ ಮಾನದಂಡಗಳೇನು?

  • ಈ ಹುದ್ದೆಗೆ ಆಯ್ಕೆಯಾಗುವ ವ್ಯಕ್ತಿ ಈ ಕೆಳಗಿನ ಮಾನದಂಡಗಳನ್ನು ಹೊಂದಿರಬೇಕು
  • 50 ರಿಂದ 70 ವರ್ಷ ವಯಸ್ಸಿನ ಹಿಂದೂ ಆಗಿರಬೇಕು
  • ದೊಡ್ಡ ಸಂಸ್ಥೆಗಳನ್ನು ನಿರ್ವಹಿಸಿದ ಕನಿಷ್ಠ 20 ವರ್ಷಗಳ ಅನುಭವವಿರಬೇಕು
  • ಶ್ರೀರಾಮನ ಭಕ್ತರಾಗಿರಬೇಕು (Devoted to Lord Ram).
  • ಅಯೋಧ್ಯೆಯಲ್ಲೇ ವಾಸ್ತವ್ಯ ಹೂಡಿ ಕೆಲಸ ಮಾಡಲು ಸಿದ್ಧರಿರಬೇಕು.
  • ಆಯ್ಕೆ ಸಮಿತಿ ಯಾರನ್ನು ಒಳಗೊಂಡಿದೆ?
  • ಅಭ್ಯರ್ಥಿಗಳ ಆಯ್ಕೆಗಾಗಿ ರಚಿಸಲಾದ ಸಮಿತಿಯಲ್ಲಿ ಈ ಕೆಳಗಿನ ಗಣ್ಯರಿದ್ದಾರೆ..
  • ಜಸ್ಟಿಸ್ ಪ್ರಮೋದ್ ಕೊಹ್ಲಿ: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು
  • ಲೆಫ್ಟಿನೆಂಟ್ ಜನರಲ್ ವಿಶ್ವಕಾಂತ್ ಚತುರ್ವೇದಿ: ನಿವೃತ್ತ ಸೇನಾ ಅಧಿಕಾರಿಗಳು
  • ಸುರೇಶ್ ಹವಾರೆ: ನಿವೃತ್ತ ಅಣು ವಿಜ್ಞಾನಿ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಮಾಜಿ ಅಧ್ಯಕ್ಷರು.

CEO ನಿಭಾಯಿಸಬೇಕಾದ ಜವಾಬ್ದಾರಿಗಳೇನು?

ಆಯ್ಕೆಯಾಗುವ CEO ಕೇವಲ ಕಚೇರಿ ಕೆಲಸವನ್ನಷ್ಟೇ ಅಲ್ಲದೆ ಧಾರ್ಮಿಕ ಮತ್ತು ಸಾರ್ವಜನಿಕ ಸಂಸ್ಥೆಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

  • ಟ್ರಸ್ಟ್‌ನ ಕಾನೂನು, ಆಡಳಿತಾತ್ಮಕ ಮತ್ತು ಆರ್ಥಿಕ ವ್ಯವಹಾರಗಳ ನಿರ್ವಹಣೆ
  • ಬೆಳೆಯುತ್ತಿರುವ ಟ್ರಸ್ಟ್‌ನ ಚಟುವಟಿಕೆಗಳಿಗೆ ಪೂರಕವಾದ ಹೊಸ ನಿಯಮ ಮತ್ತು ಕಾರ್ಯವಿಧಾನಗಳ ರಚನೆ.
  • ಟ್ರಸ್ಟ್‌ನ ಅಧಿಕಾರಿಗಳು ಮತ್ತು ನೌಕರರ ಮೇಲೆ ನಿಗಾ ಇಡುವುದು.
  • ಹಣಕಾಸಿನ ವಹಿವಾಟುಗಳಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುವುದು.
  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು.
  • ದೈನಂದಿನ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಹಬ್ಬಗಳನ್ನು ಸುಗಮವಾಗಿ ನಡೆಸಿಕೊಡುವುದು.
  • ರಾಮಮಂದಿರಕ್ಕೆ ಭೇಟಿ ನೀಡುವ ಭಕ್ತರ ಸುರಕ್ಷತೆ ಮತ್ತು ಅಗತ್ಯ ಸೌಕರ್ಯಗಳ ಮೇಲ್ವಿಚಾರಣೆ.
  • ಮಂದಿರಕ್ಕೆ ಬರುವ ವಿವಿಐಪಿಗಳು ಮತ್ತು ಸಾಧು-ಸಂತರ ಭೇಟಿಯ ವ್ಯವಸ್ಥೆ ಮಾಡುವುದು.

ಮುಂದಿನ ಹಂತವೇನು?

ಆಗಸ್ಟ್ 11 ಮತ್ತು 12 ರಂದು ನಡೆಯುವ ಸಂದರ್ಶನದ ನಂತರ, ಆಯ್ಕೆ ಸಮಿತಿಯು ಮೂರು ಪ್ರಮುಖ ಹೆಸರುಗಳನ್ನು ಟ್ರಸ್ಟ್‌ಗೆ ಶಿಫಾರಸು ಮಾಡಲಿದೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಟ್ರಸ್ಟ್‌ನ ಮುಂದಿನ ಸಭೆಯಲ್ಲಿ ಈ ಮೂವರಲ್ಲಿ ಒಬ್ಬರನ್ನು ಅಂತಿಮವಾಗಿ CEO ಆಗಿ ನೇಮಕ ಮಾಡಲಾಗುವುದು.