ವಾಷಿಂಗ್ಟನ್ (ಸೆ.18): ಈಗಾಗಲೇ ವಿಶ್ವದಲ್ಲಿ 3 ಕೋಟಿ ಜನರಿಗೆ ತಗುಲಿ, 10 ಲಕ್ಷ ಜನರನ್ನು ಬಲಿ ಪಡೆದ ಕೊರೋನಾ ಸೋಂಕಿಗೆ ಇನ್ನೇನು ಲಸಿಕೆ ಲಭ್ಯವಾಗುವ ಕ್ಷಣ ಸನ್ನಿಹಿತವಾಗಿದೆ ಎನ್ನುವ ಹಂತದಲ್ಲೇ, ಒಟ್ಟು ಸಂಭಾವ್ಯ ಉತ್ಪಾದನೆಯಲ್ಲಿ ಶೇ.51ರಷ್ಟನ್ನು ಈಗಾಗಲೇ ಶ್ರೀಮಂತ ದೇಶಗಳು ಖರೀದಿ ಮಾಡಿವೆ ಎಂಬ ಆತಂಕಕಾರಿ ವಿಷಯ ಹೊರಬಿದ್ದಿದೆ. ಹೀಗಾದಲ್ಲಿ ಈ ದುಬಾರಿ ಲಸಿಕೆಗಳು ಬಡ ದೇಶಗಳ ಜನರು ಮತ್ತು ಇತರೆ ಅತ್ಯಂತ ಅಗತ್ಯವಾಗಿ ಚಿಕಿತ್ಸೆಗೆ ಒಳಪಡಬೇಕಿರುವವರಿಗೆ ಲಭ್ಯವಾಗದೇ ಹೋಗಬಹುದು ಎಂಬ ಭೀತಿ ಎದುರಾಗಿದೆ.

ಸದ್ಯ ಆಸ್ಟ್ರಾಜೆನಿಕಾ, ಸ್ಪುಟ್ನಿಕ್‌, ಮೊಡೆರ್ನಾ, ಫಿಜರ್‌ ಮತ್ತು ಸಿನೋವ್ಯಾಕ್‌ ಲಸಿಕೆಗಳು ಪ್ರಯೋಗದ ಅಂತಿಮ ಹಂತದಲ್ಲಿ ಬಿಡುಗಡೆಗೆ ಸಜ್ಜಾಗಿವೆ. ಜೊತೆಗೆ ಅಭಿವೃದ್ಧಿಪಡಿಸಲ್ಪಟ್ಟಲಸಿಕೆಗಳ ಪೈಕಿ ಅತ್ಯಂತ ಹೆಚ್ಚಿನ ಭರವಸೆ ಮೂಡಿಸಿರುವ ಲಸಿಕೆಗಳಾಗಿವೆ. ಈ 5 ಕಂಪನಿಗಳು ಈಗಾಗಲೇ ವಿಶ್ವವ ವಿವಿಧ ಕಂಪನಿಗಳ ಜೊತೆಗೆ ಉತ್ಪಾದನೆಗೂ ಒಪ್ಪಂದ ಮಾಡಿಕೊಂಡಿವೆ. ಅದರನ್ವಯ ಮುಂದಿನ ಹಲವು ತಿಂಗಳಲ್ಲಿ ಈ ಐದೂ ಕಂಪನಿಗಳ ಲಸಿಕೆ ಸೇರಿಸಿದರೆ ಒಟ್ಟು 590 ಕೋಟಿ ಲಸಿಕೆ ಉತ್ಪಾದನೆಯ ನಿರೀಕ್ಷೆ ಇದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಒಬ್ಬ ರೋಗಿ ಅಥವಾ ಆರೋಗ್ಯವಂತ ವ್ಯಕ್ತಿ ಎರಡು ಡೋಸ್‌ ಲಸಿಕೆ ಪಡೆದುಕೊಳ್ಳಬೇಕು. ಅಂದರೆ 590 ಕೋಟಿ ಲಸಿಕೆಗಳು 245 ಕೋಟಿ ಜನರಿಗೆ ಮಾತ್ರ ಸಿಗಲಿದೆ. ಈ ಪೈಕಿ 270 ಕೋಟಿ ಲಸಿಕೆಗಳನ್ನು ವಿಶ್ವದ ಶ್ರೀಮಂತ (ವಿಶ್ವದ ಜನಸಂಖ್ಯೆಯಲ್ಲಿ ಶೇ.13ರಷ್ಟುಪಾಲು ಹೊಂದಿರುವ ದೇಶಗಳು) ಈಗಾಗಲೇ ಖರೀದಿ ಮಾಡಿಬಿಟ್ಟಿವೆ ಎಂದು ಅಮೆರಿಕ ಮೂಲದ ಆಕ್ಸ್‌ಫಾಮ್‌ ವರದಿ ತಿಳಿಸಿದೆ.

ಮುಂದಿನ ವರ್ಷ ಭಾರತದಿಂದ ಕೊರೋನಾ ಲಸಿಕೆ

ಉಳಿದ 260 ಕೋಟಿ ಲಸಿಕೆಯನ್ನು ವಿಶ್ವದ 780 ಕೋಟಿ ಜನಸಂಖ್ಯೆಯಲ್ಲಿ ಅಂದಾಜು ಶೇ.50ರಷ್ಟುಪಾಲು ಹೊಂದಿರುವ ಭಾರತ, ಬಾಂಗ್ಲಾದೇಶ, ಚೀನಾ, ಬ್ರೆಜಿಲ್‌, ಇಂಡೋನೇಷ್ಯಾ, ಮೆಕ್ಸಿಕೋ ಮತ್ತಿತರೆ ದೇಶಗಳು ಖರೀದಿಸಿವೆ.

ಹೀಗಾಗಿ ಎಲ್ಲಾ ದೇಶಗಳಿಗೂ ಅಗ್ಗವಾಗಿ ಮತ್ತು ತ್ವರಿತವಾಗಿ ಲಸಿಕೆ ಲಭ್ಯವಾಗುವಂತೆ ಮಾಡಲು ಕಂಪನಿಗಳು ಲಸಿಕೆ ಉತ್ಪಾದನೆಯ ಪೇಟೆಂಟ್‌ ರಹಿತವಾಗಿ ಎಲ್ಲಾ ದೇಶಗಳಿಗೂ ಹಂಚಬೇಕು ಎಂದು ವರದಿ ತಿಳಿಸಿದೆ.