ಬೆಂಗಳೂರು (ನ.15):   ಹಾನಿಕಾರಕ ಪಟಾಕಿ ನಿಷೇಧಿಸಿದರೂ, ಹಸಿರು ಪಟಾಕಿ ಮೂಲಕ ದೀಪಾವಳಿ ಸಂಭ್ರಮ ಆಚರಿಸುವ ಅವಕಾಶವನ್ನೇನೋ ರಾಜ್ಯ ಸರ್ಕಾರ ನೀಡಿದೆ. ಆದರೆ, ರಾಜ್ಯದ ಜನರು ಸುರಕ್ಷತೆ ದೃಷ್ಟಿಯಿಂದ ‘ಪಟಾಕಿರಹಿತ ದೀಪಾವಳಿ’ ಆಚರಣೆಗೆ ಮನಸ್ಸು ಮಾಡಿರುವ ಲಕ್ಷಣ ತೋರತೊಡಗಿದ್ದಾರೆ. ಇದಕ್ಕೆ ರಾಜ್ಯದಲ್ಲಿ ಈ ಬಾರಿ ಪಟಾಕಿ ವಹಿವಾಟು ಶೇ. 50ರಷ್ಟುಕುಸಿದಿರುವುದೇ ಸ್ಪಷ್ಟನಿದರ್ಶನ.

ಜನರಲ್ಲಿ ಪಟಾಕಿಗಳ ವಿರುದ್ಧದ ಜಾಗೃತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಪಟಾಕಿ ಮಾರಾಟ ಪ್ರಮಾಣ ಕಳೆದ 3 ವರ್ಷದಿಂದಲೂ ಇಳಿಕೆಯಾಗುತ್ತಲೇ ಇತ್ತು. ಈ ವರ್ಷ ಕೊರೋನಾ ಸೋಂಕಿನಿಂದಾಗಿ ವೈಯಕ್ತಿಕ ಆರೋಗ್ಯ ಹಾಗೂ ಪರಿಸರದ ಮೇಲೆ ಕಾಳಜಿ ಮತ್ತಷ್ಟುಹೆಚ್ಚಾಗಿದೆ. ಹೀಗಾಗಿ ಭಾರೀ ಸಂಖ್ಯೆಯಲ್ಲಿ ಜನ ಪಟಾಕಿಯಿಂದ ದೂರ ಉಳಿದಂತೆ ಕಂಡು ಬರುತ್ತಿದೆ.

ವ್ಯಾಪಾರಕ್ಕೆ ಪೆಟ್ಟು:  ಕಳೆದ ವರ್ಷವೇ ಶೇ.30ರಷ್ಟುಪಟಾಕಿ ವಹಿವಾಟು ಕುಸಿತಗೊಂಡಿತ್ತು. ಇದೀಗ ಕೊರೋನಾ ಹಿನ್ನೆಲೆಯಲ್ಲಿ ಹೆಚ್ಚಾದ ಆರೋಗ್ಯ ಕಾಳಜಿ, ಪಟಾಕಿ ನಿಷೇಧ ಮತ್ತಿತರ ಕಾರಣಗಳಿಂದಾಗಿ ಶೇ.50ರಷ್ಟುಖೋತಾ ಉಂಟಾಗಲಿದೆ ಎಂದು ಪಟಾಕಿ ಮಾರಾಟಗಾರರು ಅಂದಾಜಿಸಿದ್ದಾರೆ.

ದೀಪಗಳನ್ನು ಹಚ್ಚೋಣ, ಪಟಾಕಿಗೆ ನೋ ಅನ್ನೋಣ: ಸಚ್ಚಿದಾನಂದ ಸ್ವಾಮೀಜಿ

ನಿಗದಿತ ಸ್ಥಳಗಳಲ್ಲಿ ಪಟಾಕಿ ಮಾರಾಟ ಮಾಡಲು ಶುಕ್ರವಾರದಿಂದಷ್ಟೇ ಅನುಮತಿ ನೀಡಿದ್ದು, ಪ್ರಸ್ತುತ ಟ್ರೆಂಡ್‌ ನೋಡಿದರೆ ಶೇ.60ರಷ್ಟುಮಾರಾಟ ಕುಸಿದಿದೆ. ಮುಂದಿನ ಎರಡು ದಿನಗಳಲ್ಲಿ ಮಾರಾಟ ಚೇತರಿಕೆ ಕಂಡರೂ, ಸರಾಸರಿ ಶೇ.50ರಷ್ಟುಮಾರಾಟ ಕಡಿಮೆಯಾಗುವ ಅಂದಾಜಿದೆ ಎಂದು ಶಿವಕಾಶಿಯ ಹೋಲ್‌ಸೇಲ್‌ ಪಟಾಕಿ ಡೀಲರ್‌ ಶರವಣ ಹೇಳುತ್ತಾರೆ.

ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಬೆಂಗಳೂರು ನಗರವೊಂದರಲ್ಲೇ 100 ಕೋಟಿ ರು.ಗೂ ಮೀರಿದ ಪಟಾಕಿ ವಹಿವಾಟು ವಾರ್ಷಿಕವಾಗಿ ನಡೆಯುತ್ತಿತ್ತು. ಕಳೆದ ಎರಡು ವರ್ಷಗಳಿಂದ ಈ ಮೊತ್ತ 70 ರಿಂದ 80 ಕೋಟಿ ರು. ಕುಸಿದಿತ್ತು. ಈ ವರ್ಷ ಇದುವರೆಗೂ ಕೇವಲ 20 ಕೋಟಿ ರು. ವಹಿವಾಟು ಮಾತ್ರ ನಡೆದಿದೆ. ಇದೇ ಪರಿಸ್ಥಿತಿ ರಾಜ್ಯಾದ್ಯಂತ ಇದೆ ಎಂದು ಪಟಾಕಿ ಡೀಲರ್‌ಗಳು ಹೇಳುತ್ತಾರೆ.

ಆರ್ಥಿಕ ಬಿಕ್ಕಟ್ಟು ಹಾಗೂ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವ ಸುಪ್ರಿಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಪಟಾಕಿಗಳ ಮಾರಾಟದಲ್ಲಿ ತೀವ್ರ ಇಳಿತ ಆಗಿದೆ. ಇನ್ನು ಕೊರೋನಾದಿಂದಾಗಿ ಜನರಲ್ಲಿ ಆರೋಗ್ಯದ ಕುರಿತು ವರ್ಷದಿಂದ ವರ್ಷಕ್ಕೆ ಜಾಗೃತಿ ಹೆಚ್ಚಾಗಿದೆ. ಪಟಾಕಿ ಉತ್ಪಾದನೆ ತಗ್ಗಿರುವ ಕಾರಣ ಸಿಡಿಮದ್ದುಗಳ ದರದಲ್ಲೂ ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ.

ಮಾಚ್‌ರ್‍-ಏಪ್ರಿಲ್‌-ಮೇ ತಿಂಗಳಲ್ಲಿ ಬಹುತೇಕ ಲಾಕ್‌ಡೌನ್‌ ಇದ್ದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ಉತ್ಪಾದನೆಯಾಗಿಲ್ಲ. ಬಿಸಿಲಿನ ಕಾರಣ ಹೆಚ್ಚಿನ ಪ್ರಮಾಣದ ಪಟಾಕಿಗಳನ್ನು ತಯಾರಿಸುವುದು ಮಾಚ್‌ರ್‍-ಏಪ್ರಿಲ್‌-ಮೇ ತಿಂಗಳಲ್ಲೇ. ಜತೆಗೆ ಕಾರ್ಮಿಕರ ಸಮಸ್ಯೆ, ಸಾಗಾಣೆ ಸಮಸ್ಯೆ ಇನ್ನಿತರ ಕಾರಣಗಳಿಂದಾಗಿ ಈ ಬಾರಿ ಪಟಾಕಿ ಉತ್ಪಾದನೆಗೆ ಹೊಡೆತ ಬಿದ್ದಿದೆ.

‘ಇದರ ಬೆನ್ನಲ್ಲೇ ಗಾಯದ ಮೇಲೆ ಬರೆ ಎಳೆದಂತೆ ರಾಜ್ಯ ಸರ್ಕಾರ ಏಕಾಏಕಿ ಪಟಾಕಿ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಅಷ್ಟೊತ್ತಿಗೆ ದಾಸ್ತಾನು ಮಾಡಿಕೊಂಡಿದ್ದ ನಮ್ಮಂತಹ ಅಂಗಡಿಗಳವರ ಸ್ಥಿತಿ ಅತಂತ್ರವಾಗಿದೆ. ಇನ್ನು ಹಾನಿಕಾರಕ ಪಟಾಕಿಗಳ ಬದಲು ಹಸಿರು ಪಟಾಕಿಗಳು ಖರೀದಿಸಲು ಮುಂದಾದರೂ ಸೂಕ್ತ ಪ್ರಮಾಣದಲ್ಲಿ ಸಿಗುತ್ತಿಲ್ಲ. ಹೀಗಾಗಿ ಬೆಲೆ ಹೆಚ್ಚಾಗಿದ್ದು ಸಾರ್ವಜನಿಕರು ಪಟಾಕಿಗಳಿಂದಲೇ ದೂರವಾಗುತ್ತಿದ್ದಾರೆ’ ಎಂದು ಮತ್ತೊಬ್ಬ ಸಗಟು ಪಟಾಕಿ ವ್ಯಾಪಾರಿ ರಾಮನಾಥ್‌ ಹೇಳಿದರು.

ಏನೇನು ಕಾರಣ?

1. ಮಾಲಿನ್ಯಕಾರಕ ಪಟಾಕಿಗೆ ಸರ್ಕಾರ ನಿಷೇಧ. ಮಾರುಕಟ್ಟೆಗೆ ಬಂದರೂ, ಜನರ ನಿರಾಸಕ್ತಿ

2. ಹಸಿರು ಪಟಾಕಿಗೆ ಅವಕಾಶ ನೀಡಿದರೂ, ಅದು ದುಬಾರಿ ಹಾಗೂ ಅಷ್ಟಾಗಿ ಲಭ್ಯವಿಲ್ಲ

3. ಪಟಾಕಿ ಹೊಡೆಯಲು ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಸಮಯ ನಿಗದಿ