ನವದೆಹಲಿ(ಏ.28): ಪಂಚ ರಾಜ್ಯ ಚುನಾವಣೆ ಅಂತ್ಯಗೊಂಡಿದೆ. ಮೇ.02ರಂದು ಮತ ಎಣಿಕೆ ನಡೆಯಲಿದೆ. ಪಶ್ಚಿಮ ಬಂಗಾಳದ 8ನೇ ಹಾಗೂ ಅಂತಿಮ ಹಂತದ ಮತದಾನ ಅಂತ್ಯಗೊಳ್ಳುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಆರ್ಭಟ ಹೆಚ್ಚಾಗಿದೆ.  ಪಂಚ ರಾಜ್ಯ ಚುನಾವಣೋತ್ತರ ಸಮೀಕ್ಷೆಯಲ್ಲಿ ಎಲ್ಲರ ಕೇಂದ್ರ ಬಿಂದುವಾಗಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ. ಆದರೆ ಅಧಿಕಾರ ಚುಕ್ಕಾಣಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಹಿಡಿಯಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.

"

ಪಂಚರಾಜ್ಯ ಚುನಾವಣೆ: ಮತ ಎಣಿಕೆ ಕೇಂದ್ರ ಪ್ರವೇಶಿಸಲು ಕಂಡೀಷನ್ ಹಾಕಿದ ಆಯೋಗ!

ಕೇರಳದಲ್ಲಿ ಕಮಲ ಅರಳಿಸುವ ಯತ್ನದಲ್ಲಿದ್ದ ಬಿಜೆಪಿ ಕಳೆದ ಬಾರಿಗಿಂತ ಉತ್ತಮ ಪ್ರದರ್ಶನ ನೀಡಲಿದೆ. ಆದರೆ ಆಡಳಿತ ಮತ್ತೆ  ಪಿಣರಾಯಿ ವಿಜಯನ್‌ ನಾಯಕತ್ವದ ಎಲ್‌ಡಿಎಫ್ ಕೈಸೇರಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಇನ್ನು ತಮಿಳುನಾಡು, ಅಸ್ಸಾಂ ಹಾಗೂ ಪುದುಚೇರಿ ಕುತೂಹಲಕ್ಕೂ ಚುನಾವಣೋತ್ತರ ಸಮೀಕ್ಷೆ ಉತ್ತರ ನೀಡಿದೆ. 

"

ಪಶ್ಚಿಮ ಬಂಗಾಳ:
ಟೈಮ್ಸ್ ನೌ ಹಾಗೂ ಸಿವೋಟರ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. 292 ಸ್ಥಾನಗಳ ಪೈಕಿ 158 ಸ್ಥಾನ ಟಿಎಂಸಿ ಪಾಲಾಗಲಿದೆ. ದೀದಿ ಅಧಿಕಾರ ಹಿಡಿದರೂ ಕಳೆದೆ ಬಾರಿಗಿಂತ 50 ರಿಂದ 53 ಸ್ಥಾನ ಕಳೆದುಕೊಳ್ಳಲಿದೆ ಎಂದಿದೆ. 2016ರಲ್ಲಿ ಕೇವಲ 3 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 115 ಸ್ಥಾನ ಗೆಲ್ಲಲಿದೆ ಎಂದಿದೆ. 

ಕೇರಳ:
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಕೇರಳದಲ್ಲಿ LDF ಅಧಿಕಾರ ಹಿಡಿಯಲಿದೆ. 120 ಸ್ಥಾನಗಳ ಪೈಕಿ ಪಿಣರಾಯಿ ವಿಜಯನ್ ಆಡಳಿತಾರೂಢ ಸರ್ಕಾರ 104 ಸ್ಥಾನ ಗೆಲ್ಲಲಿದೆ ಎಂದಿದೆ. 

ಕೊರೋನಾ ಅಬ್ಬರ: ಚುನಾವಣೆ ಫಲಿತಾಂಶದ ಬಳಿಕ ವಿಜಯೋತ್ಸವ ರದ್ದು!

ಅಸ್ಸಾಂ:
ಇಂಡಿಯಾ ಟುಡೆ-ಮೈ ಆಕ್ಸಿಸ್ ಸಮೀಕ್ಷೆ ಪ್ರಕಾರ ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ. ಕನಿಷ್ಠ 75 ರಿಂದ 85 ಸ್ಥಾನ ಗೆಲ್ಲಲಿದೆ ಎಂದಿದೆ. ವಿರೋಧ ಪಕ್ಷಗಳ ಮೈತ್ರಿ ಕೂಟ 40 ರಿಂದ 50 ಸ್ಥಾನ ಗೆಲ್ಲಲಿದೆ ಎಂದಿದೆ. 

ತಮಿಳುನಾಡು:
ಸ್ಟಾಲಿನ್ ನೇತೃತ್ವದ DMK ತಮಿಳುನಾಡಿನಲ್ಲಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳುತ್ತಿದೆ.  140-173 ಸ್ಥಾನ ಡಿಎಂಕ ಪಾಲಾಗಲಿದೆ ಎನ್ನುತ್ತಿದೆ ವರದಿ.  ಎಐಎಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು 58 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಒಟ್ಟು 234 ಸ್ಥಾನಗಳಿಗೆ ತಮಿಳುನಾಡಿನಲ್ಲಿ ಚುನಾವಣೆ ನಡೆದಿತ್ತು

ಪುದುಚೇರಿ:
ಟೈಮ್ಸ್ ನೌ ಸಿವೋಟರ್ ಸಮೀಕ್ಷೆ ಪ್ರಕಾರ NDA 18 ಸ್ಥಾನ ಗೆಲ್ಲಲಿದೆ. ಯುಪಿಎ 12 ಸ್ಥಾನ ಗೆಲ್ಲಲಿದೆ ಎಂದಿದೆ.