ಪಶ್ಚಿಮ ಬಂಗಾಳದಲ್ಲಿ ಶೇ.79.79, ಅಸ್ಸಾಂನಲ್ಲಿ ಶೇ.72 ರಷ್ಟು ಮತದಾನ; ಹೇಗೆ ಸಾಧ್ಯ ಎಂದ ದೀದಿ!
ಪಂಚ ರಾಜ್ಯ ಚುನಾವಣೆಗಳ ಪೈಕಿ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳ ಮೊದಲ ಹಂತದ ಮತದಾನ ಇಂದು ನಡೆದಿದೆ. ಬೆಳಗ್ಗೆಯಿಂದ ಬಿರುಸಿನ ಮತದಾನ ನಡೆದಿದ್ದು ಇದೀಗ ಶೇಕಡಾವರು ಮತದಾನದ ವಿವರ ಬಹಿರಂಗವಾಗಿದೆ. ಆದರೆ ಬಂಗಾಳ ಸಿಎಂ ಮಮತಾ ಇದು ಹೇಗೆ ಸಾಧ್ಯ? ಎಂದು ಆಯೋಗವನ್ನೇ ಪ್ರಶ್ನಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ನವದೆಹಲಿ(ಮಾ.27): ಜಿದ್ದಾಜಿದ್ದಿನ ಕಣವಾಗಿರುವ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯದ ಮೊದಲ ಹಂತದ ಚುನಾವಣೆ ನಡೆದಿದೆ. ಪಶ್ಚಿಮ ಬಂಗಾಳದ 8 ಹಂತದ ಮತದಾನದ ಪೈಕಿ ಇಂದು(ಮಾ.27) ಮೊದಲ ಹಂತದ ಮತದಾನ ನಡೆದಿದೆ. ಮೊದಲ ಹಂತದ 30 ಸ್ಥಾನಗಳಿಗೆ ಮತದಾನ ನಡೆದಿದ್ದು, ಶೇಕಡಾ 79.79 ಮತದಾನ ದಾಖಲಾಗಿದೆ ಎಂದು ಆಯೋಗ ಹೇಳಿದೆ.
ಮೋದಿ ಬಾಂಗ್ಲಾ ಪ್ರವಾಸಕ್ಕೆ ಕೆರಳಿದ ಮಮತಾ; ಆಯೋಗಕ್ಕೆ ದೂರು ನೀಡಲು ಮುಂದಾದ ಸಿಎಂ!
ಅಸ್ಸಾಂ ರಾಜ್ಯದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದೆ. ಇದರಲ್ಲಿ ಮೊದಲ ಹಂತದ 47 ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ. ಅಸ್ಸಾಂನಲ್ಲಿಂದು ಶೇಕಡಾ 72.14 ರಷ್ಟು ಮತದಾನವಾಗಿದೆ. ಕೊರೋನಾ ನಡುವೆ ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಯಾವುದೇ ಅಹಿತರ ಘಟನೆ ನಡೆಯದಂತೆ ಆಯೋಗ ಮುನ್ನಚ್ಚೆರಿಕ ಕ್ರಮ ಕೈಗೊಂಡು ಮತದಾನ ನಡೆಯಲಾಗಿತ್ತು.
ಪಶ್ಚಿಮ ಬಂಗಾಳದಲ್ಲಿ ಶೇಕಡವಾರು ಮತದಾನ ಕಡಿಮೆಯಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. 5 ನಿಮಿಷದಲ್ಲಿ ಶೇಕಡವಾರು ಮತದಾನ ಅರ್ಧಕ್ಕೆ ಕುಸಿದಿದ್ದು ಹೇಗೆ? ಎಂದು ತೃಣಮೂಲ ಕಾಂಗ್ರೆಸ್, ಚುನಾವಣಾ ಆಯೋಗವನ್ನು ಪ್ರಶ್ನಿಸಿದೆ. ಈ ಕುರಿತು ತಕ್ಷಣವೇ ಗಮನಹರಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದರ ನಡುವೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಭರ್ಜರಿಯಾಗಿ ನಡೆಯುತ್ತಿದೆ. ಬಿಜೆಪಿ ನಾಯಕ ಸುವೆಂದು ಅಧಿಕಾರಿ ಸಹೋದರ ಸೌಮೆಂದು ಅಧಿಕಾರಿ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರಮ ಮೋದಿ ಚುನಾವಣಾ ನೀತಿ ಸಂಹಿತ ಉಲ್ಲಂಘಿಸಿದ್ದಾರೆ. ಬಾಂಗ್ಲಾದೇಶ ಪ್ರವಾಸದಲ್ಲಿ ಬಂಗಾಳ ಕುರಿತು ಭಾಷಣ ಮಾಡಿ ಚುನಾವಣೆ ನೀತಿ ಉಲ್ಲಂಘಿಸಿದ್ದಾರೆ. ಈ ಕುರಿತು ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.