ಪ್ಯಾರಿಸ್(ಜು.28):  ಫ್ರಾನ್ಸ್‌ನ ಡಸಾಲ್ಟ್‌ ಕಂಪನಿಯಿಂದ 36 ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ ಮಾಡಿಕೊಂಡಿದ್ದ ಒಪ್ಪಂದದನ್ವಯ ಮೊದಲ ಕಂತಿನಲ್ಲಿ ಭಾರತಕ್ಕೆ ಆಗಮಿಸಲಿರುವ ಐದು ರಫೇಲ್‌ ವಿಮಾನಗಳು ಸೋಮವಾರ ಫ್ರಾನ್ಸ್‌ನಿಂದ ಟೇಕಾಫ್‌ ಆಗಿವೆ. ಭಾರತ-ಚೀನಾ ಗಡಿ ಸಂಘರ್ಷದ ಸಮಯದಲ್ಲೇ ಈ ಯುದ್ಧವಿಮಾನಗಳು ಭಾರತಕ್ಕೆ ಆಗಮಿಸುತ್ತಿರುವುದು ಕುತೂಹಲ ಮೂಡಿಸಿದೆ.

ಭಾರತೀಯ ವಾಯುಪಡೆಯ ಪೈಲಟ್‌ಗಳೇ ಈ ವಿಮಾನಗಳನ್ನು ಫ್ರಾನ್ಸ್‌ನ ಮೆರಿನಿಯಾಕ್‌ ವಾಯುನೆಲೆಯಿಂದ ಹರ್ಯಾಣದ ಅಂಬಾಲಾದಲ್ಲಿರುವ ವಾಯುನೆಲೆಗೆ ಹಾರಿಸಿಕೊಂಡು ಬರುತ್ತಿದ್ದಾರೆ. ಒಟ್ಟು 7000 ಕಿ.ಮೀ.ಗಳ ಪ್ರಯಾಣ ಇದಾಗಿದ್ದು, ಯುಎಇಯಲ್ಲಿ ಒಮ್ಮೆ ಮಾತ್ರ ಈ ವಿಮಾನಗಳು ಕೆಳಗಿಳಿದು, ಮತ್ತೆ ಭಾರತದತ್ತ ಹಾರಲಿವೆ. ಇದರ ಹೊರತಾಗಿ ಆಕಾಶದಲ್ಲೇ ಈ ವಿಮಾನಗಳಿಗೆ ಇಂಧನ ತುಂಬಿಸಲಾಗುತ್ತದೆ. ಬುಧವಾರ ವಿಮಾನಗಳು ಅಂಬಾಲಾಕ್ಕೆ ಬಂದು ತಲುಪಲಿವೆ.

ಫ್ರಾನ್ಸ್‌ ವಾಯುನೆಲೆಯಿಂದ ಭಾರತದತ್ತ ರಫೇಲ್ ಹಾರಾಟ!

ದಕ್ಷಿಣ ಫ್ರಾನ್ಸ್‌ನ ಮೆರಿನಿಯಾಕ್‌ನಿಂದ ರಫೇಲ್‌ ವಿಮಾನಗಳು ಟೇಕಾಫ್‌ ಆಗುವುದನ್ನು ಫ್ರಾನ್ಸ್‌ನಲ್ಲಿರುವ ಭಾರತೀಯ ದೂತಾವಾಸ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿದೆ. ಈ ವಿಮಾನಗಳು ಬುಧವಾರ ಮಧ್ಯಾಹ್ನವೇ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿದ್ದು, ಆ.20ರಂದು ಅಧಿಕೃತ ಸೇರ್ಪಡೆಯ ಸಮಾರಂಭ ನಡೆಯಲಿದೆ. ಮೂಲಗಳ ಪ್ರಕಾರ, ರಫೇಲ್‌ ವಿಮಾನಗಳನ್ನು ಚೀನಾದ ಜೊತೆಗೆ ಸಂಘರ್ಷ ನಡೆಯುತ್ತಿರುವ ಲಡಾಖ್‌ ಸೆಕ್ಟರ್‌ನಲ್ಲೇ ನಿಯೋಜಿಸಲಾಗುತ್ತದೆ.

ನಾಲ್ಕು ವರ್ಷಗಳ ಹಿಂದೆ ಡಸಾಲ್ಟ್‌ ಕಂಪನಿಯಿಂದ ಸುಮಾರು 59 ಸಾವಿರ ಕೋಟಿ ರು. ವೆಚ್ಚದಲ್ಲಿ 36 ರಫೇಲ್‌ ವಿಮಾನಗಳನ್ನು ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ 10 ವಿಮಾನಗಳು ಹಸ್ತಾಂತರವಾಗಿದ್ದು, ಆ ಪೈಕಿ 5 ತರಬೇತಿಗೆಂದು ಫ್ರಾನ್ಸ್‌ನಲ್ಲೇ ಇರಲಿವೆ. 2021ರ ಅಂತ್ಯದೊಳಗೆ ಎಲ್ಲ 36 ವಿಮಾನಗಳೂ ಭಾರತದ ಬಳಕೆಗೆ ಸಿಗಲಿವೆ.

----

ರಫೇಲ್‌ ವಿಶೇಷಗಳು

- ಜಗತ್ತಿನ ಅತ್ಯಾಧುನಿಕ ಯುದ್ಧವಿಮಾನಗಳ ಪೈಕಿ ಫ್ರಾನ್ಸ್‌ನ ರಫೇಲ್‌ ಕೂಡ ಒಂದಾಗಿದ್ದು, ಸಾಕಷ್ಟುವಿಧದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ.

- ಯುರೋಪ್‌ನಲ್ಲಿ ಏರ್‌-ಟು-ಏರ್‌ ಮತ್ತು ಸ್ಕಾಲ್ಪ್‌ ಕ್ರೂಸ್‌ ಮಿಸೈಲ್‌ಗಳನ್ನು ಈ ವಿಮಾನಗಳಿಗೆ ಅಳವಡಿಸಿ ಬಳಕೆ ಮಾಡಲಾಗುತ್ತದೆ.

- ಈಗ ಭಾರತಕ್ಕೆ ಬರುತ್ತಿರುವ 5 ರಫೇಲ್‌ಗಳ ಪೈಕಿ ಮೂರು ಸಿಂಗಲ್‌ ಸೀಟರ್‌ ಮತ್ತು ಎರಡು ಡಬಲ್‌ ಸೀಟರ್‌ ವಿಮಾನಗಳಾಗಿವೆ.

- ಭಾರತಕ್ಕಾಗಿ ಡಸಾಲ್ಟ್‌ ತಯಾರಿಸಿರುವ ರಫೇಲ್‌ನಲ್ಲಿ ಸಾಕಷ್ಟುಬದಲಾವಣೆ ಮಾಡಲಾಗಿದ್ದು, ಇಸ್ರೇಲಿ ಹೆಲ್ಮೆಟ್‌ ಮೌಂಟೆಡ್‌ ಡಿಸ್‌ಪ್ಲೇ, ರಾಡಾರ್‌ ವಾರ್ನಿಂಗ್‌, ಲೋ ಬ್ಯಾಂಡ್‌ ಜಾಮರ್‌, 10 ತಾಸುಗಳ ವಿಮಾನ ಹಾರಾಟ ಡೇಟಾ ಮುದ್ರಣ, ಇನ್‌ಫ್ರಾರೆಡ್‌ ಸರ್ಚಿಂಗ್‌ ಮತ್ತು ಟ್ರಾಕಿಂಗ್‌ ಸಿಸ್ಟಮ್‌ಗಳಿವೆ.

- ಹರ್ಯಾಣದ ಅಂಬಾಲಾದ ಜೊತೆಗೆ ಪಶ್ಚಿಮ ಬಂಗಾಳದ ಹಾಸಿಮಾರಾದಲ್ಲೂ ರಫೇಲ್‌ಗಳನ್ನು ನಿಯೋಜಿಸಲಾಗುತ್ತದೆ. ಈ ವಿಮಾನಗಳನ್ನು ನಿಲ್ಲಿಸುವ ಶೆಲ್ಟರ್‌, ಹ್ಯಾಂಗರ್‌ ಮತ್ತು ನಿರ್ವಹಣೆ ಸೌಕರ್ಯಗಳಿಗಾಗಿ ಭಾರತೀಯ ವಾಯುಪಡೆ ಸುಮಾರು 400 ಕೋಟಿ ರು. ಖರ್ಚು ಮಾಡಿದೆ.

- ಭಾರತ ಖರೀದಿಸಿರುವ 36 ರಫೇಲ್‌ಗಳ ಪೈಕಿ 30 ವಿಮಾನಗಳು ಫೈಟರ್‌ ಜೆಟ್‌ಗಳಾಗಿದ್ದು, 6 ತರಬೇತಿ ವಿಮಾನಗಳಾಗಿವೆ. ತರಬೇತಿ ವಿಮಾನಗಳು 2 ಸೀಟರ್‌ ಮತ್ತು ಯುದ್ಧ ವಿಮಾನಗಳು 1 ಸೀಟರ್‌ ಆಗಿರುತ್ತವೆ.