* ಮಹಾರಾಷ್ಟ್ರದ ಥಾಣೆಯಲ್ಲಿ ಹೃದಯ ವಿದ್ರಾವಕ ಪ್ರಕರಣ* 5 ತಿಂಗಳ ಹೆಣ್ಣು ಮಗುವೊಂದನ್ನು ಕೊಂದ ಹೆತ್ತವ್ವ* ವಿಚಾರಣೆ ವೇಳೆ ಬಾಯ್ಬಿಟ್ಟ ಮಹಿಳೆ
ಥಾಣೆ(ಡಿ.26): ಮಹಾರಾಷ್ಟ್ರದ ಥಾಣೆಯಲ್ಲಿ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ 5 ತಿಂಗಳ ಹೆಣ್ಣು ಮಗುವೊಂದನ್ನು ಜನ್ಮ ನೀಡಿದ ತಾಯಿಯೇ ಕೊಂದಿದ್ದಾಳೆ. ಆರಂಭದಲ್ಲಿ ಈ ರಕ್ಕಸಿ ತಾಯಿ ಕಂದನ ಸಾವಿನ ಬಗ್ಗೆ ಕಟ್ಟುಕತೆ ಹೇಳಿದ್ದಳು. ಆದರೆ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಪೋಸ್ಟ್‌ಮಾರ್ಟಂ ವರದಿ ತರಿಸಿಕೊಂಡಾಗ ಇಡೀ ರಹಸ್ಯ ಬಯಲಾಗಿದೆ. ಇದಾದ ಬಳಿಕ ಪೊಲೀಸರು ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡು ತನ್ನ ಕರುಳ ಕುಡಿಯನ್ನು ಕೊಂದಿರುವ ವಿಚಾರವನ್ನು ತಾಯಿ ಒಪ್ಪಿಕೊಂಡಿದ್ದಾಳೆ.
ನೀರು ತುಂಬಿದ ಡ್ರಮ್‌ನಲ್ಲಿ ಕಂದನ ದೇಹ
ವಾಸ್ತವವಾಗಿ, ಈ ಪ್ರಕರಣ ಥಾಣೆ ಜಿಲ್ಲೆಯ ಕಲ್ವಾ ಪ್ರದೇಶದಲ್ಲಿ ನಡೆದಿದೆ. ಅಲ್ಲಿ ನೀರು ತುಂಬಿದ ಡ್ರಮ್‌ನಿಂದ 5 ತಿಂಗಳ ಹೆಣ್ಣು ಮಗುವಿನ ಶವ ಪತ್ತೆಯಾಗಿದೆ. ಅದೇ ವೇಳೆ ಆರೋಪಿ ಮಹಿಳೆ ತನ್ನ ಮಗು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆಕೆಯನ್ನು ಹುಡುಕಲು ಪ್ರಾರಂಭಿಸಿದಾಗ, ಕಂದನ ಮೃತದೇಹ ನೆರೆಮನೆಯ ನೀರಿನ ಡ್ರಮ್‌ನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪೊಲೀಸರು ಆಳವಾದ ತನಿಖೆ ಆರಂಭಿಸಿದಾಗ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿಲ್ಲ. ಬದಲಾಗಿ, ತಾಯಿಯೇ ಕೊಲೆ ಮಾಡಿರುವ ವಿಚಾರ ಬಯಲಾಗಿದೆ.
ಪೊಲೀಸರಿಗೆ ವಿಭಿನ್ನ ಕತೆ ಹೇಳಿದ ತಾಯಿ
ಪೊಲೀಸರು ವಿಚಾರಣೆ ನಡೆಸಿದಾಗ ಮಹಿಳೆ ಪದೇ ಪದೇ ತನ್ನ ಹೇಳಿಕೆಯನ್ನು ಬದಲಾಯಿಸುತ್ತಿದ್ದಳು ಎಂಬುವುದು ಉಲ್ಲೇಖನೀಯ. ಇದಾದ ನಂತರ ಪೊಲೀಸರಿಗೆ ಅನುಮಾನ ಬಲವಾಗಿದೆ. ಹೀಗಾಗಿ ತನಿಖೆ ಮತ್ತಷ್ಟು ಕಠಿಣವಾಗಿಸಿದಾಗ ಮಹಿಳೆ ಇಡೀ ಕಥೆಯನ್ನು ಬಾಯ್ಬಿಟ್ಟಿದ್ದಾಳೆ. ಮಗುವಿಗೆ ಪದೇ ಪದೇ ಕೆಮ್ಮು ಬರುತ್ತಿತ್ತು ಎಂದು ಮಹಿಳೆ ಹೇಳಿದ್ದಾಳೆ. ನಂತರ ಮಗುವಿಗೆ ಕೆಮ್ಮಿನ ಔಷಧಿಯನ್ನು ನೀಡಲಾಗಿದೆ, ಆದರೆ ಮಿತಿಮೀರಿದ ಸೇವನೆಯಿಂದ ಮಗು ಸಾವನ್ನಪ್ಪಿದೆ. ಮಗು ಉಸಿರಾಟ ನಿಲ್ಲಿಸಿದ್ದರಿಂದ ಭಯಗೊಂಡು ತಾನು ಮಗುವಿನ ಶವವನ್ನು ನೆರೆಮನೆಯವರ ನೀರಿನ ಡ್ರಮ್‌ಗೆ ಎಸೆದಿದ್ದೇನೆ ಎಂದು ತಿಳಿಸಿದ್ದಾಳೆ.
ತಾಯಿ ಸುಳ್ಳು ಕತೆ ಹೇಳಿದಳಾ ಎಂಬ ಅನುಮಾನ'
ಅದೇ ಸಮಯದಲ್ಲಿ, ಮಹಿಳೆಯನ್ನು ಇನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಅವಿನಾಶ್ ಅಂಬೂರೆ ತಿಳಿಸಿದ್ದಾರೆ. ಆಕೆ ಸುಳ್ಳು ಹೇಳುತ್ತಿದ್ದಾರೋ, ಅತಿಯಾದ ಔಷಧಿ ಸೇವನೆಯಿಂದ ಮಗು ಸಾವನ್ನಪ್ಪಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಕಂದನನ್ನು ಕೊಲ್ಲಲಾಗಿದೆಯೇ ಎಂಬುವುದು ಪಯತ್ತೆ ಹಚ್ಚುತ್ತಿದ್ದೇವೆ, ಸದ್ಯ ಇದು ತನಿಖೆಯ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
