ಚಿರತೆ ಹಿಡಿದು ಕೊಂದು ಅಡುಗೆ ಮಾಡಿ ತಿಂದರು..! ಐವರು ಅರೆಸ್ಟ್
ಚಿರತೆ ಮನುಷ್ಯನನ್ನು ತಿಂದು ತೇಗಿದ ಸುದ್ದಿ ಕೇಳಿದ್ದೇವೆ. ಆದರೆ, ಚಿರತೆಯನ್ನೇ ಕೊಂದು ತಿಂದಿದ್ದಾರೆ ಈ ಕಿರಾತಕರು. ಅದಕ್ಕೆ ಕಂಬಿಯನ್ನೂ ಎಣಿಸುತ್ತಿದ್ದಾರೆ ಬಿಡಿ.
ಗರ್ಭಿಣಿ ಆನೆಗೆ ಸ್ಫೋಟಕವಿಟ್ಟು ಕೊಂದ ಅಮಾನವೀಯ ಘಟನೆ ನಡೆದ ಕೇರಳದಲ್ಲಿ ಈಗ ಮತ್ತೊಂದು ಕ್ರೂರ ಘಟನೆ ನಡೆದಿದೆ. ಚಿರತೆಯೊಂದನ್ನು ಹಿಡಿದು ತಂದು, ಕೊಂದು ಮಾಂಸ ಮಾಡಿ ಬೇಯಿಸಿ ಅಡುಗೆ ಮಾಡಿ ತಿಂದಿರುವ ಘಟನೆ ನಡೆದಿದೆ.
ಚಿಕನ್, ಫಿಶ್ ಬೇಯಿಸಿ ತಿನ್ನುವಂತೆಯೇ ಚಿರತೆಯನ್ನೂ ಮಾಂಸ ಮಾಡಿ ಬೇಯಿಸಿ ತಿನ್ನಲಾಗಿದೆ. ಕೇರಳದ ಇಡುಕ್ಕಿಯ ಮಣ್‌ಕುಳಂ ಅರಣ್ಯ ವಿಭಾಗದಲ್ಲಿ ಈ ಘಟನೆ ನಡೆದಿದೆ. ಚಿರತೆಯ ಮಾಂಸವನ್ನು ತಿಂದಿರುವ ಘಟನೆ ಕೇರಳದಲ್ಲಿ ನಡೆದಿದ್ದು ಇದೇ ಮೊದಲ ಬಾರಿ ಎಂದಿದ್ದಾರೆ ಪೊಲೀಸರು.
ಆನೆಗೆ ಬೆಂಕಿ ಇಟ್ಟ ಕಿರಾತಕರು, ನರಳಿ ಪ್ರಾಣಬಿಟ್ಟ ಆನೆ ಬಿಗಿದಪ್ಪಿ ಕಣ್ಣೀರಿಟ್ಟ ಅರಣ್ಯ ಸಿಬ್ಬಂದಿ!
ಘಟನೆಗೆ ಸಂಬಂಧಿಸಿ ಕೇರಳ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಮಣ್‌ಕುಳಂ ನಿವಾಸಿಗಳಾದ ಕೊಲ್ಲಿಕೊಲವಿಲ್ ವಿನೋದ್ ಪಿಕೆ(45), ಬಸಿಲ್ ಗಾರ್ಡನ್ ವಿಪಿ ಕುರಿಯಾಕೋಸ್(74), ಚೆಂಪೆನ್ಪುರಿಯಡತ್ತಿಲ್ ಸಿಎಸ್ ಬಿನು(50), ಮಲಯಿಲ್ ಸಲಿ ಕುಂಞಪ್ಪನ್(54), ವಡಕ್ಕುಂಚಲಿಲ್ ವಿನ್ಸೆಂಟ್(50) ಬಂಧಿತರು.
ಮುಖ್ಯ ಆರೋಪಿ ವಿನೋದ್ ಮಣ್‌ಕುಳಂ ಮುನಿಪಾರ ಅರಣ್ಯ ಸಮೀಪ ಖಾಸಗಿ ಜಾಗದಲ್ಲಿ 100 ಮೀಟರ್ ವಿಸ್ತಾರದಲ್ಲಿ ಟ್ರಾಪ್ ಸಿದ್ಧಪಡಿಸಿದ್ದನು. ಬುಧವಾರ 6 ವರ್ಷದ ಗಂಡು ಚಿರತೆ ಈ ಬಲೆಗೆ ಬಿದ್ದಿತ್ತು. ವಿನೋದ್ ಕುರಿಯಾಕೋಸ್ ನೆರವಿನ ಮೂಲಕ ಬಲೆ ಹಾಕಿದ್ದನು.
ಮೀನಿನ ಬಲೆಗೆ ಸಿಲುಕಿ ಪರದಾಡಿದ ಕಾಡಾನೆ
ಚಿರತೆ ಬಲೆಗೆ ಬಿದ್ದ ಮೇಲೆ ಅದನ್ನು ವಿನೋದ್ ಮನೆಗೆ ಒಯ್ಯಲಾಗಿತ್ತು. ಅಲ್ಲಿಯೇ ಅದನ್ನು ಕೊಲ್ಲಲಾಗಿತ್ತು. ನಂತರ ಚಿರತೆ ಮಾಂಸವನ್ನು ಬೇಯಿಸಿ ಅಡುಗೆ ಮಾಡಿದ್ದರು. ಚಿರತೆಯ ಚರ್ಮ ಮತ್ತು ಉಗುರುಗಳನ್ನು ಮನೆಯೊಳಗೆಯೇ ತೆಗೆದಿಡಲಾಗಿತ್ತು. ಘಟನೆ ಬಗ್ಗೆ ನಮಗೆ ಮಾಹಿತಿ ಸಿಕ್ಕಿತ್ತು ಎಂದಿದ್ದಾರೆ ಮಣ್‌ಕುಳಂ ವಿಭಾಗೀಯ ಅರಣ್ಯಾಧಿಕಾರಿ ಪಿಜೆ ಸುಹೈಬ್.
ಮಣ್‌ಕುಳಂ ರೇಂಜ್ ಆಫೀಸರ್ ವಿಬಿ ಉದಯ ಸೂರ್ಯನ್ ಹಾಗೂ ತಂಡ ಎಲ್ಲ ಆರೋಪಿಗಳನ್ನು ಮಾಹಿತಿ ಸಿಕ್ಕ 4 ಗಂಟೆಗಳೊಳಗಾಗಿ ಬಂಧಿಸಿದ್ದಾರೆ. ವಿನೋದ್ ಮನೆಯಿಂದ 10 ಕೆಜಿ ಚಿರತೆ ಮಾಂಸವೂ ಲಭಿಸಿದೆ ಎಂದಿದ್ದಾರೆ.
ಶ್ರೀಕುಟ್ಟಿ ಫುಲ್ ಹ್ಯಾಪಿ: ಪುಟ್ಟ ಆನೆ ಮರಿಯ ಬರ್ತ್‌ಡೇ ಹೀಗಿತ್ತು ನೋಡಿ
ಆರೋಪಿಗಳಿಗೆ ಕಾಡುಪ್ರಾಣಿಗಳನ್ನು ಬೇಟೆಯಾಡುವ ಅಭ್ಯಾಸ ಮೊದಲನಿಂದಲೂ ಇತ್ತು ಎಂದು ತಿಳಿದುಬಂದಿದೆ. ಬೇಟೆಯಾಡುವ ಹವ್ಯಾಸವಿದ್ದ ಅವರು ಅದಕ್ಕೂ ಮುನ್ನ ಕಾಡುಹಂದಿಯನ್ನು ಬೇಟೆಯಾಡಿ ಸೇವಿಸಿದ್ದರು. ಆದರೆ ಇದೇ ಮೊದಲ ಬಾರಿ ಚಿರತೆಯನ್ನು ಅಡುಗೆ ಮಾಡಿ ಸೇವಿಸಿದ್ದಾಗಿ ತಿಳಿದುಬಂದಿದೆ.
ಅಧಿಕಾರಿಯ ಪ್ರಕಾರ, ವಿನೋದ್ ಚಿರತೆ ಬೇಟೆ ಮಾಡಿದ್ದು ಇತರ ಆರೋಪಿಗಳು ಮಾಂಸವನ್ನು ತಿಂದಿದ್ದಾರೆ. ಆರೋಪಿಗಳು ಪ್ರಾಣಿ ವ್ಯಾಪಾರದಲ್ಲಿ ತೊಡಗಿದ್ದಾರೆಯೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಚಿರತೆಯನ್ನು ಭಾರತೀಯ ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1972 ರ ಲಿಸ್ಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಅಪರಾಧ ಸಾಬೀತಾದರೆ ಆರೋಪಿಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ