ಐದು ಕೆಜಿ ಅಕ್ಕಿ ನಿಮ್ಮ ಭವಿಷ್ಯ ಬದಲಾಯಿಸೋದಿಲ್ಲ, ರಾಯ್‌ಬರೇಲಿಯಲ್ಲಿ ಪ್ರಿಯಾಂಕಾ ವಾದ್ರಾ ಮಾತು
ಪ್ರಧಾನಿ ಮೋದಿ ಸರ್ಕಾರ ಗರೀಬ್ ಕಲ್ಯಾಣ ಯೋಜನೆಯಲ್ಲಿ ಪ್ರತಿ ಬಡವನ ಮನೆಗೆ 5 ಕೆಜಿ ರೇಷನ್‌ಅನ್ನು ತಲುಪಿಸುವ ವ್ಯವಸ್ಥೆ ಮಾಡುತ್ತಿದೆ. ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ತಾನೂ ಕೂಡ 5 ಕೆಜಿ ಅಕ್ಕಿಯನ್ನು ನೀಡುವುದಾಗಿ ಘೋಷಣೆ ಮಾಡಿತ್ತು.
ನವದೆಹಲಿ (ಮೇ.9): ಕಳೆದ ಬಾರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ಮಾಡಿತ್ತು. ಪ್ರತಿ ಮನೆಗೆ ಇಂತಿಷ್ಟು ಕೆಜಿ ಅಕ್ಕಿ ಅಥವಾ ಧಾನ್ಯಗಳನ್ನು ನೀಡುವ ಯೋಜನೆ ಅದಾಗಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಆದರೆ, ಚುನಾವಣೆ ಮುಗಿದ ಬಳಿಕ ಅದು ಐದು ಕೆಜಿಗೆ ಇಳಿದು, ಈಗ ಅಕ್ಕಿಯ ಬದಲಾಗಿ ಜನರಿಗೆ ಹಣ ಸಂದಾಯವಾಗುತ್ತಿದೆ. ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ್ ಯೋಜನೆಯ ಭಾಗವಾಗಿ 5 ಕೆಜಿ ಅಕ್ಕಿಯನ್ನು ನೀಡುತ್ತಿದೆ. ಇದರ ನಡುವೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ನೀಡಿರುವ ಹೇಳಿಕೆಯೀಗ ಕಾಂಗ್ರೆಸ್‌ನ ದ್ವಂದ್ವ ನೀತಿಯನ್ನೇ ಎತ್ತಿ ತೋರಿಸಿದೆ. ಸಿದ್ಧರಾಮಯ್ಯರನ್ನು ಅನ್ನರಾಮಯ್ಯ ಎಂದು ಕರೆಯುವ ಯೋಜನೆಯನ್ನೇ ಪ್ರಿಯಾಂಕಾ ವಾದ್ರಾ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಟೀಕೆ ಮಾಡಿದ್ದಾರೆ. ಇದನ್ನು ಬಿಜೆಪಿ ಅಸ್ತ್ರವಾಗಿ ಬಳಸಿಕೊಂಡಿದೆ.
ಗುರುವಾರ ರಾಯ್‌ಬರೇಲಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ಸರ್ಕಾರ ಕೊಡುವ 5 ಕೆಜಿ ಅಕ್ಕಿಯಿಂದ ನಿಮ್ಮ ಭವಿಷ್ಯ ಬದಲಾಗೋದಿಲ್ಲ ಎಂದು ಹೇಳಿದ್ದಾರೆ. ಇದರಿಂದ ನೀವು 'ಆತ್ಮನಿರ್ಭರ್' ಆಗೋದಿಲ್ಲ. ಉದ್ಯೋಗ ಮತ್ತು 5 ಕೆಜಿ ಪಡಿತರ ನಡುವೆ ನೀವು ಯಾವುದನ್ನು ಆರಿಸುತ್ತೀರಿ ಎಂದು ನಾನು ನಿಮ್ಮನ್ನು ಕೇಳಿದರೆ, ನೀವು ಖಂಡಿತವಾಗಿಯೂ ಉದ್ಯೋಗವನ್ನು ಆಯ್ಕೆ ಮಾಡುತ್ತೀರಿ. ಇದು ನಿಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತದೆ. ನೀವು ಅವಲಂಬಿತರಾಗುವ ನೀತಿಗಳನ್ನು ರೂಪಿಸುವ ರಾಜಕೀಯ ಪಕ್ಷವು 'ಆತ್ಮನಿರ್ಭರ್' ಅಲ್ಲ, ಅಂತಹ ಪಕ್ಷದ ಸಿದ್ಧಾಂತ ಸರಿಯಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ.
ಆದರೆ, ಪ್ರಿಯಾಂಕಾ ವಾದ್ರಾ ಅವರ ಹೇಳಿಕೆಗೆ ಭಿನ್ನ ಎನ್ನುವಂತೆ ಅವರದೇ ಕಾಂಗ್ರೆಸ್ ಸರ್ಕಾರ ಮಾತನಾಡುತ್ತಿದೆ. ಸಿದ್ಧರಾಮಯ್ಯ ಸರ್ಕಾರ, ಸರ್ಕಾರಕ್ಕೆ ಬಡವನ ಹಸಿವೇ ಮುಖ್ಯವಾಗವೇಕು. ಬಡವನ ಹಸಿವು ನೀಗಿಸುವ ಪಕ್ಷಕ್ಕೆ ಮತ ಹಾಕಬೇಕು ಎನ್ನುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷದ ನಾಯಕಿ, 5 ಕೆಜಿ ಅಕ್ಕಿ ನಿಮ್ಮ ಭವಿಷ್ಯ ನಿರ್ಧಾರ ಮಾಡೋದಿಲ್ಲ ಎನ್ನುವುದು ಕಾಂಗ್ರೆಸ್ ನಾಯಕರ ದ್ವಂದ್ವ ನೀತಿಗೆ ಸಾಕ್ಷಿ ಎನಿಸಿದೆ.
ಇದೇ ವೆಳೆ ಹಲವು ವಿಚಾರಗಳ ಬಗ್ಗೆ ಮಾತನಾಡಿರುವ ಪ್ರಿಯಾಂಕಾ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಾಮ ಮಂದಿರಕ್ಕೆ ಬಾಬ್ರಿ ಬೀಗ ಬೀಳಲಿದೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಮಾತನ್ನು ಟೀಕಿಸಿದ್ದು, ಇದು ಸಂಪೂರ್ಣ ಸುಳ್ಳು ಎಂದಿದ್ದಾರೆ.
ಇದರ ವಿಚಾರವಾಗಿ, ಕಾಂಗ್ರೆಸ್ ಹಲವು ಬಾರಿ ಸ್ಪಷ್ಟವಾಗಿ ಹೇಳಿದೆ. ದೇಶದ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಈ ಹಿಂದೆಯೂ ಕೋರ್ಟ್ ತೀರ್ಪಿಗೆ ಗೌರವ ನೀಡಿದ್ದೇವೆ. ಮುಂದೆಯೂ ನೀಡುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ "ಬರೆಯದ" ವಿಷಯಗಳನ್ನು ಪ್ರಧಾನಿ ಮೋದಿ ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಚುನಾವಣೆ ಮುಗಿಯುವವರೆಗೂ ಅಮೇಠಿ, ರಾಯ್‌ಬರೇಲಿ ಪ್ರಿಯಾಂಕಾ ಠಿಕಾಣಿ, ಸಹೋದರನನ್ನು ಗೆಲ್ಲಿಸಲು ಪಣ
“ಅವರು ನನಗೆ ಪ್ರಧಾನ ಮಂತ್ರಿ ಮತ್ತು ಹಿರಿಯರಾಗಿದ್ದರೂ… ನನ್ನ ಸಲಹೆ ಏನೆಂದರೆ ಅವರು ಮೊದಲು (ಕಾಂಗ್ರೆಸ್) ಪ್ರಣಾಳಿಕೆಯನ್ನು ಓದಿ ನಂತರ ಅದರ ಬಗ್ಗೆ ಪ್ರತಿಕ್ರಿಯಿಸಬೇಕು. ಅವರು ಅದನ್ನು ಓದಿಲ್ಲ. ಅವರ ಮನಸ್ಸಿಗೆ ಏನು ಬಂದರೂ ಅದನ್ನು (ಪ್ರಣಾಳಿಕೆಯಲ್ಲಿ) ಬರೆಯಲಾಗಿದೆ ಎಂದು ಹೇಳುತ್ತಾರೆ. ಅವರು ಹೇಳುತ್ತಿರುವ ಎಲ್ಲಾ ವಿಷಯಗಳನ್ನು ಪ್ರಣಾಳಿಕೆಯಲ್ಲಿ ಬರೆಯಲಾಗಿಲ್ಲ, ”ಎಂದು ಅವರು ಹೇಳಿದರು.
ಅಮೇಠಿ, ರಾಯ್‌ಬರೇಲಿಯಿಂದ ಸ್ಪರ್ಧೆ ಇಲ್ಲ? ಗಾಂಧಿ ಕುಟುಂಬದ ಭದ್ರಕೋಟೆಯಲ್ಲಿ ಕಡಿಮೆಯಾಗುತ್ತಿದೆ ಪ್ರಭಾವ!