ಇಂದು ಲೋಕಸಭೆಗೆ 4ನೇ ಹಂತದ ಚುನಾವಣೆ ನಡೆಯುತ್ತಿದ್ದು, ಎಲ್ಲೆಡೆ ಮತದಾನ ಬಿರುಸಿನಿಂದ ಸಾಗಿದೆ.  ಈ ಹಂತದಲ್ಲಿ 10 ರಾಜ್ಯಗಳ 96 ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಆಂಧ್ರಪ್ರದೇಶ ವಿಧಾನಸಭೆಯ ಎಲ್ಲಾ 175 ಕ್ಷೇತ್ರ ಮತ್ತು ಒಡಿಶಾ ವಿಧಾನಸಭೆಯ 28 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ನವದೆಹಲಿ: ಇಂದು ಲೋಕಸಭೆಗೆ 4ನೇ ಹಂತದ ಚುನಾವಣೆ ನಡೆಯುತ್ತಿದ್ದು, ಎಲ್ಲೆಡೆ ಮತದಾನ ಬಿರುಸಿನಿಂದ ಸಾಗಿದೆ. ಈ ಹಂತದಲ್ಲಿ 10 ರಾಜ್ಯಗಳ 96 ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಆಂಧ್ರಪ್ರದೇಶ ವಿಧಾನಸಭೆಯ ಎಲ್ಲಾ 175 ಕ್ಷೇತ್ರ ಮತ್ತು ಒಡಿಶಾ ವಿಧಾನಸಭೆಯ 28 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯುತ್ತಿದೆ. ಈ ಹಂತದೊಂದಿಗೆ ಲೋಕಸಭೆಯ 543 ಸ್ಥಾನಗಳ ಪೈಕಿ 283 ಸ್ಥಾನಗಳಿಗೆ ಚುನಾವಣೆ ಪೂರ್ಣಗೊಳ್ಳಲಿದೆ.

ಪ್ರಮುಖ ಅಭ್ಯರ್ಥಿಗಳು:

ಕೇಂದ್ರ ಸಚಿವರಾದ ನಿತ್ಯಾನಂದ ರಾಯ್‌, ಗಿರಿರಾಜ್‌ ಸಿಂಗ್‌, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ಟಿಎಂಸಿಯ ಮಹುವಾ ಮೊಯಿತ್ರಾ, ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್‌, ಯೂಸುಫ್‌ ಪಠಾಣ್‌, ನಟ ಶತ್ರುಘ್ನ ಸಿನ್ಹಾ, ಕಾಂಗ್ರೆಸ್‌ನ ಅಧೀರ್‌ ರಂಜನ್‌ ಚೌಧರಿ, ಶರ್ಮಿಳಾ, ಎಂಐಎಂನ ಅಸಾದುದ್ದಿನ್‌ ಒವೈಸಿ, ಬಿಜೆಪಿಯ ಪಂಕಜಾ ಮುಂಡೆ, ಎಸ್‌.ಎಸ್‌.ಅಹ್ಲುವಾಲಿಯಾ, ದಿಲೀಪ್‌ ಘೋಷ್‌ 4ನೇ ಹಂತದಲ್ಲಿ ಕಣಕ್ಕಿಳಿದಿರುವಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಮತದಾನಕ್ಕೆ ಸಜ್ಜಾಗಿರುವ ಅಹ್ಮದಾಬಾದ್‌ನ 80 ಶಾಲೆಗೆ ಬಾಂಬ್ ಬೆದರಿಕೆ, ರಷ್ಯಾ ಲಿಂಕ್ ಪತ್ತೆ!

ಆಂಧ್ರ, ಒಡಿಶಾ ವಿಧಾನಸಭಾ ಚುನಾವಣೆ

ಆಂಧ್ರಪ್ರದೇಶದಲ್ಲಿ 175 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ 25 ಲೋಕಸಭಾ ಕ್ಷೇತ್ರಗಳಿಗೂ ಮತದಾನ ಚುರುಕಾಗಿ ನಡೆಯುತ್ತಿದೆ. ಒಡಿಶಾದ 147 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ 4 ಹಂತಗಳಲ್ಲಿ ನಡೆಯಲಿದ್ದು, ಇಂದು ಮೊದಲನೇ ಹಂತದ ಚುನಾವಣೆ ನಡೆಯುತ್ತಿದೆ.

ಎಷ್ಟು ಜನ ಮತದಾರರು

96 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 17.47 ಕೋಟಿ ಅರ್ಹ ಮತದಾರರಿದ್ದು, ಇವರಲ್ಲಿ 8.75 ಕೋಟಿ ಪುರುಷರು, 8.71 ಕೋಟಿ ಮಹಿಳೆಯರಾಗಿದ್ದಾರೆ. 705 ಶತಾಯುಷಿಗಳೂ ಮತದಾರರ ಪಟ್ಟಿಯಲ್ಲಿದ್ದಾರೆ. 96 ಕ್ಷೇತ್ರಕ್ಕೆ ಒಟ್ಟು 1717 ಜನರು ಸ್ಪರ್ಧಿಸಿದ್ದಾರೆ.

ಕಾಶ್ಮೀರದಲ್ಲಿ ಚುನಾವಣೆ:

370ನೇ ವಿಧಿ ರದ್ದತಿ ಬಳಿಕ ಕಾಶ್ಮೀರದಲ್ಲಿ ಮೊದಲ ಬಾರಿಗೆ ಪ್ರಮುಖ ಚುನಾವಣೆ ನಡೆಯುತ್ತಿದೆ. ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಇಂದು ಮತದಾನ ನಡೆಯಲಿದ್ದು, 17.48 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅವಕಾಶ ಪಡೆದುಕೊಂಡಿದ್ದಾರೆ.