* ದೇಶದಲ್ಲಿ ಕೊರೋನಾ ಹೆಚ್ಚಳ* ಪಾಸಿಟಿವಿಟಿ ದರ ಶೇ.1.62ಕ್ಕೆ ಏರಿಕೆ* ಸಕ್ರಿಯ ಪ್ರಕರಣ 25 ಸಾವಿರಕ್ಕೆ ಹೆಚ್ಚಳ* ಸಕ್ರಿಯ ಕೇಸು 25 ಸಾವಿರ ದಾಟಿದ್ದು 3 ತಿಂಗಳಲ್ಲಿ ಇದೇ ಮೊದಲು

ನವದೆಹಲಿ(ಜೂ.07): 4ನೇ ಅಲೆ ಭೀತಿ ನಡುವೆ ದೇಶದಲ್ಲಿ ಸೋಮವಾರ 4,518 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. ಇದು ಸುಮಾರು 100 ದಿನಗಳ ಗರಿಷ್ಠ ಪ್ರಕರಣಗಳ ಸಂಖ್ಯೆಯಾಗಿದೆ. ಇದೇ ವೇಳೆ, 9 ಜನರು ಸಾವನ್ನಪ್ಪಿದ್ದಾರೆ.

ಭಾನುವಾರು 4270 ಪ್ರಕರಣ ದಾಖಲಾಗಿದ್ದವು. ಇದಕ್ಕೆ ಹೋಲಿಸಿದರೆ ಸುಮಾರು 250 ಕೇಸುಗಳ ಹೆಚ್ಚಳವಾಗಿದೆ. ಇದೇ ವೇಳೆ 2.78 ಲಕ್ಷ ಪರೀಕ್ಷೆ ನಡೆಸಲಾಗಿದ್ದು, ಭಾನುವಾರ ಶೇ.1.03 ಇದ್ದ ದೈನಂದಿನ ಪಾಸಿಟಿವಿಟಿ ದರ ಸೋಮವಾರ 1.62ಕ್ಕೆ ಏರಿದೆ. ಇದು ಆತಂಕದ ವಿಚಾರ.

ಇನ್ನು ಗುಣಮುಖರ ಸಂಖ್ಯೆ ಕಡಿಮೆ (2279) ಇರುವ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 1730ರಷ್ಟುಏರಿಕೆ ಆಗಿ 25,782ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು 25 ಸಾವಿರಕ್ಕಿಂತ ಹೆಚ್ಚಿರುವುದು 3 ತಿಂಗಳಲ್ಲಿ ಇದೇ ಮೊದಲು. ಗುಣಮುಖರ ಪ್ರಮಾಣ ಶೇ.98.73 ಇದೆ.

ಈ ನಡುವೆ ದೇಶದಲ್ಲಿ ಈವರೆಗೆ 194.12 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ.

ಸೋಂಕು ಹೆಚ್ಚಳ ಹಿನ್ನೆಲೆ: ನಿತ್ಯ 20 ಸಾವಿರ ಪರೀಕ್ಷೆಗೆ ನಿರ್ಧಾರ

ಕೋವಿಡ್‌ ನಾಲ್ಕನೇ ಅಲೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಕೊರೋನಾ ಪರೀಕ್ಷೆ ಸಂಖ್ಯೆಯನ್ನು 20 ಸಾವಿರಕ್ಕೆ ಹೆಚ್ಚಿಸಲು ಮತ್ತು ಮಾಸ್‌್ಕ ಧರಿಸುವ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.

ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ವಿಶೇಷ ಆಯುಕ್ತ ಹರೀಶ್‌ಕುಮಾರ, ನಗರದಲ್ಲಿ ನಿತ್ಯ 220ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮಾರ್ಷಲ್‌ಗಳು ಮಾಸ್‌್ಕ ಧರಿಸುವಂತೆ ಜಾಗೃತಿ ಮೂಡಿಸಲಿದ್ದಾರೆ. ಸದ್ಯ ಸರ್ಕಾರದ ನಿರ್ದೇಶನ ಅನ್ವಯ ಮಾಸ್‌್ಕ ಹಾಕದೇ ಇರುವುದಕ್ಕೆ ಯಾವುದೇ ದಂಡವನ್ನು ಪಾಲಿಕೆ ಹಾಕುತ್ತಿಲ್ಲ. ಆದರೆ ಸಾರ್ವಜನಿಕರು ನಿರ್ಲಕ್ಷ್ಯ ತೋರದೆ, ಮಾಸ್‌್ಕ ಧರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ನಗರದಲ್ಲಿ ಜನದಟ್ಟಣೆ ಪ್ರದೇಶದಲ್ಲಿ ಕೋವಿಡ್‌ ಪರೀಕ್ಷೆಗಳನ್ನು ಹೆಚ್ಚಿಸಲು ಮುಖ್ಯ ಅಯುಕ್ತರು ಸೂಚನೆ ನೀಡಿದ್ದಾರೆ. ಈಗ ದಿನಕ್ಕೆ 16 ಸಾವಿರ ಕೊರೋನಾ ಪರೀಕ್ಷೆಗಳು ನಡೆಯುತ್ತಿದ್ದು, ಇದರ ಸಂಖ್ಯೆಯನ್ನು 20 ಸಾವಿರಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಈ ಪೈಕಿ 16 ಸಾವಿರ ಬಿಬಿಎಂಪಿ, 4 ಸಾವಿರ ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಸಾರಿ, ಐಎಲ್‌ಐ ಪ್ರಕರಣಗಳನ್ನು ಪ್ರತಿ ವಲಯಗಳಲ್ಲೂ ಗುರುತಿಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.