Asianet Suvarna News Asianet Suvarna News

ದೇಶದ ಅತೀ ಶ್ರೀಮಂತ ಗಣಪನಿಗೆ ಈ ಬಾರಿ 360 ಕೋಟಿಯ ವಿಮೆ: 69 ಕೆಜಿ ಚಿನ್ನ, 336 ಕೆಜಿ ಬೆಳ್ಳಿಯ ಅಲಂಕಾರ

ದೇಶದ ಅತ್ಯಂತ ಶ್ರೀಮಂತ ಗಣೇಶ ಎಂಬ ಖ್ಯಾತಿಗೆ ಪಾತ್ರವಾಗಿರುವ ಮುಂಬೈನ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಮಂಡಲ  ಆರಾಧಿಸುವ ಗಣೇಶನನ್ನು ಇಂದು ಪೆಂಡಾಲ್‌ನಲ್ಲಿ ಕೂರಿಸಲಾಗಿದ್ದು, ಈ ಗಣೇಶನಿಗೆ ಈ ಬಾರಿ 69 ಕೆಜೆ ಚಿನ್ನ 336 ಕೆಜಿ ಬೆಳ್ಳಿಯ ಆಭರಣಗಳಿಂದ ಶೃಂಗರಿಸಲಾಗುತ್ತಿದೆ. 

360 crore insurance for the countrys richest Ganesh Idol Mumbai GSB ganesh will decorate this year with 69 kg gold, 336 kg silver akb
Author
First Published Sep 18, 2023, 3:26 PM IST

ಮುಂಬೈ: ಹಿಂದೂಗಳ ಆರಾಧ್ಯದೈವ ಗಣೇಶನ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ವಿವಿಧ ಗಣೇಶೋತ್ಸವ ಸಂಘಟನೆಗಳು ಇಂದು ಅಥವಾ ನಾಳೆ ಗಣೇಶನನ್ನು ಕೂರಿಸಿ ಹಲವು ದಿನಗಳ ಕಾಲ ಪೂಜೆ ಮಾಡುತ್ತಾರೆ. ಕೆಲವರು ಗೌರಿ ಹಬ್ಬದ  ದಿನವಾದ ಇಂದೇ ಗಣೇಶನನ್ನು ಕೂರಿಸಿದ್ದರೆ ಮತ್ತೆ ಕೆಲವರು ಗಣೇಶ ಚತುರ್ದಶಿಯಾದ ನಾಳೆ ಗಣೇಶನನ್ನು ಕೂರಿಸುತ್ತಾರೆ. ಅದೇ ರೀತಿ ದೇಶದ ಅತ್ಯಂತ ಶ್ರೀಮಂತ ಗಣೇಶ ಎಂಬ ಖ್ಯಾತಿಗೆ ಪಾತ್ರವಾಗಿರುವ ಮುಂಬೈನ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಮಂಡಲ  ಆರಾಧಿಸುವ ಗಣೇಶನನ್ನು ಇಂದು ಪೆಂಡಾಲ್‌ನಲ್ಲಿ ಕೂರಿಸಲಾಗಿದ್ದು, ಈ ಗಣೇಶನಿಗೆ ಈ ಬಾರಿ 69 ಕೆಜೆ ಚಿನ್ನ 336 ಕೆಜಿ ಬೆಳ್ಳಿಯ ಆಭರಣಗಳಿಂದ ಶೃಂಗರಿಸಲಾಗುತ್ತಿದೆ. 

ಈ ಬಗ್ಗೆ ಜಿಎಸ್‌ಬಿ  ಸೇವಾ ಮಂಡಲದ (GSB Seva Mandal) ಪ್ರತಿನಿಧಿ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ್ದು, ಈ ವರ್ಷ ಗಣೇಶನ ಸೇವೆ 36 ಕೆಜಿ ಬೆಳ್ಳಿ ಹಾಗೂ 250 ಗ್ರಾಂ ಬಂಗಾರದ ಪೆಂಡೆಂಟ್‌ ದಾನದ ರೂಪದಲ್ಲಿ ಬಂದಿದೆ. ಹೀಗಾಗಿ ಈ ಬಾರಿ ಗಣೇಶನಿಗೆ ಬಳಸುವ ಚಿನ್ನಬೆಳ್ಳಿ ಆಭರಣಗಳ ಮೌಲ್ಯ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಇದರಿಂದ ಈ ಬಾರಿ ದೇಶದ ಅತ್ಯಂತ ಶ್ರೀಮಂತ ಗಣೇಶ 69 ಕೆಜಿ ಚಿನ್ನ ಹಾಗೂ 336 ಕೆಜಿ ಬೆಳ್ಳಿಯಿಂದ ಶೃಂಗಾರಗೊಂಡು ಕಂಗೊಳಿಸಲಿದ್ದಾನೆ. 

ಗಣಪತಿ ಬಗ್ಗೆ ಪ್ರತಿಯೊಬ್ಬ ಭಕ್ತರು ತಿಳಿದಿರಬೇಕಾದ 5 ಸಂಗತಿಗಳು ಇಲ್ಲಿವೆ!

ಮುಂಬೈ (Mumbai) ಜಿಎಸ್‌ಬಿ ಸೇವಾ ಮಂಡಲದಿಂದ ನಡೆಸಲ್ಪಡುವ ಈ ಬಾರಿಯ ಗಣೇಶೋತ್ಸವಕ್ಕೆ 68 ವರ್ಷಗಳು ತುಂಬಿದ್ದು, ಈ ಬಾರಿ 69ನೇ ಗಣೇಶೋತ್ಸವ ನಡೆಯುತ್ತಿದೆ. ಈ ಬಾರಿ ಗಣೇಶನಿಗೆ 36 ಕೆಜಿ ಬೆಳ್ಳಿ ಹಾಗೂ 250 ಗ್ರಾಂ ಚಿನ್ನದ ಪದಕ ಹೆಚ್ಚುವರಿಯಾಗಿ ಸೇರಿದೆ ಎಂದು ಮಂಡಲದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ. 

ಸೆಪ್ಟೆಂಬರ್ 19 ಮತ್ತು ಸೆಪ್ಟೆಂಬರ್ 20 ರಂದು ಈ ಗಣೇಶನ ಪೆಂಡಾಲ್‌ನಲ್ಲಿ ವಿಶೇಷ 'ಹವನ' (Special Havana) ನಡೆಸಲಾಗುವುದು ಎಂದು ಪ್ರತಿನಿಧಿ ಉಲ್ಲೇಖಿಸಿದ್ದಾರೆ. ಕೆಲ ವರದಿಯ ಪ್ರಕಾರ, ಸೆಪ್ಟೆಂಬರ್ 19 ರಂದು ಆಚರಿಸಲಾಗುವ ಈ ವಿಶೇಷ ಆಚರಣೆಯು ಚಂದ್ರಯಾನ -3 ಮಿಷನ್ ಯಶಸ್ವಿಗಾಗಿ ಗಣೇಶನಿಗೆ ಧನ್ಯವಾದ ಹೇಳುವುದಕ್ಕೆ ಹಾಗೂ  ಮುಂದಿನ ದಿನದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ನಿರ್ಮಾಣ ಮತ್ತು ಉದ್ಘಾಟನೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುವುದಕ್ಕೆ ಈ ವಿಶೇಷ ಹವನ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಗಣೇಶನಿಗೆ ಜಿಎಸ್‌ಬಿ ಮಂಡಲವೂ 360.45 ಕೋಟಿ ಮೊತ್ತದ ವಿಮೆ ಮಾಡಿಸಿದೆ. ಇದರಲ್ಲಿ 290 ಕೋಟಿ ಮೊತ್ತದ ವಿಮೆ ಈ ಗಣೇಶನ ಪೆಂಡಾಲ್‌ಗೆ ಆಗಮಿಸುವ ಭಕ್ತರಿಗಾಗಿ ಹಾಗೂ 39 ಕೋಟಿ ವಿಮೆ ಗಣೇಶನ ಮೈ ಮೇಲೆ ಹಾಕಿರುವ ಚಿನ್ನಾಭರಣ ಹಾಗೂ 20 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಯ ರಕ್ಷಣೆಗಾಗಿ. ಈ ಗಣೇಶನನ್ನು ನೋಡುವುದಕ್ಕಾಗಿ ಬಾಲಿವುಡ್ ಸಿನಿಮಾ ತಾರೆಯರಿಂದ ಹಿಡಿದು ಮುಂಬೈನ ರಾಜಕಾರಣಿಗಳವರೆಗೆ ಗಣ್ಯಾತಿಗಣ್ಯರು ಆಗಮಿಸುತ್ತಾರೆ. ಈ ವೇಳೆ ಭದ್ರತೆ ನೀಡುವುದೇ ದೊಡ್ಡ ಸವಾಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಭದ್ರತೆಗೆ ಸಂಬಂಧಿಸಿದಂತೆ ಪೆಂಡಾಲ್‌ಗೆ ಆಗಮಿಸುವ ಪ್ರತಿಯೊಬ್ಬರ ಮುಖ ಗುರುತಿಸುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಸೂಕ್ಷ್ಮ ಹಾಗೂ ವೈಡ್ ರೇಂಜ್‌ನ ಕ್ಯಾಮರಾಗಳನ್ನು ಅಳವಡಿಸಿದ್ದೇವೆ ಎಂದು ಜಿಎಸ್‌ಬಿ ಸೇವಾ ಮಂಡಲದ ಪ್ರತಿನಿಧಿ ಹೇಳಿದ್ದಾರೆ.

ಮಹಾರಾಷ್ಟ್ರದಾದ್ಯಂತ ವಿಘ್ನನಿವಾರಕ, ಸಂಕಷ್ಟಹರ ಬುದ್ಧಿಪ್ರದಾಯಕ ಸಿದ್ಧಿ ವಿನಾಯಕ ಗಣೇಶನ ಹಬ್ಬ ಗಣೇಶ ಚತುರ್ಥಿಯನ್ನು 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ, ಗಣೇಶ ತನ್ನ ತಾಯಿಯ ಜೊತೆ ಭೂಮಿಗೆ ಬಂದ ಎಂಬ ನಂಬಿಕೆ ಇದೆ. ಮುಂಬೈನಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 19 ರಿಂದ ಸೆಪ್ಟೆಂಬರ್ 29 ರವರೆಗೆ 10 ದಿನಗಳವರೆಗೆ ಗಣೇಶ ಹಬ್ಬದ ಆಚರಣೆ ನಡೆಯುತ್ತದೆ.

 

Follow Us:
Download App:
  • android
  • ios