ಈವ​ರೆಗೆ ದೈನಂದಿ​ನ ಹೆಚ್ಚು ಪ್ರಕ​ರ​ಣ​ಗ​ಳನ್ನು ದಾಖ​ಲಿ​ಸು​ತ್ತಿದ್ದ ಕರ್ನಾ​ಟಕ, ಮಹಾ​ರಾಷ್ಟ್ರ ಸೇರಿ​ದಂತೆ ದೇಶದ 34 ರಾಜ್ಯ​ಗ​ಳಲ್ಲಿ ಕೊರೋನಾ ವೈರ​ಸ್ಸಿನ ತೀವ್ರತೆ ಗಣ​ನೀಯ ಪ್ರಮಾ​ಣ​ದಲ್ಲಿ ತಗ್ಗಿದೆ. 

ನವ​ದೆ​ಹ​ಲಿ (ಫೆ.04): ಈವ​ರೆಗೆ ದೈನಂದಿ​ನ ಹೆಚ್ಚು ಪ್ರಕ​ರ​ಣ​ಗ​ಳನ್ನು ದಾಖ​ಲಿ​ಸು​ತ್ತಿದ್ದ ಕರ್ನಾ​ಟಕ, ಮಹಾ​ರಾಷ್ಟ್ರ ಸೇರಿ​ದಂತೆ ದೇಶದ 34 ರಾಜ್ಯ​ಗ​ಳಲ್ಲಿ ಕೊರೋನಾ ವೈರ​ಸ್ಸಿನ (Coronavirus) ತೀವ್ರತೆ ಗಣ​ನೀಯ ಪ್ರಮಾ​ಣ​ದಲ್ಲಿ ತಗ್ಗಿದೆ. ಅಲ್ಲದೆ ದೈನಂದಿನ ಪಾಸಿ​ಟಿ​ವಿಟಿ ದರವೂ ಕುಸಿತ ಕಂಡಿದೆ. ಆದರೆ ಕೇರಳ ಮತ್ತು ಮಿಜೋರಾಂ ರಾಜ್ಯ​ಗ​ಳಲ್ಲಿ ಹೆಚ್ಚು ಕೋವಿಡ್‌ ಪ್ರಕ​ರ​ಣ​ಗಳು (Covid Cases) ದಾಖ​ಲಾ​ಗು​ತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿ​ಸಿದೆ.

ದೇಶದ ಒಟ್ಟಾರೆ ಜಿಲ್ಲೆ​ಗಳ ಪೈಕಿ 268 ಜಿಲ್ಲೆ​ಗ​ಳಲ್ಲಿ ಕೋವಿಡ್‌ ಪಾಸಿ​ಟಿ​ವಿಟಿ ದರ ಶೇ.5ಕ್ಕಿಂತ ಕಡಿಮೆ ಇದೆ. ಪರಿ​ಣಾ​ಮ​ಕಾರಿ ಲಸಿಕೆ ಅಭಿ​ಯಾ​ನದಿಂದಾಗಿ ಕೋವಿ​ಡ್‌ಗೆ ಬಲಿ​ಯಾ​ಗುವವರ ಸಂಖ್ಯೆ ನಿಯಂತ್ರ​ಣಕ್ಕೆ ಬಂದಿದೆ. 3ನೇ ಅಲೆಯ ವೇಳೆ ಸರಾ​ಸರಿ 44 ವರ್ಷ​ದೊ​ಳ​ಗಿ​ನ​ವರು ಹೆಚ್ಚು ಬಾಧಿ​ತ​ರಾ​ಗಿದ್ದಾರೆ. ಈ ಹಿಂದಿನ 2 ಅಲೆ​ಗಳಲ್ಲಿ 55 ವಯೋ​ಮಾ​ನ​ದ​ವರು ಹೆಚ್ಚು ಬಾಧಿ​ತ​ರಾ​ಗಿ​ದ್ದರು. ಆದಾಗ್ಯೂ, ಕೋವಿ​ಡ್‌​ನಿಂದ ಗುಣ​ಮು​ಖ​ರಾ​ಗಲು ಹೆಚ್ಚು ಔಷಧ ಬಳ​ಕೆ​ಯಾ​ಗಿಲ್ಲ ಎಂಬುದು ಗಮ​ನಾರ್ಹ ಅಂಶ​ವಾ​ಗಿ​ದೆ ಎಂದು ಸರ್ಕಾರ ತಿಳಿ​ಸಿದೆ.

ದೇಶದಲ್ಲಿ 1.72 ಲಕ್ಷ ಕೇಸ್‌, 1008 ಸಾವು: ದೇಶದಲ್ಲಿ ಗುರುವಾರ ಬೆಳಗ್ಗೆ 8ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 1,72 ಲಕ್ಷ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು ಬುಧವಾರಕ್ಕಿಂತ ಶೇ.6.8ರಷ್ಟುಹೆಚ್ಚು. ಇನ್ನು ಇದೇ ಅವಧಿಯಲ್ಲಿ ಕೇರಳದ ಹಳೆಯ ಸಾವುಗಳೂ ಸೇರಿ 1008 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.18 ಕೋಟಿಗೆ ಏರಿಕೆಯಾಗಿದೆ. 

Corona Update ಕರ್ನಾಟಕದಲ್ಲಿ ಕೊರೋನಾ ಕೇಸ್ ಇಳಿಕೆ, ಸಾವಿನ ಸಂಖ್ಯೆ ಏರಿಕೆ

ಒಟ್ಟು ಸಾವಿಗೀಡಾದವರ ಸಂಖ್ಯೆ 4,98,983ಕ್ಕೆ ತಲುಪಿದೆ. ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 15.33 ಲಕ್ಷಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.95.14ರಷ್ಟಿದೆ. ದೈನಂದಿನ ಸೋಂಕಿನ ಪ್ರಮಾಣ ಶೇ.10.99ರಷ್ಟಿದೆ. ಒಟ್ಟು ಸೋಂಕಿತರ ಪೈಕಿ 3.97 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ 167.87 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 1000ಕ್ಕಿಂತ ಕಮ್ಮಿ ಕೇಸ್‌: ರಾಜ್ಯದಲ್ಲಿ ಗುರುವಾರ 16,436 (ಬುಧವಾರ 20505) ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಬೆಂಗಳೂರಿನ 2 ತಿಂಗಳ ಮಗು ಸೇರಿದಂತೆ ಒಟ್ಟು 60 ಮಂದಿ ಸಾವಿಗೀಡಾಗಿದ್ದಾರೆ, 44,819 ಮಂದಿ ಚೇತರಿಸಿಕೊಂಡಿದ್ದಾರೆ. 1.45 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು, ಶೇ.11.31 ಪಾಸಿಟಿವಿಟಿ ದರ ದಾಖಲಾಗಿದೆ. 

ಚೇತರಿಸಿಕೊಳ್ಳುತ್ತಿರುವವರು ಹೆಚ್ಚುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1.48 ಲಕ್ಷಕ್ಕೆ ಇಳಿದಿದೆ. ಬೆಂಗಳೂರು ನಗರದಲ್ಲಿ 6,640 ಮಂದಿಗೆ ಪಾಸಿಟಿವ್‌ ಬಂದಿದೆ. ಬೇರೆ ಯಾವುದೇ ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಹೆಚ್ಚು ಪ್ರಕರಣ ಬಂದಿಲ್ಲ. ಯಾದಗಿರಿ ಜಿಲ್ಲೆಯಲ್ಲಿ 49, ರಾಮನಗರ ಜಿಲ್ಲೆಯಲ್ಲಿ 65 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

Covid Crisis: ಬೆಂಗ್ಳೂರಲ್ಲಿ ವಾರದಲ್ಲಿ 2 ಲಕ್ಷ ಮಂದಿ ಗುಣಮುಖ: 92,000 ಕ್ಕಿಳಿದ ಸಕ್ರಿಯ ಕೇಸ್‌

ಬೆಂಗಳೂರು ನಗರದಲ್ಲಿ 2 ತಿಂಗಳ ಹೆಣ್ಣುಮಗು ಸೇರಿದಂತೆ 14 ಮಂದಿ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 12 ವರ್ಷದ ಬಾಲಕಿ ಸೇರಿದಂತೆ ಐವರು ಅಸುನೀಗಿದ್ದಾರೆ. ಉಳಿದಂತೆ ದಕ್ಷಿಣ ಕನ್ನಡ, ಮಂಡ್ಯ ತಲಾ 5, ಹಾವೇರಿ, ಚಿಕ್ಕಬಳ್ಳಾಪುರ ಮತ್ತು ಬೆಳಗಾವಿ ತಲಾ 3, ಚಾಮರಾಜನಗರ, ಕಲಬುರಗಿ, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಮತ್ತು ಯಾದಗಿರಿ ತಲಾ 2, ವಿಜಯಪುರ, ರಾಯಚೂರು, ಕೊಡಗು, ಗದಗ, ಧಾರವಾಡ, ದಾವಣಗೆರೆ, ಚಿಕ್ಕಮಗಳೂರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ 38.60 ಲಕ್ಷ ಪಾಸಿಟಿವ್‌ ಪ್ರಕರಣ ಬಂದಿದ್ದು ಈ ಪೈಕಿ 36.72 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 39,197 ಮಂದಿ ಮರಣವನ್ನಪ್ಪಿದ್ದಾರೆ.

ಲಸಿಕೆ ಅಭಿಯಾನ: ಗುರುವಾರ 2.11 ಲಕ್ಷ ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. 22,659 ಮಂದಿ ಮೊದಲ ಡೋಸ್‌, 1.71 ಲಕ್ಷ ಮಂದಿ ಎರಡನೇ ಡೋಸ್‌ ಮತ್ತು 17,012 ಮಂದಿ ಮುನ್ನೆಚ್ಚರಿಕಾ ಡೋಸ್‌ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 9.64 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.