ಡಿಜಿಟಲ್‌ ಅರೆಸ್ಟ್‌ ಮೂಲಕ ದೇಶದಲ್ಲಿ 3 ಸಾವಿರ ಕೋಟಿ ರು.ಗೂ ಹೆಚ್ಚು ಹಣ ವಂಚನೆಯಾಗಿರುವ ಕುರಿತು ಸುಪ್ರೀಂ ಕೋರ್ಟ್‌ ತೀವ್ರ ಆಘಾತ ವ್ಯಕ್ತಪಡಿಸಿದೆ. ಇದನ್ನು ವಜ್ರಮುಷ್ಠಿಯಿಂದ ನಿಭಾಯಿಸುವ ಅಗತ್ಯವಿದೆ ಎಂದಿರುವ ಅದು, ನ.10ರಂದು ಕೆಲವು ನಿರ್ದೇಶನ ನೀಡುವುದಾಗಿ ಹೇಳಿದೆ.

ನವದೆಹಲಿ :ಡಿಜಿಟಲ್‌  ಅರೆಸ್ಟ್‌ ಮೂಲಕ ದೇಶದಲ್ಲಿ 3 ಸಾವಿರ ಕೋಟಿ ರು.ಗೂ ಹೆಚ್ಚು ಹಣ ವಂಚನೆಯಾಗಿರುವ ಕುರಿತು ಸುಪ್ರೀಂ ಕೋರ್ಟ್‌ ತೀವ್ರ ಆಘಾತ ವ್ಯಕ್ತಪಡಿಸಿದೆ. ಇದನ್ನು ವಜ್ರಮುಷ್ಠಿಯಿಂದ ನಿಭಾಯಿಸುವ ಅಗತ್ಯವಿದೆ ಎಂದಿರುವ ಅದು, ನ.10ರಂದು ಕೆಲವು ನಿರ್ದೇಶನ ನೀಡುವುದಾಗಿ ಹೇಳಿದೆ.

ಸಿಬಿಐ ಮತ್ತು ಕೇಂದ್ರ ಗೃಹ ಸಚಿವಾಲಯವು ಮುಚ್ಚಿದ ಲಕೋಟೆಯಲ್ಲಿ ನೀಡಿದ ವರದಿಯನ್ನು ಪರಿಶೀಲಿಸಿದ ಬಳಿಕ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಉಜ್ಜಲ್‌ ಭುಯಾನ್‌ ಮತ್ತು ಜಯಮಾಲ್ಯ ಬಾಗ್ಚಿ ಅವರಿದ್ದ ಪೀಠವು ಡಿಜಿಟಲ್‌ ಅರೆಸ್ಟ್‌ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ.

3 ಸಾವಿರ ಕೋಟಿಗೂ ಹೆಚ್ಚು ಹಣ

‘ಹಿರಿಯ ನಾಗರಿಕರು ಸೇರಿ ದೇಶಾದ್ಯಂತ 3 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಸಂತ್ರಸ್ತರು ಕಳೆದುಕೊಂಡಿರುವುದು ಆಘಾತಕಾರಿ ವಿಚಾರ. ನಾವು ಕಠಿಣ ಆದೇಶ ಹೊರಡಿಸದೇ ಹೋದರೆ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ. ನ್ಯಾಯಾಂಗದ ಆದೇಶಗಳ ಮೂಲಕ ನಾವು ನಮ್ಮ ಏಜೆನ್ಸಿಗಳ ಕೈಬಲಪಡಿಸಬೇಕು. ನಾವು ವಜ್ರಮುಷ್ಠಿಯಿಂದ ಈ ಅಪರಾಧವನ್ನು ನಿಭಾಯಿಸಲು ಬದ್ಧವಾಗಿದ್ದೇವೆ’ ಎಂದು ಪೀಠ ತಿಳಿಸಿತು. ಜತೆಗೆ, ಪ್ರಕರಣದ ಮುಂದಿನ ವಿಚಾರಣೆಯನ್ನು ನ.10ರಂದು ನಿಗದಿಪಡಿಸಿದ ಕೋರ್ಟ್‌, ಆ ವೇಳೆ ಕೆಲ ನಿರ್ದೇಶನಗಳನ್ನು ನೀಡುವುದಾಗಿ ತಿಳಿಸಿತು.

ಸೈಬರ್‌ ಕ್ರೈಂನ ಬೆಳೆಯುತ್ತಿರುವ ರೂಪ

ಡಿಜಿಟಲ್‌ ಅರೆಸ್ಟ್‌ ಸೈಬರ್‌ ಕ್ರೈಂನ ಬೆಳೆಯುತ್ತಿರುವ ರೂಪವಾಗಿದೆ. ವಂಚಕರು ಪೊಲೀಸರು, ಕೋರ್ಟ್‌ ಅಧಿಕಾರಿಗಳು ಅಥವಾ ಸರ್ಕಾರಿ ಏಜೆನ್ಸಿಗಳ ಸಿಬ್ಬಂದಿ ರೀತಿ ಪೋಸ್‌ ನೀಡಿ ಆಡಿಯೋ ಮತ್ತು ವಿಡಿಯೋ ಕಾಲ್‌ ಮಾಡುತ್ತಾರೆ. ನಂತರ ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ಆತಂಕ ಹುಟ್ಟಿಸಿ ಅಮಾಯಕ ಜನರಿಂದ ಹಣ ಪೀಕುತ್ತಾರೆ. ಮುಖ್ಯವಾಗಿ ಹಿರಿಯ ನಾಗರಿಕರನ್ನೇ ಹೆಚ್ಚಾಗಿ ಗುರಿ ಮಾಡಿಕೊಂಡು ಈ ರೀತಿ ವಂಚನೆ ಮಾಡಲಾಗುತ್ತಿದೆ.