MP K Sudhakar's Wife Preethi Sudhakar Loses ₹14 Lakhs in Digital Arrest Scam ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್‌ ಅವರ ಪತ್ನಿ ಡಾ. ಪ್ರೀತಿ ಸುಧಾಕರ್ ಅವರು 'ಡಿಜಿಟಲ್ ಅರೆಸ್ಟ್' ಎಂಬ ಹೊಸ ಮಾದರಿಯ ಸೈಬರ್ ವಂಚನೆಗೆ ಒಳಗಾಗಿದ್ದಾರೆ. 

ಬೆಂಗಳೂರು (ಸೆ.22): ರಾಜ್ಯದಲ್ಲಿ ಸೈಬರ್‌ ಅಪರಾಧಗಳ ಸಂಖ್ಯೆ ಗಂಭೀರ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಇಲ್ಲಿಯವರೆಗೆ ಸಾಮಾನ್ಯ ಜನರಿಗೆ ಮಾತ್ರವೇ ಆಗುತ್ತಿದ್ದ ಈ ವಂಚನೆಗಳು ಈಗ ರಾಜಕಾರಣಿಗಳ ಕುಟುಂಬಕ್ಕೂ ಆಗುತ್ತಿದೆ. ಕೆಲದಿನಗಳ ಹಿಂದೆ ಮಾಜಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರ ಬ್ಯಾಂಕ್‌ ಖಾತೆಗೆ ಕನ್ನ ಹಾಕಿ 3 ಲಕ್ಷ ರೂಪಾಯಿ ಎಗರಿಸಲಾಗಿತ್ತು. ಈಗ ಮಾಜಿ ಆರೋಗ್ಯ ಸಚಿವ ಹಾಗೂ ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್‌ ಅವರ ಪತ್ನಿ ಡಿಜಿಟಲ್‌ ಅರೆಸ್ಟ್‌ ವಂಚನೆಗೆ ಒಳಗಾಗಿದ್ದು, 14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಪ್ರೀತಿ ಸುಧಾಕರ್‌ ಡಿಜಿಟಲ್‌ ಅರೆಸ್ಟ್‌ ಆಗಿದ್ದು ಹೇಗೆ?

ಚಿಕ್ಕಬಳ್ಳಾಪುರ ಸಂಸದ ಡಾ. ಕೆ ಸುಧಾಕರ್ ಪತ್ನಿ ಡಾ. ಪ್ರೀತಿ ಸುಧಾಕರ್ ಗೆ ಸೈಬರ್ ವಂಚನೆ ಮಾಡಿ 14 ಲಕ್ಷ ರೂಪಾಯಿ ಎಗರಿಸಿದ್ದಾರೆ. ಆಗಸ್ಟ್ 26ರಂದು ಡಾ. ಪ್ರೀತಿ ಸುಧಾಕರ್ ಬೆಳಿಗ್ಗೆ 9:30ಕ್ಕೆ ಕರೆ ಬಂದಿತ್ತು. ನಾವು ಮುಂಬೈ ಸೈಬರ್ ಇಲಾಖೆಯಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ದಾಖಲೆಗಳನ್ನ ಸದ್ಭತ್ ಖಾನ್ ಎಂಬ ಅಪರಿಚಿತ ಬಳಸಿಕೊಂಡಿದ್ದಾನೆ. ನಿಮ್ಮ ಹೆಸರಲ್ಲಿ ಕ್ರೆಡಿಟ್ ಕಾರ್ಡ್ ಮಾಡಿಸಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾನೆ ಎಂದು ವಂಚಕ ಹೇಳಿದ್ದಾಣೆ.

ವಿದೇಶಕ್ಕೆ ಕಾನೂನುಬಾಹಿರವಾಗಿ ಚಟುವಟಿಕೆ ನಡೆಸಲು ಆತ ಜನರನ್ನು ಕಳುಹಿಸಿದ್ದಾನೆ. ಸದ್ಯಕ್ಕೆ ಸದ್ಬತ್ ಖಾನ್‌ರನ್ನು ಅರೆಸ್ಟ್ ಮಾಡಲಾಗಿದ್ದು, ಆತನ ಹೇಳಿಕೆಯಲ್ಲಿ ನಿಮ್ಮ ಹೆಸರಿನ ದಾಖಲೆಯಿದೆ. ಇದರ ವಿಚಾರಣೆ ನಡೆಸೋದಕ್ಕೆ ವಿಡಿಯೋ ಕಾಲ್ ಮಾಡುತ್ತಿದ್ದೇವೆ. ನಿಮ್ಮ ದಾಖಲೆ ಹಾಗೂ ವೈಯಕ್ತಿಕ ದಾಖಲೆಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ವಂಚಕ ಬೆದರಿಕೆ ಹಾಕಿದ್ದಾನೆ.

ನಿಮ್ಮ ಅಕೌಂಟ್ ಅಕ್ರಮವಾಗಿದ್ದು ಹಣ ಹಾಕಿ ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಪ್ರೀತಿ ಅವರು 14 ಲಕ್ಷ ಹಣವನ್ನು ವಂಚಕರ ಖಾತೆಗೆ ಹಾಕಿದ್ದಾರೆ. ಆರ್ ಬಿ ಐ ರೂಲ್ಸ್ ಪರಿಶೀಲನೆ ಮಾಡಿ 45 ನಿಮಿಷದಲ್ಲಿ ವಾಪಸ್ ಹಾಕೋದಾಗಿ ವಂಚಕ ತಿಳಿಸಿದ್ದಾನೆ. ಪ್ರೀತಿ ಸುಧಾಕರ್ ಇಂದ 14 ಲಕ್ಷ ಹಣವನ್ನ ಆರ್ ವಂಚಕರು ಆರ್‌ಟಿಜಿಎಸ್‌ ಮಾಡಿಸಿಕೊಂಡಿದ್ದಾರೆ. ಹಣ ಹಾಕಿದ ನಂತರ ವಂಚನೆಯಾಗಿರೋದು ಪತ್ತೆಯಾಗಿದೆ. ಪ್ರೀತಿ ಸುಧಾಕರ್ ನೀಡಿದ ದೂರಿನ ಮೇರೆಗೆ ಸೈಬರ್ ಠಾಣೆಯಲ್ಲಿ ಎಫ್ಐಆರ್‌ ದಾಖಲು ಮಾಡಲಾಗಿದೆ.