Asianet Suvarna News Asianet Suvarna News

Corona Crisis: ದೇಶದಲ್ಲಿ ಒಂದೇ ದಿನ 2.47 ಲಕ್ಷ ಪ್ರಕರಣ: ಆತಂಕದಲ್ಲಿ ಜನತೆ

*    ಕೇವಲ 13 ದಿನದಲ್ಲಿ 1 ಸಾವಿರದಿಂದ ಕಾಲು ಲಕ್ಷಕ್ಕೆ ಏರಿಕೆಯಾದ ಸೋಂಕು
*   2ನೇ ಅಲೆಯಲ್ಲಿ 37 ದಿನ, ಈ ಬಾರಿ ಬರೀ 13 ದಿನದಲ್ಲಿ 25 ಪಟ್ಟು ಏರಿಕೆ
*   24 ತಾಸಿನಲ್ಲಿ 52000 ಕೇಸ್‌ ಹೆಚ್ಚಳ
 

247417 New Corona Cases on Jan 13th in India grg
Author
Bengaluru, First Published Jan 14, 2022, 4:59 AM IST

ನವದೆಹಲಿ(ಜ.14):  ದೇಶದಲ್ಲಿ(India) ಗುರುವಾರ ಒಟ್ಟು 2,47,417 ಜನರಲ್ಲಿ ಕೋವಿಡ್‌(Covid-19) ದೃಢಪಟ್ಟಿದೆ. ಇದು ಕಳೆದ 236 ದಿನಗಳಲ್ಲೇ ಏಕದಿನದ ಅತ್ಯಧಿಕ ಸೋಂಕಾಗಿದೆ. ಜೊತೆಗೆ ಬುಧವಾರದ 1.94 ಲಕ್ಷ ಕೇಸುಗಳಿಗೆ ಹೋಲಿಸಿದರೆ ಒಂದೇ ದಿನದಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ 52697ರಷ್ಟು ಹೆಚ್ಚಳ ದಾಖಲಾಗಿದೆ. ಅಂದರೆ ಒಂದೇ ದಿನದಲ್ಲಿ ಶೇ.27ರಷ್ಟುಏರಿಕೆ. ಇದರೊಂದಿಗೆ, ಸಕ್ರಿಯ ಸೋಂಕಿತರ ಸಂಖ್ಯೆ 11.17 ಲಕ್ಷಕ್ಕೆ ಏರಿಕೆಯಾಗಿದ್ದು, ಇದು 216 ದಿನಗಳ ಗರಿಷ್ಠವಾಗಿದೆ. ಗುರುವಾರ ದೇಶಾದ್ಯಂತ ಒಟ್ಟು 380 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ(Death).

ದೇಶದಲ್ಲಿ ಒಮಿಕ್ರೋನ್‌(Omicron)ಸೋಂಕು ಪತ್ತೆಯಾಗುವ ಪ್ರಮಾಣ ಕೂಡ ದಿನೇದಿನೇ ಜಾಸ್ತಿಯಾಗುತ್ತಿದ್ದು, ಗುರುವಾರ 620 ಜನರಲ್ಲಿ ಈ ರೂಪಾಂತರಿ ತಳಿಯ ಸೋಂಕು ಪತ್ತೆಯಾಗಿದೆ. ಅದರೊಂದಿಗೆ ಈವರೆಗೆ ದೇಶದಲ್ಲಿ 5488 ಜನರಲ್ಲಿ ಒಮಿಕ್ರೋನ್‌ ಸೋಂಕು ಪತ್ತೆಯಾದಂತಾಗಿದ್ದು, ಅವರಲ್ಲಿ 2162 ಜನರು ಈಗಾಗಲೇ ಗುಣಮುಖರಾಗಿದ್ದಾರೆ.

Covid 19 Spike: ತಿಂಗಳಾಂತ್ಯಕ್ಕೆ ಬೆಂಗ್ಳೂರಲ್ಲಿ ಕೋವಿಡ್‌ ಉತ್ತುಂಗಕ್ಕೆ..!

ಕಳೆದ ವರ್ಷದ ಮೇ 21ರಂದು 2.57 ಲಕ್ಷ ಕೊರೋನಾ(Coronavirus) ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದ್ದವು. ಅದರ ನಂತರ ಗುರುವಾರದ ಸಂಖ್ಯೆಯೇ ಅತ್ಯಧಿಕವಾಗಿದೆ. ದೇಶದಲ್ಲೀಗ ಕೊರೋನಾದಿಂದ ಗುಣಮುಖರಾಗುವ ಪ್ರಮಾಣ ಶೇ.95.59ಗೆ ಇಳಿಕೆಯಾಗಿದೆ. ಏಕದಿನದ ಪಾಸಿಟಿವಿಟಿ ದರ(Positivity Rate) ಶೇ.13.11 ಮತ್ತು ಮರಣ ದರ ಶೇ.1.34 ಇದೆ. ಗುರುವಾರ ಮೃತಪಟ್ಟ 380 ಮಂದಿಯಲ್ಲಿ ಕೇರಳದವರೇ(Kerala) 199 ಇದ್ದಾರೆ. ದೆಹಲಿಯಲ್ಲಿ 40 ಸಾವು ಸಂಭವಿಸಿದೆ.

ಪಾಸಿಟಿವಿಟಿ ದರ

ಕೋಲ್ಕತ್ತಾ: ಕೋಲ್ಕತ್ತಾದ ವಾರದ ಪಾಸಿಟಿವಿಟಿ ದರ ಶೇ.60.29ಕ್ಕೆ ಏರಿಕೆಯಾಗಿದ್ದು, ಇದು ದೇಶದಲ್ಲಿ 2ನೇ ಗರಿಷ್ಠ ಪಾಸಿಟಿವಿಟಿ ದರ ಆಗಿದೆ ಎಂದು ಬುಧವಾರ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಜನವರಿ 11 ರಂದು ಪಶ್ಚಿಮ ಬಂಗಾಳದ ಹೌರಾದಲ್ಲಿ 50.89 ಪಾಸಿಟಿವಿಟಿ ದರ ದಾಖಲಾಗಿತ್ತು. ಬುಧವಾರ ಕೋಲ್ಕತ್ತಾದಲ್ಲಿ 7060 ಹೊಸ ಕೋವಿಡ್‌ ಕೇಸ್‌ಗಳು ದಾಖಲಾಗಿದೆ. ಮಂಗಳವಾರಕ್ಕಿಂತ 495 ಕೇಸ್‌ಗಳು ಹೆಚ್ಚು ದಾಖಲಾಗಿವೆ. ಹೌರಾ ಜಿಲ್ಲೆಯಲ್ಲಿ ಬುಧವಾರ ಕೇಸುಗಳು ಸ್ವಲ್ಪ ಇಳಿಕೆ ಕಂಡಿದ್ದು 1361 ಹೊಸ ಕೇಸ್‌ಗಳು ದಾಖಲಾಗಿವೆ. ಮಂಗಳವಾರ ಹೌರಾದಲ್ಲಿ 1815 ಕೇಸ್‌ಗಳು ದಾಖಲಾಗಿದ್ದವು.

ರಾಜ್ಯದಲ್ಲಿ ಒಂದೇ ದಿನ 25 ಸಾವಿರ ಜನಕ್ಕೆ ಕೋವಿಡ್‌!

ಬೆಂಗಳೂರು:  ರಾಜ್ಯದಲ್ಲಿ (Karnataka) ಗುರುವಾರ ಬರೋಬ್ಬರಿ 25,005 ಮಂದಿಯಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದೆ. ಜನವರಿ ಒಂದರಂದು 1,033 ಪ್ರಕರಣ ವರದಿಯಾಗಿದ್ದು ಕೇವಲ 13 ದಿನದಲ್ಲೇ ದೈನಂದಿನ ಸೋಂಕಿತರ ಪ್ರಮಾಣ 25 ಪಟ್ಟು ಏರಿದೆ. ಎರಡನೇ ಅಲೆಯಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಸಾವಿರದಿಂದ 25 ಸಾವಿರಕ್ಕೆ ಏರಲು 37 ದಿನ ತೆಗೆದುಕೊಂಡಿತ್ತು.

ಸಮಾಧಾನಕರ ಅಂಶವೆಂದರೆ ಸೋಂಕಿತರ ಸಂಖ್ಯೆ ಕ್ಷಿಪ್ರಗತಿಯಲ್ಲಿ ಏರುತ್ತಿದ್ದರೂ ಕೂಡ ಸೋಂಕು ಉಲ್ಬಣಿಸಿ ಗಂಭೀರ ಸ್ಥಿತಿಗೆ ತಲುಪುತ್ತಿರುವವರ ಸಂಖ್ಯೆ ಕಡಿಮೆ ಇದೆ. ಎರಡನೇ ಅಲೆಯಲ್ಲಿ ದೈನಂದಿನ ಸೋಂಕಿತರ ಸಂಖ್ಯೆ 25 ಸಾವಿರ ದಾಟುವ ಸಂದರ್ಭದಲ್ಲಿ 243 ಮಂದಿ ಸೋಂಕಿತರು ತೀವ್ರ ನಿಗಾ ವಿಭಾಗದಲ್ಲಿ (ICU) ಚಿಕಿತ್ಸೆ(Treatment) ಪಡೆಯುತ್ತಿದ್ದರೆ ಸದ್ಯ ಸುಮಾರು 60 ಮಂದಿ ಐಸಿಯುನಲ್ಲಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಗೆ 2021ರ ಏಪ್ರಿಲ್‌ 22ಕ್ಕೆ 25,795 ಹೊಸ ಪ್ರಕರಣ ಬಂದಿತ್ತು. ಅಷ್ಟು ಹೊತ್ತಿಗೆ ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 1.96 ಲಕ್ಷ ತಲುಪಿತ್ತು. ಆದರೆ ಈ ಬಾರಿ ವೇಗವಾಗಿ ದೈನಂದಿನ ಸೋಂಕಿತರ ಸಂಖ್ಯೆ 25 ಸಾವಿರ ತಲುಪಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1.15 ಲಕ್ಷದಷ್ಟಿದೆ.

ಹಾಗೆಯೇ ಎರಡನೇ ಅಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದು ಲಕ್ಷ ದಾಟುತ್ತಿದ್ದಂತೆ ಕೋವಿಡ್‌ನಿಂದ ಮರಣವನ್ನುಪ್ಪುವವರ ದೈನಂದಿನ ಸಂಖ್ಯೆ ಕೂಡ ನೂರು ದಾಟಿತ್ತು. ಆದರೆ ರಾಜ್ಯದಲ್ಲಿ ಸದ್ಯದ ಮಟ್ಟಿಗೆ ಕೋವಿಡ್‌ ನಿಂದ ಮರಣವನ್ನಪ್ಪುವವರ ಸಂಖ್ಯೆ ಒಂದಂಕಿಯಲ್ಲೇ ಇದೆ. ಗುರುವಾರ 8 ಮಂದಿ ಮರಣವನ್ನಪ್ಪಿದ್ದಾರೆ.

ಮೇ 24ಕ್ಕೆ 25,311 ಪ್ರಕರಣ ದಾಖಲಾದ 224 ದಿನಗಳ ಬಳಿಕ ಮೊದಲ ಬಾರಿಗೆ ಹೊಸ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿದೆ. ರಾಜ್ಯದ ಇತಿಹಾಸದಲ್ಲೇ ಎರಡನೇ ಬಾರಿಗೆ 2 ಲಕ್ಷಕ್ಕಿಂತ ಹೆಚ್ಚು ಕೋವಿಡ್‌ ಪರೀಕ್ಷೆ ನಡೆದಿದ್ದರೂ ಪಾಸಿಟಿವಿಟಿ ದರದ ಓಟಕ್ಕೆ ಲಗಾಮು ಬಿದ್ದಿಲ್ಲ. ಗುರುವಾರದ ಪಾಸಿಟಿವಿಟಿ ದರ ಶೇ. 12.39 ವರದಿಯಾಗಿದೆ. ಬುಧವಾರ ಶೇ. 10.96 ಪಾಸಿಟಿವಿಟಿ ಇತ್ತು.

Covid in India: ಕರ್ನಾಟಕ ಸೇರಿ 8 ರಾಜ್ಯಗಳ ಕೋವಿಡ್‌ ಸ್ಥಿತಿ ಆತಂಕಕಾರಿ

ಬೆಂಗಳೂರು(Bengaluru) ನಗರದಲ್ಲಿ 18,374 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮೈಸೂರು 695, ದಕ್ಷಿಣ ಕನ್ನಡ 625, ತುಮಕೂರು 547, ಹಾಸನ 490, ಮಂಡ್ಯ 406 ಪ್ರಕರಣ ವರದಿಯಾಗಿದೆ. ಉಳಿದಂತೆ ರಾಜ್ಯದ 13 ಜಿಲ್ಲೆಯಲ್ಲಿ ಮೂರಂಕಿಯಲ್ಲಿ ಹೊಸ ಪ್ರಕರಣ ಬಂದಿದೆ. ಬಾಗಲಕೋಟೆ (5)ಯಲ್ಲಿ ಮಾತ್ರ ಒಂದಂಕಿಯಲ್ಲಿ ಪ್ರಕರಣವಿದೆ.

ಬೆಂಗಳೂರು ನಗರದಲ್ಲಿ ಮೂವರು, ವಿಜಯಪುರ, ತುಮಕೂರು, ಮೈಸೂರು, ಕಲಬುರಗಿ, ಮತ್ತು ಬೆಳಗಾವಿಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 31.24 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 29.70 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 38,397 ಮಂದಿ ಮರಣವನ್ನಪ್ಪಿದ್ದಾರೆ.

27.6 ಸಾವಿರ ಜನರಿಗೆ 3ನೇ ಡೋಸ್‌

ರಾಜ್ಯದಲ್ಲಿ ಗುರುವಾರ 1.85 ಲಕ್ಷ ಮಂದಿ ಕೋವಿಡ್‌ ಲಸಿಕೆ(Vaccine) ಪಡೆದುಕೊಂಡಿದ್ದಾರೆ. 27,668 ಮಂದಿ ಮುನ್ನೆಚ್ಚರಿಕೆ ಡೋಸ್‌ ಲಸಿಕೆ ಪಡೆದಿದ್ದಾರೆ. 15 ರಿಂದ 18 ವರ್ಷದೊಳಗಿನ 45,942 ಮಂದಿ ಮೊದಲ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ. ಒಟ್ಟು 80,951 ಮಂದಿ ಮೊದಲ ಮತ್ತು 77,110 ಮಂದಿ ಎರಡನೇ ಡೋಸ್‌ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ 5.04 ಕೋಟಿ ಮೊದಲ, 4.03 ಕೋಟಿ ಎರಡನೇ ಡೋಸ್‌ ಸೇರಿದಂತೆ ಒಟ್ಟು 9.09 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.
 

Follow Us:
Download App:
  • android
  • ios