Covid Crisis: ಮಾಸ್ಕ್ ಧರಿಸದವರಿಗೆ ದಂಡ ಹಾಕಿ: ತಜ್ಞರು
ಕೊರೋನಾ ಸೋಂಕು ನಿರಂತರ ಏರಿಕೆಯಾಗುತ್ತಿದ್ದು, ಒಮಿಕ್ರೋನ್ ಉಪತಳಿಗಳು ಕೂಡಾ ಪತ್ತೆಯಾಗಿವೆ. ಹಾಗಾಗಿ ಇನ್ನುಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಬೇಕೆಂದು ರಾಜ್ಯ ಕೊರೋನಾ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿ ತಜ್ಞರು ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದ್ದಾರೆ.
ಬೆಂಗಳೂರು (ಜೂ.28): ಕೊರೋನಾ ಸೋಂಕು ನಿರಂತರ ಏರಿಕೆಯಾಗುತ್ತಿದ್ದು, ಒಮಿಕ್ರೋನ್ ಉಪತಳಿಗಳು ಕೂಡಾ ಪತ್ತೆಯಾಗಿವೆ. ಹಾಗಾಗಿ ಇನ್ನುಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಬೇಕೆಂದು ರಾಜ್ಯ ಕೊರೋನಾ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿ ತಜ್ಞರು ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದ್ದಾರೆ.
ರಾಜ್ಯದಲ್ಲಿ ಕಳೆದ ಏಪ್ರಿಲ್‌ನಿಂದಲೇ ಕಡ್ಡಾಯ ಮಾಸ್ಕ್ ನಿಯಮ ಜಾರಿಯಲ್ಲಿದ್ದರೂ ಸೂಕ್ತವಾಗಿ ಪಾಲನೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಪೊಲೀಸ್ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು ಕಟ್ಟುನಿಟ್ಟಾಗಿ ಮಾಸ್ಕ್ ನಿಯಮ ಜಾರಿಗೊಳಿಸಬೇಕು ಎಂದು ಜೂನ್ 10ರಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿತ್ತು. ಆದರೂ, ಬಹುತೇಕರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಓಡಾಟ ನಡೆಸುತ್ತಿದ್ದಾರೆ.
ಭಾರತದಲ್ಲಿ ಕೋವಿಡ್ ಸ್ಫೋಟ, ಮತ್ತೊಂದು ರಾಜ್ಯದಲ್ಲಿ ಕಠಿಣ ಮಾರ್ಗಸೂಚಿ ಪ್ರಕಟ!
ಈ ಮಧ್ಯೆ ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು 800ರ ಗಡಿ ದಾಟಿದ್ದು, ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.4ರ ಆಸುಪಾಸಿಗೆ ಹೆಚ್ಚಿದೆ. ಒಮಿಕ್ರೋನ್‌ನ ಬಿಎ3,ಬಿಎ4 ಮತ್ತು ಬಿಎ5 ಉಪತಳಿಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಹೀಗಾಗಿಯೇ, ದಂಡ ವಿಧಿಸುವ ಮೂಲಕ ಮಾಸ್ಕ್ ಕಡ್ಡಾಯಗೊಳಿಸಲು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.
ದಂಡ ಅನಿವಾರ್ಯ, ಈ ವಾರದಲ್ಲಿ ಜಾರಿ ಸಾಧ್ಯತೆ: ಸಾರ್ವಜನಿಕರು ಮಾಸ್ಕ್ ಕಡ್ಡಾಯ ನಿಯಮದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ, ದಂಡ ಪ್ರಯೋಗವು ಅನಿವಾರ್ಯವಾಗಿದೆ. ಈ ಕುರಿತು ಕೊರೋನಾ ತಾಂತ್ರಿಕ ಸಲಹಾ ಸಮಿತಿ ನೀಡಿರುವ ಶಿಫಾರಸು ವರದಿಯನ್ನು ಸೋಮವಾರ ಸರ್ಕಾರಕ್ಕೆ ತಲುಪಿಸಲಾಗಿದೆ. ಸರ್ಕಾರ ಸಭೆ ನಡೆಸಿ ಈ ವಾರದೊಳಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.
250 ರು. ದಂಡವಿತ್ತು: ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸವರರಿಗೆ 250 ರು. ದಂಡ ಹಾಕಲಾಗುತ್ತಿತ್ತು. 2022 ಫೆಬ್ರವರಿಯಿಂದ ವಿನಾಯ್ತಿ ನೀಡಲಾಗಿತ್ತು. ಇದೇ ದಂಡ ಮೊತ್ತವು ಈ ಬಾರಿಯೂ ಜಾರಿ ಬರುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ಬಿಬಿಎಂಪಿ ಮಾರ್ಷಲ್‌ಗಳು, ಇತರೆಡೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಯು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಂದ ದಂಡ ವಸೂಲಿ ಮಾಡಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
Covid Crisis: ತಾಂತ್ರಿಕ ಸಮಸ್ಯೆಯಿಂದ ರಾಜ್ಯದಲ್ಲಿ ಕೇವಲ 133 ಕೊರೋನಾ ಕೇಸ್!
ಬೆಂಗಳೂರಿನಲ್ಲೇ ಮೊದಲ ದಂಡ ಪ್ರಯೋಗ: ಸದ್ಯ ರಾಜ್ಯದ ಇತರೆಡೆಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಿದ್ದು, 700ರ ಆಸುಪಾಸಿನಲ್ಲಿ ವರದಿಯಾಗುತ್ತಿವೆ. ಕಳೆದ ಒಂದು ತಿಂಗಳಲ್ಲಿ ರಾಜ್ಯದಲ್ಲಿ ನಿತ್ಯ ವರದಿಯಾಗುತ್ತಿರುವ ಹೊಸ ಪ್ರಕರಣಗಳ ಪೈಕಿ ಶೇ.96ರಷ್ಟು ಬೆಂಗಳೂರು ಒಂದರಲ್ಲಿಯೇ ಪತ್ತೆಯಾಗಿವೆ. ಅಲ್ಲದೆ, ರಾಜ್ಯದ ಒಟ್ಟಾರೆ ಸಕ್ರಿಯ ಸೋಂಕಿತರ ಪೈಕಿ ಶೇ.95ರಷ್ಟು(4,288ರಲ್ಲಿ 4,088) ಬೆಂಗಳೂರಿನಲ್ಲಿವೆ. 33 ಕಂಟೈನ್ಮೆಂಟ್ ವಲಯಗಳಿವೆ. ಈ ಕಾರಣಗಳಿಂದ ಮಾಸ್ಕ್ ಕಡ್ಡಾಯ ನಿಯಮ ಬೆಂಗಳೂರಿನಲ್ಲಿ ಮೊದಲ ಜಾರಿಗೊಳ್ಳಬಹುದು ಎನ್ನಲಾಗುತ್ತಿದೆ.