ಮಧ್ಯ ಪ್ರದೇಶದಲ್ಲಿ ರಾಮಭಕ್ತನೇ ‘ರಾಜ’; ಕಮಲ ಕಿಲಕಿಲ: ಕಮಲ್‌ನಾಥ್ ವಿಲವಿಲ; ಲಡ್ಡು ಹಂಚಿದ ಕೈಗೆ ಮತ್ತೆ ಹಿನ್ನೆಡೆ!
ಸಮೀಕ್ಷೆಗಳು ಸುಳ್ಳಾಗಲಿವೆ, ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ನಾಥ್ ತೀವ್ರ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಬಿಜೆಪಿಗೆ ಪ್ರಚಂಡ ಬಹುಮತ ಬರುವ ಸಾಧ್ಯತೆ ಹೆಚ್ಚಾಗಿದೆ.
ದೆಹಲಿ (ಡಿಸೆಂಬರ್ 3, 2023): ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ಆರಂಭದಲ್ಲಿ ಕುತೂಹಲ ಕೆರಳಿಸಿತ್ತಾದರೂ, ಬಿಜೆಪಿ ಸದ್ಯ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನೊಂದೆಡೆ, ನಾವೇ ಗೆಲ್ತೀವೆಂದು ಲಡ್ಡು ಹಂಚಿದ ಕಾಂಗ್ರೆಸ್ ಮುಖಭಂಗ ಅನುಭವಿಸ್ತಿದ್ರೆ, ಸಿಎಂ ಆಗೋ ಕನಸು ಕಾಣ್ತಿದ್ದ ಕಮಲ್‌ನಾಥ್ ತಮ್ಮ ಕ್ಷೇತ್ರದಲ್ಲೇ ಹಿನ್ನೆಡೆ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ.
230 ವಿಧಾನಸಭಾ ಸ್ಥಾನಗಳ ಮಧ್ಯ ಪ್ರದೇಶದಲ್ಲಿ ಬಿಜೆಪಿ 150 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ರೆ, ಕಾಂಗ್ರೆಸ್ ನೂರರ ಗಡಿ ದಾಟುವುದು ಸದ್ಯಕ್ಕೆ ಅಸಾಧ್ಯವೆಂಬಂತಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖರ ಪೈಕಿ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುಧ್ನಿಯಿಂದ ಮುನ್ನಡೆಯಲ್ಲಿದ್ದಾರೆ. ಆದರೆ ಕಾಂಗ್ರೆಸ್‌ನ ಕಮಲ್ ನಾಥ್ ತಮ್ಮ ಭದ್ರಕೋಟೆಯಾದ ಛಿಂದ್ವಾರಾದಲ್ಲಿ ಆರಂಭದಲ್ಲಿ ಹಿನ್ನಡೆ ಕಾಯ್ದುಕೊಂಡಿದ್ದರಾದ್ರೂ, ಸದ್ಯ ಮುನ್ನಡೆಯಲ್ಲಿದ್ದಾರೆ.
ಇದನ್ನು ಓದಿ: ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಸೆಂಚುರಿ: ಗೆಹ್ಲೋಟ್‌ಗೆ ತೀವ್ರ ಮುಖಭಂಗ, ಕ್ರ್ಯಾಶ್ ಆಗುತ್ತಾ ಪೈಲಟ್?
ಎಕ್ಸಿಟ್ ಪೋಲ್‌ಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬಿಗಿಯಾದ ಸ್ಪರ್ಧೆಯನ್ನು ಊಹಿಸಿದ್ದವು. ಆದರೂ, ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಹಿಡಿಯಬಹುದು ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ, ಸಮೀಕ್ಷೆಗಳ ಲೆಕ್ಕಾಚಾರವನ್ನೂ ಮೀರಿ ಬಿಜೆಪಿ ಪ್ರಚಂಡ ಬಹುಮತ ಗಳಿಸಿದೆ.
1993 ಮತ್ತು 1998 ರಲ್ಲಿ ದಿಗ್ವಿಜಯ ಸಿಂಗ್ ಕಾಂಗ್ರೆಸ್ ಅನ್ನು ಗೆಲುವಿನ ದಡಕ್ಕೆ ದಾಟಿಸಿದ ನಂತರ ಮಧ್ಯಪ್ರದೇಶವು ಬಿಜೆಪಿಯ ಭದ್ರಕೋಟೆಯಾಗಿದೆ. ಕಳೆದ ನಾಲ್ಕು ಚುನಾವಣೆಗಳಲ್ಲಿ ಪಕ್ಷವು ಮೂರು ಬಾರಿ ಗೆದ್ದಿದೆ.
ಇದನ್ನೂ ಓದಿ: ಸಂಕಷ್ಟದಲ್ಲಿ ಕೆಸಿಆರ್; ನನಸಾಗಲ್ಲ ಹ್ಯಾಟ್ರಿಕ್ ಕನಸು! ಮ್ಯಾಜಿಕ್ ನಂಬರ್ ದಾಟಿದ ಕಾಂಗ್ರೆಸ್
ಆದರೆ, ಸಮೀಕ್ಷೆಗಳು ಸುಳ್ಳಾಗಲಿವೆ, ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ನಾಥ್ ತೀವ್ರ ವಿಶ್ವಾಸ ವ್ಯಕ್ತಪಡಿಸಿದ್ದರು. ನಾನು ಯಾವುದೇ ಟ್ರೆಂಡ್‌ಗಳನ್ನು ನೋಡಿಲ್ಲ, ನಾನು 11 ಗಂಟೆಯವರೆಗೆ ಯಾವುದೇ ಟ್ರೆಂಡ್‌ಗಳನ್ನು ನೋಡಬೇಕಾಗಿಲ್ಲ. ನಾನು ತುಂಬಾ ವಿಶ್ವಾಸ ಹೊಂದಿದ್ದೇನೆ, ನಾನು ಮಧ್ಯಪ್ರದೇಶದ ಮತದಾರರನ್ನು ನಂಬುತ್ತೇನೆ ಎಂದು ಅವರು ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.
ಅಲ್ಲದೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೇವೆಂದು ಬೆಳಗ್ಗೆಯೇ ಲಡ್ಡು ಹಂಚಿ ಸಂಭ್ರಮಿಸಿದೆ. ಆಗ ಬಿಜೆಪಿ - ಕಾಂಗ್ರೆಸ್ ನಡುವೆ ಸಮಬಲದ ಪೈಪೋಟಿ ಇತ್ತು. ಆದರೆ, ಬಿಜೆಪಿ ಸದ್ಯ ನಿಚ್ಚಳ ಬಹುಮತ ಪಡೆದಿದ್ದು, ಕಾಂಗ್ರೆಸ್‌ಗೆ ಅಧಿಕಾರ ಹಿಡಿಯುವ ಕನಸು ಈ ಬಾರಿಯೂ ನನಸಾಗುವುದು ಕಷ್ಟಸಾಧ್ಯವಾಗಿದೆ.