Asianet Suvarna News Asianet Suvarna News

ಬಾಂಬ್ ಬ್ಲಾಸ್ಟ್‌ ಪ್ರಕರಣದ ತನಿಖೆಗೆ ಬಂದ ಎನ್‌ಐಎ ಅಧಿಕಾರಿಗಳ ವಿರುದ್ಧವೇ ಲೈಂಗಿಕ ಕಿರುಕುಳ ಕೇಸ್

2022ರ ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆಂದು ಹೋದ ಎನ್‌ಐಎ ಅಧಿಕಾರಿಗಳ ಮೇಲೆಯೇ ಈಗ ಪಶ್ಚಿಮ ಬಂಗಾಳ ಪೊಲೀಸರು ಲೈಂಗಿಕ  ಕಿರುಕುಳ ಪ್ರಕರಣ ದಾಖಲಿಸಿ ಎಫ್‌ಐಆರ್ ಮಾಡಿದ್ದಾರೆ. 

2022 Bomb blast case West Bengal Police registered a case of  Molestation against NIA officers and filed an FIR akb
Author
First Published Apr 7, 2024, 3:44 PM IST

ಪಶ್ಚಿಮ ಬಂಗಾಳ: 2022ರ ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆಂದು ಹೋದ ಎನ್‌ಐಎ ಅಧಿಕಾರಿಗಳ ಮೇಲೆಯೇ ನಿನ್ನೆ ಪಶ್ಚಿಮ ಬಂಗಾಳದಲ್ಲಿ ಗ್ರಾಮಸ್ಥರು ದಾಳಿ ಮಾಡಿದ್ದರು. ಈ ಘಟನೆಯಲ್ಲಿ ಒಬ್ಬ ಎನ್‌ಐಎ ಅಧಿಕಾರಿ ಗಾಯಗೊಂಡಿದ್ದರು. ಆದರೆ ಈಗ ಪಶ್ಚಿಮ ಬಂಗಾಳ ಪೊಲೀಸರು ಅಧಿಕಾರಿಗಳ ಮೇಲೆ ದಾಳಿ ಮಾಡಿ ಅವರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಎನ್‌ಐಎ ಅಧಿಕಾರಿಗಳ ವಿರುದ್ಧ ಲೈಂಗಿಕ  ಕಿರುಕುಳ ಪ್ರಕರಣ ದಾಖಲಿಸಿ ಎಫ್‌ಐಆರ್ ಮಾಡಿದ್ದಾರೆ. 

ನಿನ್ನೆ ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ಭೂಪತಿನಗರ  ಪ್ರದೇಶಕ್ಕೆ ಎನ್‌ಐಎ ಅಧಿಕಾರಿಗಳು ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆಂದು ಆಗಮಿಸಿದ ವೇಳೆ ಗ್ರಾಮಸ್ಥರು ಅಧಿಕಾರಿಗಳ ಮೇಲೆಯೇ ದಾಳಿ ನಡೆಸಿ ಕಲ್ಲು ತೂರಾಟ ನಡೆಸಿದ್ದರು. ನಿನ್ನೆ ಮುಂಜಾನೆಯಷ್ಟೇ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಈ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದರು. ಬಳಿಕ ಕೋಲ್ಕತ್ತಾಗೆ ಮರಳುವ ವೇಳೆ ಎನ್‌ಐಎ ಅಧಿಕಾರಿಗಳು ಚಲಿಸುತ್ತಿದ್ದ ವಾಹನದ ಮೇಲೆ ಸ್ಥಳೀಯರು ದಾಳಿ ನಡೆಸಿದ್ದಾರೆ. 

ಎನ್‌ಐಎ ಹಲ್ಲೆ ಮಾಡಿದ್ದು, ಅದಕ್ಕೆ ಮಹಿಳೆಯರ ತಿರುಗೇಟು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಆದರೆ ಈಗ ಪಶ್ಚಿಮ ಬಂಗಾಳ ಪೊಲೀಸರು ಐಪಿಸಿಯ ಸೆಕ್ಷನ್ 354ರ ಅಡಿ ಎನ್‌ಐಎ ಅಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಟಿಎಂಸಿ ಸದಸ್ಯ ಮನಬ್ರೊಟೊ ಜಾನಾ ಸೇರಿದಂತೆ ಬಂಧಿತ ವ್ಯಕ್ತಿಗಳ ಕುಟುಂಬ ಸದಸ್ಯರು ಹಲವಾರು ದೂರುಗಳನ್ನು ಸಲ್ಲಿಸಿದ ನಂತರ ಈ ಹಠಾತ್ ಕ್ರಮ ಕೈಗೊಳ್ಳಲಾಗಿದೆ. 

2022ರ ಡಿಸೆಂಬರ್‌ 3 ರಂದು ಭೂಪತಿನಗರದ ಗುಡಿಸಲು ಮನೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಒಟ್ಟು ಮೂವರು ಬಲಿಯಾಗಿದ್ದರು. ಈ ಪ್ರಕರಣವನ್ನು ನಂತರ ಎನ್ಐಎಗೆ ಹಸ್ತಾಂತರಿಸಲಾಗಿತ್ತು. ಇಂದು ಈ ಪ್ರಕರಣದ ವಿಚಾರಣೆಗೆ ಆಗಮಿಸಿದ ಎನ್‌ಐಎ ಅಧಿಕಾರಿಗಳ ಮೇಲೆ ದಾಳಿ ನಡೆದಿದ್ದು, ಇದು ಜನವರಿ 5 ರಂದು ನಡೆದ ಘಟನೆಯನ್ನು ಮತ್ತೆ ನೆನಪು ಮಾಡುವಂತೆ ಮಾಡಿದೆ. ಜನವರಿ 5 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು  ರೇಷನ್ ಕಾರ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಉತ್ತರ ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಪ್ರದೇಶಕ್ಕೆ ಆಗಮಿಸಿದ್ದ ವೇಳೆಯೂ ಕೆಲ ದುಷ್ಕರ್ಮಿಗಳು ಅಧಿಕಾರಿಗಳ ಮೇಲೆಯೇ ದಾಳಿ ನಡೆಸಿದ್ದರು.

ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಬೂತ್ ಮಟ್ಟದ ಇಬ್ಬರು ನಾಯಕರಾದ ಬಲೈಚರಣ ಮೈತಿ ಹಾಗೂ ಮೊನೊಬ್ರಾತಾ ಜಾನ ಅವರನ್ನು ಬಂಧಿಸಿ ವಿಚಾರಣೆಗೆ ಮುಂದಾದ ವೇಳೆ ಬೆಳಗ್ಗೆ 9.30ರ ಸುಮಾರಿಗೆ ಕೈಯಲ್ಲಿ ಕಲ್ಲು ಹಾಗೂ ದೊಣ್ಣೆಗಳನ್ನು ಹಿಡಿದಿದ್ದ ಮಹಿಳೆಯರು ಎನ್ಐಎ ಅಧಿಕಾರಿಗಳಿದ್ದ ವಾಹನವನ್ನು ಸುತ್ತುವರೆದರು. ಈ ಘಟನೆಯಲ್ಲಿ ಎನ್ಐಎ ಅಧಿಕಾರಿ ಗಾಯಗೊಂಡಿದ್ದು, ಅಧಿಕಾರಿಗಳ ವಾಹನದ ಗಾಜು ಜಖಂಗೊಂಡಿದೆ ಎಂದು ಹೆಸರು ಹೇಳಲಿಚ್ಚಿಸದ ಎನ್‌ಐಎ ಅಧಿಕಾರಿಯೊಬ್ಬರು ಹೇಳಿದ್ದಾರೆ. ಎನ್ಐಎ ಮೂಲಗಳ ಪ್ರಕಾರ ಬಂಧಿಸಲ್ಪಟ್ಟ ಇಬ್ಬರಿಂದ ರಹಸ್ಯವಾಗಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. 

ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟದ ತನಿಖೆಗೆ ತೆರಳಿದ ಎನ್‌ಐಎ ಅಧಿಕಾರಿಗಳ ಮೇಲೆಯೇ ದಾಳಿ

ಇತ್ತ ನಿನ್ನೆಯ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ ಎನ್‌ಐಎ ಸಿಬ್ಬಂದಿ ಭೂಪತಿನಗರದ ನಿವಾಸಿಗಳ ಮೇಲೆ ಹಲ್ಲೆ ನಡೆಸಿದರು. ಅದಕ್ಕೆ ಮಹಿಳೆಯರು ಅವರ ವಾಹನ ತಡೆದು ಪ್ರತಿಭಟಿಸಿದರು. ಮಹಿಳೆಯರ ಮೇಲೆ ದಾಳಿ ನಡೆದರೆ ಸುಮ್ಮನೆ ಕೂರುತ್ತಾರಾ? ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ' ಎಂದು ಕಿಡಿಕಾರಿದ್ದಾರೆ. 

ದಕ್ಷಿಣ ದಿನಾಜ್‌ಪುರದಲ್ಲಿ ಶನಿವಾರ ಚುನಾವಣೆ ಸಭೆಯಲ್ಲಿ ಮಾತನಾಡಿದ ಅವರು, 'ಎನ್‌ಐಎ ಮಧ್ಯರಾತ್ರಿ ದಾಳಿ ಮಾಡಿದ್ದು ಯಾಕೆ? ಪೊಲೀಸ್ ಅನುಮತಿ ಇದೆಯೇ? ಮಧ್ಯರಾತ್ರಿಯಲ್ಲಿ ಬೇರೆ ಯಾರಾದರೂ ಅಪರಿಚಿತರು ಸ್ಥಳಕ್ಕೆ ಭೇಟಿ ನೀಡಿದರೆ ಸ್ಥಳೀಯರು ಹೇಗೆ ಪ್ರತಿಕ್ರಿಯಿಸುತ್ತಾರೆ? ಅವರು ಚುನಾವಣೆಗೆ ಮುನ್ನ ಜನರನ್ನು ಏಕೆ ಬಂಧಿಸುತ್ತಿದ್ದಾರೆ? ಅವರು ಬಿಜೆಪಿಯನ್ನು ಬೆಂಬಲಿಸಲು ಇದೆಲ್ಲವನ್ನೂ ಮಾಡುತ್ತಿದ್ದಾರೆ. ಈ ಬಿಜೆಪಿಯ ಕೊಳಕು ರಾಜಕೀಯದ ವಿರುದ್ಧ ಹೋರಾಡಲು ನಾವು ಇಡೀ ಜಗತ್ತಿಗೆ ಕರೆ ನೀಡುತ್ತೇವೆ' ಎಂದು ಬ್ಯಾನರ್ಜಿ ಎನ್‌ಐಎ ಕಾರ್ಯಾಚರಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Follow Us:
Download App:
  • android
  • ios