2020ನೇ ವರ್ಷದ ಸಾರ್ವತ್ರಿಕ ರಜೆ ಪಟ್ಟಿ ಬಿಡುಗಡೆ: 7 ರಜೆ ನಷ್ಟ!
ಮುಂದಿನ ವರ್ಷ ಸರ್ಕಾರಿ ನೌಕರರಿಗೆ 7 ರಜೆ ನಷ್ಟ| 18 ಸಾರ್ವತ್ರಿಕ ರಜೆಗಳ ಪಟ್ಟಿಬಿಡುಗಡೆ; 21 ಪರಿಮಿತಿ ರಜೆ| 7 ಹಬ್ಬಗಳು ರಜೆ ದಿನ ಬಂದಿರುವುದರಿಂದ ನೌಕರರಿಗೆ ಲಾಸ್
ಬೆಂಗಳೂರು[ನ.23]: ರಾಜ್ಯ ಸರ್ಕಾರವು 2020ನೇ ಸಾಲಿನ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು 18 ಸಾರ್ವತ್ರಿಕ ರಜೆಗಳನ್ನು ಘೋಷಣೆ ಮಾಡಿದೆ.
ಉಳಿದಂತೆ ರಾಜ್ಯದಲ್ಲಿ ಸಾರ್ವತ್ರಿಕ ರಜಾ ದಿನ ಘೋಷಿಸಲ್ಪಟ್ಟ ಏಳು ಹಬ್ಬ ಹಾಗೂ ವಿಶೇಷ ಆಚರಣೆ ದಿನಗಳು ಭಾನುವಾರ, ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ಬಂದಿರುವುದರಿಂದ ಸರ್ಕಾರಿ ಉದ್ಯೋಗಿಗಳಿಗೆ ಏಳು ರಜೆಗಳು ಕಡಿತಗೊಂಡಿವೆ. ಉಳಿದಂತೆ 21 ಪರಿಮಿತಿ ರಜೆಗಳನ್ನು ನೀಡಿದ್ದು, ಇವುಗಳಲ್ಲಿ ಪೂರ್ವಾನುಮತಿಯೊಂದಿಗೆ ಎರಡು ಪರಿಮಿತಿ ರಜೆಗಳನ್ನು ಪಡೆಯಲು ಶುಕ್ರವಾರ ಕರ್ನಾಟಕ ಸರ್ಕಾರದ ಪರವಾಗಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಅಪರ ಕಾರ್ಯದರ್ಶಿ ಹೊರಡಿಸಿರುವ ರಜೆಗಳ ಪಟ್ಟಿಯಲ್ಲಿ ತಿಳಿಸಲಾಗಿದೆ.
ಈ ರಜೆಗಳು ಅನ್ವಯಿಸುವುದಿಲ್ಲ:
2020ನೇ ಸಾಲಿನಲ್ಲಿ ಭಾನುವಾರದ ದಿನ ಬರುವ ಜ.26ರ ಗಣರಾಜ್ಯೋತ್ಸವ, ಏ.26ರ ಬಸವ ಜಯಂತಿ, ಆ.30ರ ಮೊಹರಂ ಕಡೇ ದಿನ, ಅ.25ರ ಆಯುಧ ಪೂಜೆ, ನ.1ರ ಕನ್ನಡ ರಾಜ್ಯೋತ್ಸವ ಹಾಗೂ ಎರಡನೇ ಶನಿವಾರದ ದಿನ ಬರುವ ನ.14ರ ನರಕ ಚತುದರ್ಶಿ, ನಾಲ್ಕನೇ ಶನಿವಾರ ಬರುವ ಆ.22ರ ಗಣಪತಿ ವ್ರತದಂದು ಸರ್ಕಾರಿ ರಜೆ ಇರುವುದರಿಂದ ಪ್ರಸಕ್ತ ಸಾಲಿನ ರಜೆಗಳ ಪಟ್ಟಿಗೆ ಅವುಗಳನ್ನು ಸೇರಿಸಿಲ್ಲ.
ಲಾಂಗ್ ವೀಕೆಂಡ್ ಪ್ಲ್ಯಾನ್‌ಗೆ ಇಲ್ಲಿದೆ ಗೈಡ್
ಉಳಿದಂತೆ ಸಾರ್ವತ್ರಿಕ ರಜೆ ಪಟ್ಟಿಗೆ ಸೇರಿಸಲಾಗಿರುವ ಮುಸ್ಲಿಮರ ಹಬ್ಬಗಳು ನಿಗದಿತ ದಿನಾಂಕದಂದು ಬಾರದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸ್ಲಿಮರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿನ ರಜೆ ಮಂಜೂರು ಮಾಡಬಹುದು.
ಇನ್ನು ಕೊಡಗು ವ್ಯಾಪ್ತಿಯಲ್ಲಿ ಆಚರಿಸುವ ಸೆ.3ರ ಗುರುವಾರ ಕೈಲ್ ಮುಹೂರ್ತ, ಅ.17 ಶನಿವಾರ ತುಲಾ ಸಂಕ್ರಮಣ ಹಾಗೂ ಡಿ.1ರ ಮಂಗಳವಾರ ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯಿಸುವಂತೆ ಸ್ಥಳೀಯ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಇನ್ನು ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕವಾದ ರಜೆ ಪಟ್ಟಿಬಿಡುಗಡೆ ಮಾಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
2020ನೇ ವರ್ಷದ ಸಾರ್ವತ್ರಿಕ ರಜೆಗಳು
ಜ.15, ಬುಧವಾರ : ಮಕರ ಸಂಕ್ರಾಂತಿ
ಫೆ.21, ಶುಕ್ರವಾರ : ಮಹಾ ಶಿವರಾತ್ರಿ
ಮಾ.25, ಬುಧವಾರ : ಯುಗಾದಿ
ಏ.6, ಸೋಮವಾರ : ಮಹಾವೀರ ಜಯಂತಿ
ಏ.10, ಶುಕ್ರವಾರ : ಗುಡ್ ಫ್ರೈಡೇ
ಏ.14, ಮಂಗಳವಾರ: ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ
ಮೇ 1, ಶುಕ್ರವಾರ: ಕಾರ್ಮಿಕ ದಿನ
ಮೇ 25, ಸೋಮವಾರ : ರಂಜಾನ್
ಆ.1, ಶನಿವಾರ: ಬಕ್ರೀದ್
ಆ.15, ಶನಿವಾರ : ಸ್ವಾತಂತ್ರ್ಯ ದಿನಾಚರಣೆ
ಸೆ.17, ಗುರುವಾರ: ಮಹಾಲಯ ಅಮಾವಾಸ್ಯೆ
ಅ.2, ಶುಕ್ರವಾರ: ಗಾಂಧಿ ಜಯಂತಿ
ಅ.26, ಸೋಮವಾರ: ವಿಜಯದಶಮಿ
ಅ.30, ಶುಕ್ರವಾರ: ಈದ್ ಮಿಲಾದ್
ಅ.31, ಶನಿವಾರ :ಮಹರ್ಷಿ ವಾಲ್ಮೀಕಿ ಜಯಂತಿ
ನ.16, ಸೋಮವಾರ: ಬಲಿಪಾಡ್ಯಮಿ, ದೀಪಾವಳಿ
ಡಿ.3, ಗುರುವಾರ: ಕನಕದಾಸ ಜಯಂತಿ
ಡಿ.25, ಶುಕ್ರವಾರ : ಕ್ರಿಸ್‌ಮಸ್