ರಾಮ ಮಂದಿರ ಶಂಕುಸ್ಥಾಪನೆ ದಿನ ದಾಳಿಗೆ ತಾಲಿಬಾನ್ ಸಂಚು?
ಮಂದಿರ ಶಂಕುಸ್ಥಾಪನೆ ದಿನ ದಾಳಿಗೆ ತಾಲಿಬಾನ್ ಸಂಚು?| 370ನೇ ವಿಧಿ ರದ್ದಾಗಿ ಅಂದಿಗೆ 1 ವರ್ಷ
ನವದೆಹಲಿ(ಜು.31): ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುವ ಆಗಸ್ಟ್ 5ರ ದಿನವೇ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗಿ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಭಯೋತ್ಪಾದಕರು ಸಂಚು ರೂಪಿಸಿದ್ದಾರೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಪಾಕಿಸ್ತಾನ ಸೇನೆಯಿಂದ ತರಬೇತಿ ಪಡೆದ ತಾಲಿಬಾನ್ ಉಗ್ರಗಾಮಿಗಳ ಗುಂಪೊಂದು ಈ ಸಂದರ್ಭ ಭಾರತದ ಕೆಲವು ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಹೊಂಚು ಹಾಕಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ, ದಿಲ್ಲಿ, ಜಮ್ಮು-ಕಾಶ್ಮೀರ ಹಾಗೂ ದೇಶದ ಇತರ ಪ್ರಮುಖ ಭಾಗಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
'ಮನೆಯಲ್ಲೇ ದೀಪ ಬೆಳಗಿ, ಅಯೋಧ್ಯೆಗೆ ಬರಬೇಡಿ'
‘ಆಷ್ಘಾನಿಸ್ತಾನದ ಜಲಾಲಾಬಾದ್‌ನಲ್ಲಿ ಪಾಕಿಸ್ತಾನ ವಿಶೇಷ ಸೇವಾ ಪಡೆಯ ಯೋಧರು ಸುಮಾರು 20 ತಾಲಿಬಾನ್ ಉಗ್ರರಿಗೆ ತರಬೇತಿ ನೀಡಿದ್ದಾರೆ. ಮೇ ಕೊನೆಯ ವಾರ ನಡೆದ ಈದ್ ಉಲ್ ಫಿತ್‌್ರ ನಂತರವೇ ಇವರಿಗೆ ದಾಳಿ ನಡೆಸುವಂತೆ ಸೂಚನೆ ಇತ್ತು. ಆದರೆ ಇದರ ಸುಳಿವು ಅರಿತ ಭಾರತೀಯ ಪಡೆಗಳು ಬಿಗಿ ಭದ್ರತೆ ಕೈಗೊಂಡ ಕಾರಣ ದಾಳಿ ಕೈಗೂಡಿರಲಿಲ್ಲ’ ಎಂದು ಮೂಲಗಳು ಹೇಳಿವೆ.
"ರಾಮನ ಅಸ್ತಿತ್ವವೇ ಇಲ್ಲ ಎಂದಿದ್ದ ಕಾಂಗ್ರೆಸ್", ಇದೀಗ ಭಕ್ತರಾಗಿದ್ದು ಹೇಗೆ? ಬಿಜೆಪಿ ತಿರುಗೇಟು!
‘ಪಾಕಿಸ್ತಾನ ಸೇನೆಯು ಗಡಿ ಅಥವಾ ಗಡಿ ನಿಯಂತ್ರಣ ರೇಖೆ ಮೂಲಕ 20-25 ಉಗ್ರರನ್ನು ಭಾರತದ ಒಳಕ್ಕೆ ನುಸುಳಿಸಲಿದೆ. ಇನ್ನು 5-6 ಉಗ್ರರು ನೇಪಾಳ ಗಡಿ ಮೂಲಕ ನುಸುಳಲು ಸಂಚು ರೂಪಿಸಲಾಗಿದೆ. ಸಂವಿಧಾನದ 370ನೇ ವಿಧಿ ರದ್ದಾಗಿ ಆಗಸ್ಟ್ 5ಕ್ಕೆ 1 ವರ್ಷ ತುಂಬಲಿದೆ. ಅಂದೇ ರಾಮಮಂದಿರ ಭೂಮಿಪೂಜೆ ಇದೆ. ನಂತರ ಆ.15ರಂದು ಸ್ವಾತಂತ್ರ್ಯ ದಿನವಿದೆ. ಈ ದಿನಗಳಿಗೆ ಹೊಂದುವಂತೆಯೇ ದಾಳಿ ನಡೆಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ’ ಎಂದು ಮೂಲಗಳು ಹೇಳಿದ್ದನ್ನು ಮಾಧ್ಯಮಗಳು ವರದಿ ಮಾಡಿವೆ.