* ಟೆಲಿಗ್ರಾಂ, ಹೂಪ್‌ ಸೇರಿ ಇನ್ನಿತರ ಜಾಲತಾಣಗಳಲ್ಲಿ ಯುವಕರಿಗೆ ಗಾಳ* ಐಸಿಸ್‌ ಉಗ್ರ ಸಂಘಟನೆ ಸೇರಲು ತೆಹ್ರಾನ್‌ಗೂ ಹೋಗಿದ್ದ ಮಹಿಳೆ* ದೇಶದಲ್ಲಿ ಐಸಿಸ್‌ ಚಟುವಟಿಕೆಗಾಗಿ ಮಹಿಳೆಯರಿಂದ ಹಣ ವರ್ಗ

ಕಣ್ಣೂರು(ಆ.18): ಸಾಮಾಜಿಕ ಮಾಧ್ಯಮದ ಮುಖಾಂತರ ಐಸಿಸ್‌ ಉಗ್ರರ ಸಿದ್ಧಾಂತದ ಪ್ರಚಾರ ನಡೆಸುತ್ತಿದ್ದ ಆರೋಪದ ಮೇರೆಗೆ ಇಬ್ಬರು ಮಹಿಳೆಯರನ್ನು ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ) ಬಂಧಿಸಿದೆ.

ಕೇರಳದಲ್ಲಿ ಉಗ್ರ ಚಟುವಟಿಕೆಗಳಲ್ಲಿ ನಿರತನಾಗಿದ್ದ ಮೊಹಮ್ಮದ್‌ ಅಮೀನ್‌ ವಿರುದ್ಧ ಇದೇ ವರ್ಷದ ಮಾಚ್‌ರ್‍ನಲ್ಲಿ ಎನ್‌ಐಎ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು. ಇದರ ಜಾಡು ಹಿಡಿದಾಗ ಕೇರಳದ ಕಣ್ಣೂರಿನ ಮಿಝಾ ಸಿದ್ಧೀಖಿ ಮತ್ತು ಶಿಫಾ ಹ್ಯಾರಿಸ್‌ ಎನ್‌ಐಎ ಬಲೆಗೆ ಬಿದ್ದಿದ್ದಾರೆ.

ಜನಪ್ರಿಯ ಜಾಲತಾಣಗಳಾದ ಟೆಲಿಗ್ರಾಂ, ಹೂಪ್‌ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಐಸಿಸ್‌ ಚಿಂತನೆಗಳನ್ನು ಪ್ರಚಾರ ಮಾಡುತ್ತಿದ್ದರು. ಜೊತೆಗೆ ಯುವಕರನ್ನು ಐಸಿಸ್‌ ಸಿದ್ಧಾಂತದತ್ತ ಸೆಳೆದು, ಅವರನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ಸಿರಿಯಾದಲ್ಲಿ ಐಸಿಸ್‌ ಸಂಘಟನೆ ಸೇರಲು ಇರಾನ್‌ ರಾಜಧಾನಿ ತೆಹ್ರಾನ್‌ಗೆ ತೆರಳಿದ್ದ ಸಿದ್ಧೀಖಿ, ಅಮೀನ್‌ ಸೂಚನೆ ಮೇರೆಗೆ ಇನ್‌ಸ್ಟಾಗ್ರಾಂ ಮುಖಾಂತರ ಐಸಿಸ್‌ ಸಿದ್ಧಾಂತದ ಪ್ರಚಾರ ಮತ್ತು ಮುಸ್ಲಿಂ ಯುವಕರ ಸೆಳೆಯುತ್ತಿದ್ದಳು ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಅಲ್ಲದೆ ಅಮೀನ್‌ ಮತ್ತು ಸಿದ್ಧೀಖಿ ಸೂಚನೆ ಮೇರೆಗೆ ಶಿಫಾ ಹ್ಯಾರಿಸ್‌ ಐಸಿಸ್‌ ಉಗ್ರ ಚಟುವಟಿಕೆಗಳ ನಿರ್ವಹಣೆಗಾಗಿ ಮೊಹಮ್ಮದ್‌ ವಕಾರ್‌ ಲೋನ್‌ ಎಂಬುವನಿಗೆ ಹಣ ವರ್ಗಾವಣೆ ಮಾಡಿದ್ದಳು. ಹೀಗಾಗಿ ಈ ಪ್ರಕರಣದ ಬಗ್ಗೆ ಮತ್ತಷ್ಟು ಆಳವಾಗಿ ತನಿಖೆ ನಡೆಸಬೇಕಿದೆ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.