ನಾಗ್ಪುರ ಆಸ್ಪತ್ರೆಯಲ್ಲಿ 1 ಬೆಡ್‌ಗೆ ಇಬ್ಬರು ಕೊರೋನಾ ಪೇಶಂಟ್!
ನಾಗ್ಪುರ ಆಸ್ಪತ್ರೆಯಲ್ಲಿ 1 ಬೆಡ್‌ಗೆ ಇಬ್ಬರು ಕೊರೋನಾ ಪೇಶಂಟ್!| ವಿಡಿಯೋ ವೈರಲ್: ಮಹಾರಾಷ್ಟ್ರದ ಶೋಚನೀಯ ಸ್ಥಿತಿಗೆ ಮರುಕ
ನಾಗ್ಪುರ(ಮಾ.31): ದೇಶದಲ್ಲೇ ಕೊರೋನಾ ವೈರಸ್‌ನಿಂದ ಅತಿ ಹೆಚ್ಚು ಬಾಧಿತವಾಗಿರುವ ಮಹಾರಾಷ್ಟ್ರದಲ್ಲೀಗ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಹಾಸಿಗೆಗಳ ತೀವ್ರ ಕೊರತೆ ಎದುರಾಗಿದೆ. ನಾಗ್ಪುರ ಜಿಲ್ಲೆಯ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಒಂದೊಂದು ಬೆಡ್ ಮೇಲೆ ಇಬ್ಬರು ರೋಗಿಗಳನ್ನು ಮಲಗಿಸಿರುವ ವಿಡಿಯೋ ವೈರಲ್ ಆಗಿದ್ದು, ಮಹಾರಾಷ್ಟ್ರದ ಶೋಚನೀಯ ಸ್ಥಿತಿಗೆ ಎಲ್ಲರೂ ಮರುಕ ವ್ಯಕ್ತಪಡಿಸುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ನಾಗ್ಪುರದ ಈ ಆಸ್ಪತ್ರೆಯ ಬಹುತೇಕ ಎಲ್ಲಾ ಬೆಡ್‌ಗಳ ಮೇಲೆ ತಲಾ ಇಬ್ಬರು ರೋಗಿಗಳನ್ನು ಮಲಗಿಸಲಾಗಿದೆ. ಒಬ್ಬ ರೋಗಿಯ ತಲೆಯ ಬಳಿ ಇನ್ನೊಬ್ಬ ರೋಗಿಯ ಕಾಲು ಕಾಣಿಸುತ್ತದೆ. ಕೊರೋನಾ ವಾರ್ಡ್‌ಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೆಚ್ಚ ದುಬಾರಿ ಎಂಬ ಕಾರಣಕ್ಕೆ ಹೆಚ್ಚೆಚ್ಚು ರೋಗಿಗಳು ಸರ್ಕಾರಿ ಆಸ್ಪತ್ರೆಗಳಿಗೆ ಧಾವಿಸುತ್ತಿರುವುದರಿಂದ ಈ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗಿದೆ.
ವಿಡಿಯೋ ಕುರಿತು ಸ್ಪಷ್ಟನೆ ನೀಡಿರುವ ಆಸ್ಪತ್ರೆಯ ಮುಖ್ಯಸ್ಥರು, ಕೆಲ ಸಮಯದ ಹಿಂದೆ ಈ ಸಮಸ್ಯೆಯಾಗಿದ್ದು ನಿಜ. ಈಗ ಬಗೆಹರಿಸಲಾಗಿದೆ. ಒಂದೊಂದು ಬೆಡ್‌ಗೆ ಈಗ ಒಬ್ಬೊಬ್ಬ ರೋಗಿಯನ್ನು ಮಾತ್ರ ಮಲಗಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಪ್ರಸ್ತುತ ವಿಡಿಯೋ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದ್ದು, ಮಹಾರಾಷ್ಟ್ರ ಸರ್ಕಾರ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವತ್ತ ಗಮನಹರಿಸದೆ ಕುಂಭಕರ್ಣನಂತೆ ನಿದ್ರಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.