ಜೈಪುರ(ಮೇ.11): ಕೋವಿಡ್‌ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಬೆಡ್‌ ಕೊರತೆ ಬಗ್ಗೆ ಸರ್ಕಾರಗಳ ವಿರುದ್ಧ ದೂಷಾರೋಪಣೆಗಳು ಹೆಚ್ಚುತ್ತಿರುವ ನಡುವೆಯೇ, ದೂಷಣೆ ಬದಲು ಸ್ವತಃ ಜನರೇ ಕೇವಲ 48 ಗಂಟೆಗಳ ಅವಧಿಯಲ್ಲಿ 2 ಕೋವಿಡ್‌ ಆರೈಕೆ ಕೇಂದ್ರ ತೆರೆದಿರುವ ಶ್ಲಾಘನೀಯ ಘಟನೆಯೊಂದು ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ನಡೆದಿದೆ.

ರಾಜ್ಯದ ಬಾರ್ಮರ್‌ ಜಿಲ್ಲೆಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಬೇತೂ ಮತ್ತು ಸಂಭಾರ್‌ ಎಂಬಲ್ಲಿ ಈ ಎರಡು ಆರೈಕೆ ಕೇಂದ್ರಗಳು ಆರಂಭವಾಗಿದೆ. ಬೇತೂ ಕೇಂದ್ರದಲ್ಲಿ 100 ಬೆಡ್‌ಗಳಿದ್ದು, ಆ ಪೈಕಿ 30ಕ್ಕೆ ಆಕ್ಸಿಜನ್‌ ಸಿಲಿಂಡರ್‌ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು ಸಂಭಾರ್‌ ಕೇಂದ್ರದಲ್ಲಿ 25 ಬೆಡ್‌ ಇದ್ದು, 2ಕ್ಕೆ ಆಕ್ಸಿಜನ್‌ ಸಿಲಿಂಡರ್‌ ಸೌಲಭ್ಯ ಕಲ್ಪಿಸಲಾಗಿದೆ.

ಬಾರ್ಮರ್‌ ಭೌಗೋಳಿಕವಾಗಿ ಅತ್ಯಂತ ದೊಡ್ಡ ಪ್ರದೇಶ. ಹೀಗಾಗಿ ಎಲ್ಲರಿಗೂ ಜಿಲ್ಲಾಸ್ಪತ್ರೆಗಳಲ್ಲಿ ಸೇವೆ ಸಿಗುವುದು ಕಷ್ಟವಾಗುತ್ತದೆ. ಹೀಗಾಗಿ ಸ್ಥಳೀಯರಿಗೆ ಅವರವರ ಸ್ಥಳದಲ್ಲೇ ಚಿಕಿತ್ಸೆ ಸಿಗಲಿ ಎಂಬ ಕಾರಣಕ್ಕಾಗಿ ಈ ಆರೈಕೆ ಕೇಂದ್ರ ತೆರೆಯಲಾಗಿದೆ. ಕಂಟೇನರ್‌ಗಳನ್ನು ಬಳಸಿಕೊಂಡು ಇವುಗಳನ್ನು ನಿರ್ಮಿಸಲಾಗಿದೆ. ತೈಲ ಬಾವಿ ಕೊರೆಯುವ ಕಂಪನಿಗಳಿಗೆ ತಾತ್ಕಾಲಿಕ ಕಟ್ಟಡ ನಿರ್ಮಿಸಿಕೊಡುವ ಸ್ಥಳೀಯ ಉದ್ಯಮಿಯೊಬ್ಬರ ನೆರವು ಮತ್ತು ಕೆಲ ಸ್ಥಳೀಯರ ಆರ್ಥಿಕ ನೆರವು ಪಡೆದು, ಕೇಂದ್ರಗಳನ್ನು ಆರಂಭಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರದಿಂದ ಒಂದು ಪೈಸೆ ಹಣವನ್ನೂ ಪಡೆದುಕೊಂಡಿಲ್ಲ ಎಂದಿದ್ದಾರೆ ಇಡೀ ಯೋಜನೆ ಹಿಂದಿನ ಶಕ್ತಿಯಾದ ಸ್ಥಳಿಯ ಕಾಂಗ್ರೆಸ್‌ ಶಾಸಕ ಹರೀಶ್‌ ಚೌಧರಿ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona