ನವದೆಹಲಿ(ಡಿ.03): ಕೊರೋನಾ ಹಾವಳಿ, ರಾಜಕೀಯ ಕೆಸರೆರಚಾಟದ ನಡುವೆ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಟ್ವಿಟರ್ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರ ಟ್ವೀಟ್‌ಗಳಿಗೇ ಕಡಿವಾಣ ಹಾಕಿದ್ದ ಟ್ವಿಟರ್ ಈಗ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮಾಡಿರುವ ಟ್ವೀಟ್‌ಗೆ 'ಸುಳ್ಳು ಸುದ್ದಿ' ಎಂದು ಟ್ಯಾಗ್ ಹಾಕಿದೆ.

ಹೌದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಷಡ್ಯಂತ್ರ, ಅಲ್ಲಿ ಪೊಲೀಸರು ರೈತರಿಗೆ ಲಾಠಿ ಬೀಸಿದ್ದು ಸುಳ್ಳು ಎಂದು ಅಮಿತ್ ಮಾಳವೀಯ ಮಾಡಿದ ಕೆಲ ಟ್ವೀಟ್​ಗಳು ಸತ್ಯಕ್ಕೆ ದೂರವಾದದ್ದು ಎಂದು ಗಮನಿಸಿರುವ ಟ್ವಿಟರ್  ಈ ಕ್ರಮ ಕೈಗೊಂಡಿದೆ. 

ನಡೆದದ್ದೇನು?

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ ದೃಶ್ಯವೊಂದನ್ನು ಪೋಸ್ಟ್‌ ಮಾಡುತ್ತಾ ಇದು ನಿಜಕ್ಕೂ ಬೇಸರ ತರಿಸುವ ಫೋಟೋ. ಜೈ ಜವಾನ್ ಜೈ ಕಿಸಾನ್ ಎಂಬುದು ನಮ್ಮ ಸ್ಲೋಗನ್ ಆಗಿದೆ. ಆದರೆ, ಪ್ರಧಾನ ಮಂತ್ರಿ ಅವರ ಅಹಂಕಾರವು ರೈತನ ವಿರುದ್ಧ ಯೋಧ ತಿರುಗಿ ನಿಲ್ಲುವಂತಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. 

ಹೀಗಿರುವಾಗ ರಾಹುಲ್ ಗಾಂಧಿಯವರ ಈ ಟ್ವೀಟ್‌ಗೆ ಉತ್ತರ ಎಂಬಂತೆ ಅಮಿತ್ ಮಾಳವೀಯ, ರಾಹುಲ್ ಗಾಂಧಿ ವಿಶ್ವಾಸಾರ್ಹವಲ್ಲದ ವಿಪಕ್ಷ ನಾಯಕ ಎಂದು ಪ್ರತ್ಯಾರೋಪ ಮಾಡಿ ಆ ದೃಶ್ಯದಲ್ಲಿ ವೃದ್ಧ ರೈತನಿಗೆ ಪೊಲೀಸರು ಏನೂ ಮಾಡಲಿಲ್ಲ ಎಂದು ವಾದಿಸಿ ಒಂದು ವಿಡಿಯೋ ತುಣಕೊಂದನ್ನ ಹಾಕಿದ್ದರು. ಆದರೆ, ಆ ವಿಡಿಯೋ ತುಣುಕು ಎಡಿಟ್ ಆಗಿದ್ದಲ್ಲದೇ, ಪೂರ್ಣ ದೃಶ್ಯ ಇರಲಿಲ್ಲ. ಇದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಇದರ ಸಂಪೂರ್ಣ ದೃಶ್ಯ ಹರಿದಾಡಿತ್ತು. ಅದರಲ್ಲಿ ಪೊಲೀಸರು ಆ ವೃದ್ಧನ ಮೇಲೆ ಲಾಠಿ ಹೊಡೆದಿರುವುದು ಸ್ಪಷ್ಟವಾಗಿ ತೋರಿಸಲಾಗಿತ್ತು.

ಆ ದೃಶ್ಯದಲ್ಲಿದ್ದ ರೈತನನ್ನು ಸುಖದೇವ್ ಸಿಂಗ್ ಎಂದು ಗುರುತಿಸಲಾಗಿದೆ. ಸದ್ಯ ಹರಿಯಾಣ-ದೆಹಲಿ ಗಡಿಭಾಗದಲ್ಲಿರುವ ಅವರನ್ನು ಕೆಲ ಮಾಧ್ಯಮ ಪ್ರತಿನಿಧಿಗಳು ಸಂಪರ್ಕಿಸಿ ವಿಚಾರಿಸಿವೆ. ಅವರ ಅಂಗೈ, ಬೆನ್ನು ಮತ್ತು ತೋಳಿಗೆ ಪೆಟ್ಟು ಬಿದ್ದಿದೆ. ನನಗೆ ಪೆಟ್ಟು ಬಿದ್ದಿಲ್ಲ ಅಂತಾರೆ. ಇಲ್ಲಿ ನೋಡಿ ಗಾಯಗಳಾಗಿರುವುದು ಎಂದು ಆ ವೃದ್ಧ ರೈತ ಹೇಳಿದ್ದಾರೆ