ನವದೆಹಲಿ(ಜೂ.13): ‘ರೆಡಿ ಟು ಈಟ್‌’ (ಸಿದ್ಧಪಡಿಸಲಾದ) ಪರೋಟಾಗಳು ‘ರೋಟಿ’ಗಳಂತಲ್ಲ. ಹೀಗಾಗಿ ರೋಟಿಗಳಂತೆ ಅವುಗಳಿಗೆ ಶೇ.5 ಜಿಎಸ್‌ಟಿ ಇರಲ್ಲ. ಇದರ ಬದಲಾಗಿ ಶೇ.18 ಜಿಎಸ್‌ಟಿ ಕಟ್ಟಬೇಕು ಎಂದು ತೆರಿಗೆ ಕುರಿತಾದ ಬೆಂಗಳೂರಿನ ಪ್ರಾಧಿಕಾರವೊಂದು ತೀರ್ಪು ನೀಡಿದೆ.

ಮಲಬಾರ್‌ ಪರೋಟಾ ಮತ್ತು ಗೋದಿ ಪರೋಟಾ ಜಿಎಸ್‌ಟಿ ಅಡಿಯ ‘1905ನೇ ಚಾಪ್ಟರ್‌’ (ಶೇ.5ರ ಜಿಎಸ್‌ಟಿ) ಅಡಿ ಬರುತ್ತವೆ. ಹಾಗಿದ್ದಾಗ ಪರೋಟಾಗೆ ಶೇ.18ರ ಜಿಎಸ್‌ಟಿ ಹಾಗೂ ರೋಟಿ/ಚಪಾತಿ/ಖಾಕ್ರಾಗೆ ಶೇ.5ರ ಜಿಎಸ್‌ಟಿ ದರ ಏಕೆ? ರೋಟಿ-ಚಪಾತಿ ಥರ ಪರೋಟಾಗೂ ಒಂದೇ ರೀತಿಯ ಶೇ.5ರ ಜಿಎಸ್‌ಟಿ ದರ ವಿಧಿಸಬೇಕು ಎಂದು ಬೆಂಗಳೂರಿನ ‘ಐಡಿ ಫ್ರೆಶ್‌ಫುಡ್ಸ್‌’ ಕಂಪನಿಯು, ತೆರಿಗೆ ಕುರಿತಾದ ಬೆಂಗಳೂರಿನ ಅಥಾರಿಟಿ ಆಫ್‌ ಅಡ್ವಾನ್ಸ್‌$್ಡ ರೂಲಿಂಗ್‌ (ಎಆರ್‌ಆರ್‌) ಮೊರೆ ಹೋಗಿತ್ತು.

ಇದನ್ನು ಪರಿಶೀಲಿಸಿ ತೀರ್ಪು ಪ್ರಕಟಿಸಿರುವ ಪ್ರಾಧಿಕಾರ, ‘ರೋಟಿ, ಚಪಾತಿ, ಖಾಕ್ರಾಗಳು ಸಂಪೂರ್ಣ ತಿನ್ನಲು ಸಿದ್ಧ ಇರುವ ಉತ್ಪನ್ನಗಳು. ಮನುಷ್ಯರು ತಿನ್ನುವ ಮುನ್ನ ಅವುಗಳ ಸಂಸ್ಕರಣೆ ಅಗತ್ಯವಿಲ್ಲ. ಆದರೆ ಪರೋಟಾ ಹಾಗಲ್ಲ. ಅವನ್ನು ತಿನ್ನುವ ಮೊದಲು ಬಿಸಿ ಮಾಡಲೇಬೇಕು. ಹೀಗಾಗಿ ಇವು 1905ರ ಚಾಪ್ಟರ್‌ (ಶೇ.5 ಜಿಎಸ್‌ಟಿ) ಅಡಿ ಬಾರದೇ, 2016ನೇ ಚಾಪ್ಟರ್‌ (ಶೇ.18 ಜಿಎಸ್‌ಟಿ) ಅಡಿ ಬರುತ್ತವೆ’ ಎಂದು ಹೇಳಿದೆ.