Asianet Suvarna News Asianet Suvarna News

ಬಾರಾಬಂಕಿ: ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಟ್ರಕ್, 18 ಮಂದಿ ದಾರುಣ ಸಾವು!

* ರಸ್ತೆ ಬದಿ ಕೆಟ್ಟು ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಟ್ರಕ್

* ರಸ್ತೆ ಅಪಘಾತದಲ್ಲಿ 18 ಮಂದಿ ಸಾವು, ಹಲವರಿಗೆ ಗಾಯ, ಮುಂದುವರೆದ ರಕ್ಷಣಾ ಕಾರ್ಯ

* ಬಾರಾಬಂಕಿ ಬಳಿ ಸಮೀಪದ ಲಕ್ನೋ-ಅಯೋಧ್ಯಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ

* ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ ಪಿಎಂ ಮೋದಿ

18 Labourers Sleeping On Road Killed As Truck Rams Bus In UP pod
Author
Bangalore, First Published Jul 28, 2021, 9:51 AM IST
  • Facebook
  • Twitter
  • Whatsapp

ಲಕ್ನೋ(ಜು.28): ಉತ್ತರ ಪ್ರದೇಶದ ಬಾರಾಬಂಕಿ ಬಳಿ ಸಮೀಪದ ಲಕ್ನೋ-ಅಯೋಧ್ಯಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 18 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ರಾಮ್ ಸನೇಹಿ ಘಾಟ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 1.30ಕ್ಕೆ  ಡಬಲ್ ಡೆಕ್ಕರ್ ಬಸ್‌ಗೆ  ಟ್ರಕ್‌ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. 19ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಶೀಘ್ರವೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ಬಸ್ :

ಹರ್ಯಾಣದ ಪಾಲ್ವಾಲ್‌ನಿಂದ ಹೊರಟು ಬಿಹಾರದ ಕಡೆಗೆ ಸಾಗುತ್ತಿದ್ದ ಬಸ್ ರಾತ್ರಿ 8 ಗಂಟೆ ಸುಮಾರಿಗೆ ಮಧ್ಯ ದಾರಿಯಲ್ಲಿ ಕೆಟ್ಟಿತ್ತು. ಹೀಗಾಗಿ ಚಾಲಕ ಬೇರೆ ವಿಧಿ ಇಲ್ಲದೇ ಇದನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿದ್ದ. ಆದರೆ ರಾತ್ರಿ ಸುಮಾರು 1.30ಕ್ಕೆ ಟ್ರಕ್ ಒಂದು ಡಬಲ್ ಡೆಕ್ಕರ್ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಅಪಾರ ಸಾವು ನೋವು ಸಂಭವಿಸಿದೆ. 

ಲಕ್ನೋ ಎಡಿಜಿ ಸತ್ಯ ನಾರಾಯಣ್ ಸಾಬಟ್ ಘಟನೆ ಬಗ್ಗೆ ಮಾತನಾಡಿದ್ದು, ದುರಂತದಲ್ಲಿ 18 ಮಂದಿ ಸಾವನ್ನಪ್ಪಿರುವ ವಿಷಯವನ್ನು ಖಚಿತಪಡಿಸಿದ್ದಾರೆ. ಬರಾಬಂಕಿ ಜಿಲ್ಲೆಯ ರಾಮ್​ ಸನೇಹಿ ಘಾಟ್​ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯರಾತ್ರಿ ಈ ದುರಂತ ಅಪಘಾತ ಸಂಭವಿಸಿದ್ದು, 18 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವರು ಬಸ್ಸಿನಡಿಯಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ ಎಂದಿದ್ದಾರೆ.

ಸಾವನ್ನಪ್ಪಿದವರಲ್ಲಿ ಬಹುತೇಕರು ಬಿಹಾರದ ಸಿತಾಮರ್ಹಿ ಮತ್ತು ಸಹರ್ಸ ಸೇರಿದಂತೆ ಅನೇಕ ಜಿಲ್ಲೆಯವರಾಗಿದ್ದಾರೆ. ಇವರು ಪಂಜಾಬ್ ಮತ್ತು ಹರಿಯಾಣದಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ನಿನ್ನೆ ಮರಳಿ ತಮ್ಮ ರಾಜ್ಯಕ್ಕೆ ತೆರಳುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಅತ್ತ ಪ್ರಧಾನಿ ನರೇಂದ್ರ ಮೋದಿ ಕೂಡಾ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಸೂಚಿಸಿದ್ದಾರೆ. 

Follow Us:
Download App:
  • android
  • ios