ಕೊರೋನಾದಿಂದ ಮೃತ; ಸೂಚನೆ ಮೀರಿ ಶವದ ಬ್ಯಾಗ್ ತೆರೆದ 18 ಮಂದಿಗೆ ವೈರಸ್ ಧೃಡ!
ಕೊರೋನಾ ವೈರಸ್ ತಗುಲಿದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಮಹಿಳೆಯ ಶವ ಕುಟುಂಬಕ್ಕೆ ಹಸ್ತಾಂತರಿಸುವಾಗ ಆಸ್ಪತ್ರೆ ಸಿಬ್ಬಂದಿಗಳು ಸ್ಪಷ್ಟ ಸೂಚನೆ ನೀಡಿದ್ದರು. ಕುಟುಂಬದ ಸದಸ್ಯರನ್ನು ಕಳೆದುಕೊಂಡ ನೋವು ತಡೆಯಲಾಗದೆ ಕೊನೆಯ ಬಾರಿ ಮುಖ ನೋಡಲು ಸದಸ್ಯರು ನಿಯಮ ಉಲ್ಲಂಘಿಸಿದ್ದಾರೆ. ಇದೀಗ ಸದಸ್ಯರಿಗೆ ಕೊರೋನಾ ವೈರಸ್ ತಗುಲಿದೆ.
ಮುಂಬೈ(ಮೇ.30): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಇದೀಗ ಕೆಲ ಘಟನೆಗಳು ನಿಜಕ್ಕೂ ಬೇಸರ ತರಿಸುತ್ತದೆ. ಎಲ್ಲರೂ ಇದ್ದರೂ ಸತ್ತಾಗ ಯಾರೂ ಹತ್ತಿರ ಸುಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಬೈನ ಉಲ್ಲಾಸನಗರದಲ್ಲಿನ ಮಹಿಳೆಯೊಬ್ಬರು ಕೊರೋನಾ ವೈರಸ್ ಕಾರಣ ಆಸ್ಪತ್ರೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಮುಂಬೈ ಆಸ್ಪತ್ರೆ ಕಾರಿಡಾರ್ ತುಂಬಾ ಶವಗಳ ಸಾಲು: ಟ್ವೀಟ್ ವೈರಲ್!.
ಮುಂಬೈನಲ್ಲಿ ಕೊರೋನಾ ವೈರಸ್ ಸ್ಫೋಟಗೊಂಡಿರುವ ಕಾರಣ ಅದೆಷ್ಟು ಮುಂಜಾಗ್ರತ ಕ್ರಮ ಕೈಗೊಂಡಲು ಕಡಿಮೆ. ಹೀಗಾಗಿ ಶವಗಳನ್ನು ಕುಟುಂಬಕ್ಕೆ ಹಸ್ತಾಂತರಿಸುವಾಗ ಆಸ್ಪತ್ರೆ ಸಿಬ್ಬಂದಿಗಳು ವಿಶೇಷ ಬ್ಯಾಗ್‌ನಲ್ಲಿಟ್ಟು ಶವಗಳನ್ನು ಹಸ್ತಾಂತರಿಸುತ್ತಿದ್ದಾರೆ. ಹೀಗೆ ಕೊರೋನಾದಿಂದ ಮೃತಪಟ್ಟ ಮಹಿಳೆಯ ಶವವನ್ನು ಬ್ಯಾಗ್‌ನಲ್ಲಿಟ್ಟು ಮುಚ್ಚಿ ಹಸ್ತಾಂತರಿಸಿದ್ದರು.
ಯಾವುದೇ ಕಾರಣಕ್ಕೂ ಬ್ಯಾಗ್ ತೆರೆಯಬಾರದು. ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಸೂಚನೆಯನ್ನು ನೀಡಿದ್ದರು. ಮೊದಲೇ ನೋವಿನಲ್ಲಿದ್ದ ಕುಟುಂಬ ಸದಸ್ಯರು ಕೊನೆಯ ಬಾರಿಗೆ ಅಗಲಿದ ಸದಸ್ಯರ ಮುಖ ನೋಡಲು ಮುಂದಾಗಿದ್ದಾರೆ. ಹೀಗಾಗಿ ಬ್ಯಾಗ್ ತೆರೆದು ಕೊನೆಯ ಬಾರಿ ಮುಖ ನೋಡಿ ನೋವಿನಿಂದ ಅಂತ್ಯಸಂಸ್ಕಾರ ಮಾಡಿದ್ದಾರೆ.
ನೋವಿನಲ್ಲಿದ್ದ ಕುಟುಂಬ ಸದಸ್ಯರಿಗೆ ಕೆಲ ದಿನಗಳಲ್ಲೇ ಮತ್ತೊಂದು ಆಘಾತ ಎದುರಾಗಿದೆ. ಶವಸಂಸ್ಕಾರದಲ್ಲಿ ಪಾಲ್ಗೊಂಡ 18 ಕುಟುಂಬ ಸದಸ್ಯರಿಗೆ ಕೊರೋನಾ ವೈರಸ್ ತಗುಲಿರುವುದು ಖಚಿತವಾಗಿದೆ. ಇದೀಗ ಮಹಾರಾಷ್ಟ್ರ ಸರ್ಕಾರ ಕೂಡ ಶವದ ಬ್ಯಾಗ್ ತೆರೆಯುವಂತಿಲ್ಲ ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದೆ.