Asianet Suvarna News Asianet Suvarna News

ಕೇರಳ ರಣಮಳೆ, ಭೂಕುಸಿತ: 18 ಬಲಿ, ಅನೇಕ ಮಂದಿ ನಾಪತ್ತೆ!

* ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ

* ಕೇರಳ ರಣಮಳೆ, ಭೂಕುಸಿತ: 18 ಬಲಿ, ಅನೇಕ ಮಂದಿ ನಾಪತ್ತೆ

* 12 ಜಿಲ್ಲೆಗೆ ಕಟ್ಟೆಚ್ಚರ ಘೋಷಣೆ

* ಶಾಲಾ-ಕಾಲೇಜುಗಳ ಪುನಾರಂಭ, ಶಬರಿಮಲೆಗೆ ಭಕ್ತರ ಭೇಟಿ ಮುಂದೂಡಿಕೆ

18 Dead Many Missing After Kerala Rain Triggers Floods Landslides pod
Author
Bangalore, First Published Oct 17, 2021, 7:21 AM IST

ತಿರುವನಂತಪುರಂ(ಅ.17): ಅರಬ್ಬಿ ಸಮುದ್ರದಲ್ಲಿ(Arabian Sea) ವಾಯುಭಾರ ಕುಸಿತದ ಪರಿಣಾಮ ದಕ್ಷಿಣ ಮತ್ತು ಮಧ್ಯ ಕೇರಳದ(Kerala) ಹಲವು ಜಿಲ್ಲೆಗಳಲ್ಲಿ ಶುಕ್ರವಾರದಿಂದೀಚೆಗೆ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ದಿಢೀರ್‌ ಪ್ರವಾಹ(Flood) ಕಾಣಿಸಿಕೊಂಡಿದೆ. ಇನ್ನು ಕೆಲವೆಡೆ ಭೂಕುಸಿತ ಸಂಭವಿಸಿದ್ದು, ಮಳೆ ಸಂಬಂಧಿ ದುರ್ಘಟನೆಗಳಿಗೆ 18 ಜನರು ಬಲಿಯಾಗಿದ್ದು, ಅನೇಕರು ನಾಪತ್ತೆಯಾಗಿದ್ದಾರೆ.

"

ಮುಂದಿನ 48 ಗಂಟೆಗಳ ಅವಧಿಯಲ್ಲೂ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ 5 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌(Red Alert) ಮತ್ತು 7 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌(Orange Alert) ಘೋಷಿಸಲಾಗಿದೆ.

ಈ ನಡುವೆ ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌(CM Pinarayi Vijayan), ರಕ್ಷಣಾ ಕಾರ್ಯಾಚರಣೆಗೆ ನೌಕಾಪಡೆ, ವಾಯುಪಡೆಯ(Indian Air Force0 ನೆರವು ಕೋರಿದ್ದಾರೆ. 2018 ಮತ್ತು 2019ರಲ್ಲಿ ರಾಜ್ಯವನ್ನು ಕಾಡಿದ್ದ ಮಳೆ, ಪ್ರವಾಹ, ಭೂಕುಸಿತದ(Landslide) ಪರಿಸ್ಥಿತಿ ಈಗ ನಿರ್ಮಾಣವಾಗಿಲ್ಲ ಎಂದು ಸರ್ಕಾರ ಭರವಸೆ ನೀಡಿದೆಯಾದರೂ, ಭೂಕುಸಿತ ಸಂಭವಿಸಿದ ಪ್ರದೇಶಗಳಿಗೆ ಇನ್ನೂ ನೆರವು ರವಾನೆಯಾಗದೇ ಇರುವುದು ಜನರ ಆತಂಕ ಹೆಚ್ಚಿಸಿದೆ.

ಪಟ್ಟಣಾಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ ಮತ್ತು ತ್ರಿಶ್ಶೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ರೆಡ್‌ ಅಲರ್ಟ್‌(Red Alert) ಘೋಷಿಸಲಾಗಿದೆ. ಕೊಟ್ಟಾಯಂ ಜಿಲ್ಲೆಯ ಕೂಟ್ಟಿಕಲ್‌ ಮತ್ತು ಇಡುಕ್ಕಿ ಜಿಲ್ಲೆಯ ಪೆರುವಂಥನಂ ಎಂಬ ಬೆಟ್ಟಪ್ರದೇಶದ ಗ್ರಾಮಗಳಲ್ಲಿ ನದಿ ನೀರು ಉಕ್ಕಿ ಹರಿದು ಹಲವು ಮನೆಗಳನ್ನು ಕೊಚ್ಚಿಕೊಂಡು ಹೋಗಿದೆ. ಪ್ರವಾಹದ ಪರಿಣಾಮ ಹಲವೆಡೆ ಭಾರೀ ಭೂ ಕುಸಿತ ಸಂಭವಿಸಿದ್ದು, ಈ ಗ್ರಾಮಗಳು ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿವೆ. ಆ ಗ್ರಾಮಗಳ ಜನರ ರಕ್ಷಣೆಗಾಗಿ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿ ಧಾವಿಸಿದ್ದಾರೆ. ಈ 2 ಗ್ರಾಮಗಳಲ್ಲಿ ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸಾವನ್ನಪ್ಪಿದೆ. ಇನ್ನೊಂದು ಪ್ರಕರಣದಲ್ಲಿ ಪ್ರವಾಹದಲ್ಲಿ ಕಾರು ಕೊಚ್ಚಿ ಹೋಗಿ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಂದು ಮನೆ ಕುಸಿತ ಪ್ರಕರಣದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"

ಕೊಟ್ಟಾಯಂ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಸಿಕ್ಕಿಬಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಿಂದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಿಸುವ ಮತ್ತು ಇತರೆಡೆ ಪ್ರವಾಹದಲ್ಲಿ ವಾಹನಗಳು ಕೊಚ್ಚಿಹೋಗುವ ಹಲವು ವಿಡಿಯೋಗಳು ವೈರಲ್‌ ಆಗಿವೆ. ರಾಜ್ಯದಲ್ಲಿ 6 ಎನ್‌ಡಿಆರ್‌ಎಫ್‌ ತಂಡಗಳು ಮತ್ತು ಎರಡು ಭೂಸೇನಾ ತುಕಡಿಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

ಈ ನಡುವೆ ಸಿಎಂ ಪಿಣರಾಯಿ ವಿಜಯನ್‌ ಕೂಡ ಅಧಿಕಾರಿಗಳ ತುರ್ತು ಸಭೆ ಕರೆದು ಹಲವು ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ಫೇಸ್‌ಬುಕ್‌ ಮೂಲಕ ಲೈವ್‌ ಬಂದು ಜನರು ಹೆಚ್ಚು ಜಾಗರೂಕರಾಗಿರುವಂತೆ ತಿಳಿಸಿದ್ದಾರೆ. ಭಾರೀ ಮಳೆ ಹಿನ್ನೆಲೆಯಲ್ಲಿ ಅ.18ರಿಂದ ಆರಂಭವಾಗಬೇಕಿದ್ದ ಕಾಲೇಜುಗಳನ್ನು ಅ.20ರಿಂದ ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಶಬರಿಮಲೆಗೆ ಭಕ್ತರ ಪ್ರವೇಶವನ್ನು ಅ.19ಕ್ಕೆ ಮುಂದೂಡಲಾಗಿದೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಹಲವು ಅಣೆಕಟ್ಟೆಗಳು ತುಂಬುವ ಹಂತ ತಲುಪಿದ್ದು, ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ ತಗ್ಗು ಪ್ರದೇಶಗಳಲ್ಲಿ ಮತ್ತಷ್ಟುಪ್ರವಾಹ ಹೆಚ್ಚಾಗಿದೆ. ಅಣೆಕಟ್ಟು ಕೆಳಭಾಗದ ಗ್ರಾಮಗಳ ಜನತೆಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ನಿರ್ಬಂಧ ವಿಧಿಸಲಾಗಿದೆ.

ಆಗಿರುವುದೇನು?

- ವಾಯುಭಾರ ಕುಸಿತ ಪರಿಣಾಮ ಕೇರಳದ ದಕ್ಷಿಣ, ಮಧ್ಯ ಭಾಗದ ಜಿಲ್ಲೆಗಳಲ್ಲಿ ಭರ್ಜರಿ ಮಳೆ

- ಇನ್ನೂ 48 ಗಂಟೆ ಭಾರೀ ಮಳೆ ನಿರೀಕ್ಷೆ. 5 ಜಿಲ್ಲೆಗೆ ರೆಡ್‌ ಅಲರ್ಟ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

- ಕೊಟ್ಟಾಯಂ, ಇಡುಕ್ಕಿ ಜಿಲ್ಲೆಗಳಲ್ಲಿ ದಿಢೀರ್‌ ಪ್ರವಾಹ, ಭೂಕುಸಿತ. ಕೊಚ್ಚಿ ಹೋದ ಮನೆಗಳು

- ಭೂಸೇನೆ, ನೌಕಾಪಡೆ, ವಾಯುಪಡೆ ಸಿಬ್ಬಂದಿಯಿಂದ ಸಮರೋಪಾದಿ ರಕ್ಷಣಾ ಕಾರ್ಯಾಚರಣೆ

- 2018, 2019ರಷ್ಟುಪರಿಸ್ಥಿತಿ ಭೀಕರವಾಗಿಲ್ಲ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌

ಭೂಕುಸಿತ ಪ್ರದೇಶಕ್ಕೆ ರಕ್ಷಣಾ ಪಡೆ

"

ಇನ್ನು ಕೇರಳದಲ್ಲಿ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಭಾರತೀಯ ನೌಕಾಸೇನೆ ರಕ್ಷಣಾ ಕಾರ್ಯ ಆರಂಭಿಸಿದೆ. ಸಂತ್ರಸ್ತರಿಗೆ ಅಗತ್ಯ ಸಮಾಗ್ರಿ ರವಾನಿಸುವುದರೊಂದಿಗೆ, ಪ್ರವಾಹ ಹಾಗೂ ಭುಕುಸಿತ ಪ್ರದೆಶದಲ್ಲಿ ಸಿಲುಕಿಕೊಂಡಿರುವ ರಕ್ಷಣೆಯನ್ನು ಆರಂಭಿಸಿದೆ.  

Follow Us:
Download App:
  • android
  • ios