Asianet Suvarna News Asianet Suvarna News

ಗುಜರಾತ್‌ನ ಕೊರೋನಾ ಆಸ್ಪತ್ರೆಯಲ್ಲಿ ಬೆಂಕಿ ದುರಂತ: 18 ರೋಗಿಗಳು ಸಜೀವ ದಹನ!

ದೇಶದೆಲ್ಲೆಡೆ ಕೊರೋನಾ ಹಾವಳಿ| ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಪ್ರಕರಣಗಳೂ ವರದಿ| ಗುಜರಾತ್‌ನ ಬರೂಚ್ ನಗರದ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಬೆಂಕಿ ಅವಘಡ

18 Covid Patients Dead In Fire At Gujarat Hospital Report pod
Author
Bangalore, First Published May 1, 2021, 10:53 AM IST | Last Updated May 1, 2021, 11:22 AM IST

ಅಹಮದಾಬಾದ್(ಮೇ.01): ದೇಶದೆಲ್ಲೆಡೆ ಕೊರೋನಾ ಹಾವಳಿ ಮಿತಿ ಮೀರಿದೆ. ಸೋಂಕಿತರ ಹಾಗೂ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಹೀಗಿರುವಾಗ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಪ್ರಕರಣಗಳೂ ವರದಿಯಾಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಮುಂಬೈನ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಇದರ ಬೆನ್ನಲ್ಲೇ ಶನಿವಾರ ಮುಂಜಾನೆ ಗುಜರಾತ್‌ನ ಬರೂಚ್ ನಗರದ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕನಿಷ್ಠ 18 ಮಂದಿ ಕೋವಿಡ್ ರೋಗಿಗಳು ಸಜೀವ ದಹನವಾಗಿದ್ದಾರೆ.

"

ಆಸ್ಪತ್ರೆಯ ಬೆಡ್ ಮತ್ತು ಸ್ಟ್ರೆಚರ್ಸ್ ಗಳ ಮೇಲೆ ಕೆಲವು ರೋಗಿಗಳು ಬೆಂಕಿಗೆ ಸಿಲುಕಿ ಒದ್ದಾಡಿ ಸಜೀವವಾಗಿ ದಹನವಾಗಿರುವ ದೃಶ್ಯ ಮನಕಲಕುವಂತಿದೆ. ನಾಲ್ಕು ಮಹಡಿಯ ವೆಲ್ಫೇರ್ ಆಸ್ಪತ್ರೆಯಲ್ಲಿ ಸುಮಾರು 50 ರೋಗಿಗಳು ದಾಖಲಾಗಿದ್ದರು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಬಂದು ಇತರ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡ ನಂತರ ಹೊಗೆ ತುಂಬಿಕೊಂಡು ಉಸಿರುಗಟ್ಟಿ 12 ಮಂದಿ ರೋಗಿಗಳು ಕೋವಿಡ್-19 ವಾರ್ಟ್‌ನಲ್ಲಿ ಮೃತಪಟ್ಟಿದ್ದಾರೆ. ಉಳಿದ 6 ಮಂದಿ ರೋಗಿಗಳು ವೆಲ್ಫೋರ್ ಆಸ್ಪತ್ರೆಯಲ್ಲಿ ಮೃತಪಟ್ಟರೇ ಅಥವಾ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸುವಾಗ ಮೃತಪಟ್ಟರೇ ಎಂದು ಸ್ಪಷ್ಟ ಮಾಹಿತಿಯಿಲ್ಲ ಎಂದು ಬರೂಚ್ ಎಸ್ಪಿ ರಾಜೇಂದ್ರಸಿನ್ಹ ಚೂಡಾಸಮ ತಿಳಿಸಿದ್ದಾರೆ. ಬೆಂಕಿ ದುರಂತಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ.

"

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಟ್ರಸ್ಟಿ ಝುಬರ್ ಪಟೇಲ್, ಇಡೀ ಬರೂಚ್ ಜನರಿಗೆ ದುರದೃಷ್ಟಕರ ದಿನ. ಪೊಲೀಸರು ಮತ್ತು ಆಡಳಿತ ಸಿಬ್ಬಂದಿ ಸಹಾಯದಿಂದ ಬೇರೆ ರೋಗಿಗಳನ್ನು ಹತ್ತಿರದ ಆಸ್ಪತ್ರೆಗೆ ವರ್ಗಾಯಿಸಿದ್ದೇವೆ. 14 ರೋಗಿಗಳು ಮತ್ತು ಇಬ್ಬರು ದಾದಿಯರು ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ಮೃತರ ಕುಟುಂಬಕ್ಕೆ ರೂ.4 ಪರಿಹಾರ ಘೋಷಣೆ

ಗುಜರಾತ್ ರಾಜ್ಯದ ಭರೂಚ್ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಸಂತಾಪ ಸೂಚಿಸಿರುವ ಗುಜರಾತ್ ರಾಜ್ಯ ಮುಖ್ಯಮಂತ್ರಿ ವಿಜಯ್ ರುಪಾನಿಯವರು, ಮೃತರ ಕುಟುಂಬಕ್ಕೆ ರೂ.4 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭರೂಚ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ರೋಗಿಗಳು, ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಪ್ರಾಣ ಕಳೆದುಕೊಂಡಿದ್ದು, ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ. ಅಲ್ಲದೆ ರಾಜ್ಯ ಸರ್ಕಾರದ ವತಿಯಿಂದ ಮೃತರ ಕುಟುಂಬಕ್ಕೆ ರೂ.4 ಲಕ್ಷ ಪರಿಹಾರ ನೀಡಲಾಗುತ್ತೆದ ಎಂದು ಹೇಳಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios