ಜಮ್ಮು(ಜ.14): ಪಾಕಿಸ್ತಾನದ ಕಡೆಯಿಂದ ಭಾರತದ ಗಡಿಯ ಒಳಕ್ಕೆ ನುಸುಳಲು ಹೊಂಚು ಹಾಕುತ್ತಿರುವ ಉಗ್ರರು ಜಮ್ಮು- ಕಾಶ್ಮೀರದ ಕಠುವಾ ಜಿಲ್ಲೆಯ ಹೀರಾನಗರ್‌ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ನಿರ್ಮಿಸಿದ್ದ 150 ಮೀಟರ್‌ ಉದ್ದದ ಸುರಂಗವೊಂದನ್ನು ಬಿಎಸ್‌ಎಫ್‌ ಬುಧವಾರ ಪತ್ತೆಹಚ್ಚಿದೆ. ಕಳೆದ ಆರು ತಿಂಗಳ ಅಂತರದಲ್ಲಿ ಜಮ್ಮು- ಕಾಶ್ಮೀರದ ಸಾಂಬಾ ಹಾಗೂ ಕಠುವಾ ಜಿಲ್ಲೆಗಳಲ್ಲಿ ಪತ್ತೆ ಆದ ಮೂರನೇ ಸುರಂಗ ಇದಾಗಿದೆ.

ಹೀರಾನಗರ್‌ ಸೆಕ್ಟರ್‌ನ ಬೊಬಿಯಾನ್‌ ಗ್ರಾಮದಲ್ಲಿ ಬಿಎಸ್‌ಎಫ್‌ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಪಾಕ್‌ ಗಡಿಯಿಂದ 150 ಮೀ. ಉದ್ದದ ಸುರಂಗವನ್ನು ಕೊರೆದಿರುವುದು ಪತ್ತೆ ಆಗಿದೆ. ಉಗ್ರರ ಲಾಂಚ್‌ ಪ್ಯಾಡ್‌ಗಳು ಇರುವ ಪಾಕಿಸ್ತಾನದ ಶಾಕೇರ್‌ಘಡ ಪ್ರದೇಶದಿಂದ ಈ ಸುರಂಗವನ್ನು ಕೊರೆಯಲಾಗಿದೆ. ಅತ್ಯಂತ ನೈಪುಣ್ಯ ಎಂಜಿನಿಯರಿಂಗ್‌ ತಂತ್ರಜ್ಞಾನ ಬಳಸಿ ಇದನ್ನು ಕೊರೆಯಲಾಗಿದೆ. ಲಾಂಚ್‌ಪ್ಯಾಡ್‌ಗಳಲ್ಲಿ ಅಡಗಿರುವ ಉಗ್ರರನ್ನು ಭಾರತದ ಗಡಿಯ ಒಳಕ್ಕೆ ಒಳನುಸುಳಿಸುವ ಉದ್ದೇಶದಿಂದ ಸುರಂಗವನ್ನು ಕೊರೆದಿರುವುದು ಸ್ಪಷ್ಟವಾಗಿದೆ. ಆದರೆ ಇತ್ತೀಚೆಗೆ ಈ ಸುರಂಗ ಬಳಕೆಯಾದ ಕುರುಹು ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮುನ್ನ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ 150 ಮೀಟರ್‌ ಉದ್ದದ ಸುರಂಗವನ್ನು ಕೊರೆದಿರುವುದು ಪತ್ತೆ ಆಗಿತ್ತು. ಈ ಸುರಂಗದ ಮೂಲಕ ಒಳನುಸುಳಿ ಬಂದಿದ್ದ ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ನಾಲ್ವರು ಉಗ್ರರನ್ನು ಜಮ್ಮು- ಶ್ರೀನಗರ ಹೆದ್ದಾರಿಯಲ್ಲಿ ಎನ್‌ಕೌಂಟರ್‌ ಮೂಲಕ ಹತ್ಯೆ ಮಾಡಲಾಗಿತ್ತು.