ಇಂದೋರ್(ಮೇ. 03): 18 ವಲಸಿಗ ಕಾರ್ಮಿಕರ ಗುಂಪೊಂದು ಕಾಂಕ್ರೀಟ್‌ ಮಿಶ್ರಣ ಟ್ರಕ್‌ನಲ್ಲಿ ಕದ್ದು ಕುಳಿತು ಮಹಾರಾಷ್ಟ್ರದಿಂದ ಉತ್ತರಪ್ರದೇಶದ ಲಖನೌಗೆ ಪ್ರಯಾಣ ಬೆಳೆಸುತ್ತಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶದ ಇಂದೋರ್‌ ಮತ್ತು ಉಜ್ಜಯಿನಿ ಗಡಿ ಭಾಗದ ಹೆದ್ದಾರಿಯಲ್ಲಿ ತಪಾಸಣೆ ಮಾಡುತ್ತಿದ್ದ ಪೊಲೀಸರು, ಟ್ರಕ್‌ ಚಾಲಕನನ್ನು ಪ್ರಶ್ನಿಸಿದ್ದರು. ಈ ವೇಳೆ ಆತ ಅನುಮಾನಾಸ್ಪದ ರೀತಿಯಲ್ಲಿ ಉತ್ತರ ನೀಡಿದ್ದ. ಈ ವೇಳೆ ಅನುಮಾನಗೊಂಡ ಪೊಲೀಸರು, ಟ್ರಕ್‌ನ ಮುಚ್ಚಳ ತೆರೆದಾಗ ಅದರಲ್ಲಿ ಕಾರ್ಮಿಕರು ಕಾಣಿಸಿಕೊಂಡಿದ್ದಾರೆ. ಬಳಿಕ ಅವರನ್ನು ಒಬ್ಬರಾದ ಮೇಲೆ ಒಬ್ಬರಂತೆ ಹೊರಗೆ ಬರಲು ಹೇಳಿದಾಗ, 18 ಜನರ ಹೊರಬಂದಿದ್ದಾರೆ. ಇದನ್ನು ನೋಡಿ ಸ್ವತಃ ಪೊಲೀಸರೇ ದಂಗಾಗಿ ಹೋಗಿದ್ದಾರೆ.

ಬಳಿಕ ಅವರನ್ನೆಲ್ಲಾ ಕೊರೋನಾ ತಪಾಸಣೆಗೆ ಒಳಪಡಿಸಿದ್ದು, ಬಸ್‌ ಮೂಲಕ ತವರು ರಾಜ್ಯಕ್ಕೆ ಕಳುಹಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮತ್ತೊಂದೆಡೆ ಟ್ರಕ್‌ ಅನ್ನು ಜಫ್ತಿ ಮಾಡಲಾಗಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.