ಮುಂಬೈ: ಏಷ್ಯಾದ ಅತಿದೊಡ್ಡ ಫಲಕ ಕುಸಿತಕ್ಕೆ 14 ಜನರ ಬಲಿ
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾನೂನುಬಾಹಿರವಾಗಿ ಜಾಹೀರಾತು ಫಲಕ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ
ಮುಂಬೈ(ಮೇ.15): ನಗರದ ಘಾಟ್ಕೋಪರ್ ಪ್ರದೇಶದಲ್ಲಿರುವ ಪೆಟ್ರೋಲ್ ಪಂಪ್ ಬಳಿ ಸೋಮವಾರ ಸಂಜೆ ಬೀಸಿದ ಧೂಳಿನ ಬಿರುಗಾಳಿಗೆ ಬೃಹತ್ ಜಾಹೀರಾತು ಫಲಕ ಬಿದ್ದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ 14ಕ್ಕೇರಿದ್ದು, 75ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಘಟನೆ ನಡೆದು 21 ಗಂಟೆಗಳಾದರೂ ರಕ್ಷಣಾ ಕಾರ್ಯ ಪ್ರಗತಿಯಲ್ಲಿದ್ದು, ಮತ್ತಷ್ಟು ಮಂದಿ ಸಿಲುಕಿರುವ ಸಾಧ್ಯತೆಯಿದೆ.
ರಕ್ಷಣಾ ಕಾರ್ಯಾಚರಣೆಗೆ 250ಕ್ಕೂ ಹೆಚ್ಚು ಮಂದಿ ನಿಯೋಜಿತರಾಗಿದ್ದು, ಎನ್‌ಡಿಆರ್‌ಎಫ್ ಪಡೆ, ಬೃಹನ್ಮುಂಬಯಿ ನಗರ ಪಾಲಿಕೆ ಸಿಬ್ಬಂದಿ, ಅಗ್ನಿಶಾಮಕ ದಳ, ಖಾಸಗಿ ಜೆಸಿಬಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಸೋಮವಾರ ತಡರಾತ್ರಿ ಘಟನಾ ಸ್ಥಳಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾನೂನುಬಾಹಿರವಾಗಿ ಜಾಹೀರಾತು ಫಲಕ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅಕ್ರಮವಾಗಿ ನಿರ್ಮಿಸಲಾಗಿದ್ದ ಈ ಜಾಹೀರಾತು ಫಲಕ ಇತ್ತೀಚೆಗಷ್ಟೇ ಏಷ್ಯಾದ ಅತ್ಯಂತ ದೊಡ್ಡ ಜಾಹೀರಾತು ಫಲಕ (120 ಅಡಿ ಅಗಲ, 120 ಅಡಿ ಉದ್ದ) ಎಂದು ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರಿತ್ತು.
ಮುಂಬೈನಲ್ಲಿ ದಿಢೀರ್ ದೂಳಿನ ಬಿರುಗಾಳಿ: 8 ಸಾವು
21 ಬಾರಿ ಫೈನ್ ಕಟ್ಟಿದ್ದ ರೇಪ್ ಆರೋಪಿ ಮಾಲೀಕ
ಕುಸಿದು ಬಿದ್ದಿರುವ ಜಾಹೀರಾತು ಫಲಕ ಅಳವಡಿಸಿದ್ದ ಮಾಲೀಕ ಇದಕ್ಕೂ ಮೊದಲು ಕಾನೂನುಬಾಹಿರವಾಗಿ ಜಾಹೀರಾತು ಫಲಕ ಅಳವಡಿಸಿದ್ದ ಹಿನ್ನೆಲೆಯಲ್ಲಿ 21 ಬಾರಿ ಪಾಲಿಕೆಯಿಂದ ದಂಡ ವಿಧಿಸಿಕೊಂಡಿದ್ದ. ಅಲ್ಲದೆ ಈತನ ಮೇಲೆ ಜನವರಿಯಲ್ಲಿ ಒಂದು ಅತ್ಯಾಚಾರ ಯತ್ನದ ಪ್ರಕರಣವೂ ದಾಖಲಾಗಿತ್ತು. ಜೊತೆಗೆ 2009ರಲ್ಲಿ ವಿಧಾನಸಭೆಗೂ ಸ್ಪರ್ಧಿಸಿದ್ದ. ಈಗೋ ಮೀಡಿಯಾ ಕಂಪನಿಯ ನಿರ್ದೇಶಕನಾಗಿರುವ ಭವೀಶ್ ರೈಲ್ವೆ ಭೂಮಿಯನ್ನೇ ಲಪಟಾಯಿಸಿ ಬೃಹತ್ ಜಾಹೀರಾತು ಫಲಕ ಅಳವಡಿಸಿದ್ದ ಎಂದು ಬೆಳಕಿಗೆ ಬಂದಿದೆ.