ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಭೆಯಲ್ಲಿ ಸಂಪುಟ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರು 12 ಬಗೆಯ ಅಧಿಕಾರಿಗಳ ಕಾರ್ಯವೈಖರಿಯನ್ನು ವಿವರಿಸುವ ಪಟ್ಟಿಯನ್ನು ಪ್ರಸ್ತುತಪಡಿಸಿದರು. ಕಡತ ವಿಳಂಬ, ಅನಗತ್ಯ ಸಭೆ ಮತ್ತು ಸಿಬ್ಬಂದಿಗೆ ಕಿರುಕುಳ ನೀಡುವ ಅಧಿಕಾರಿಗಳಿಗೆ ಕಾರ್ಟೂನ್ ಮೂಲಕ ಎಚ್ಚರಿಕೆ ನೀಡಲಾಗಿದೆ. ಕಚೇರಿ ಸಂಸ್ಕೃತಿ ಸುಧಾರಿಸಲು ಈ ವಿನೂತನ ಕ್ರಮ ಕೈಗೊಳ್ಳಲಾಗಿದೆ.
ನವದೆಹಲಿ: ಇತ್ತೀಚೆಗೆ ನಡೆದ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಕಾರ್ಯಕ್ಷಮತೆ ಪರಿಶೀಲನಾ ಸಭೆಯಲ್ಲಿ, ಸಚಿವ ಸಂಪುಟ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರು ಹಾಸ್ಯಭರಿತವಾದ ಆದರೆ ಗಂಭೀರ ಸಂದೇಶವಿರುವ ಪ್ರಸ್ತುತಿಯೊಂದನ್ನು ತೋರಿಸಿ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ. ಈ ಸಭೆಯಲ್ಲಿ ಅವರು ಹಿರಿಯ ಅಧಿಕಾರಿಗಳ ವಿವಿಧ ಕಾರ್ಯವೈಖರಿಯನ್ನು ವಿವರಿಸುತ್ತಾ ಒಟ್ಟು 12 ಬಗೆಯ ಕಾರ್ಯದರ್ಶಿಗಳ ಪಟ್ಟಿಯನ್ನು ಪರಿಚಯಿಸಿದ್ದಾರೆ.
ಪಟ್ಟಿಯಲ್ಲಿ ವಿವರಣೆ ಏನಿದೆ?
ಈ ಪಟ್ಟಿಯಲ್ಲಿ ಕಡತಗಳನ್ನು ವಿಳಂಬಗೊಳಿಸುವವರು, ಅನಗತ್ಯ ಸಭೆ ಕರೆದು ಸಿಬ್ಬಂದಿಗೆ ಕಾಟ ಕೊಡುವವರು, ತಡವಾಗಿ ಕಚೇರಿಗೆ ಬರುವವರು, ಫೈಲ್ಗಳನ್ನು ಎಸೆಯುವವರು, ಕಟುವಾಗಿ ಮಾತಾಡುವವರು ಸೇರಿದಂತೆ 12 ಬಗೆಯ ಕಾರ್ಯದರ್ಶಿಗಳನ್ನು ಪಟ್ಟಿ ಮಾಡಲಾಗಿದೆ. ತಮ್ಮ ಹಂತದಲ್ಲೇ ಕೈಗೊಳ್ಳಬೇಕಾದ ನಿರ್ಧಾರಗಳನ್ನೂ ಸಚಿವರಿಗೆ ಅಥವಾ ಮೇಲಧಿಕಾರಿಗಳಿಗೆ ಕಳುಹಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವವರು, ಸಂಜೆ 7 ಗಂಟೆ ನಂತರ ಅನಗತ್ಯ ಸಭೆ ಕರೆಯುವವರು, ರಜಾ ದಿನಗಳಲ್ಲಿಯೂ ಸಿಬ್ಬಂದಿಯನ್ನು ಬಲವಂತವಾಗಿ ಕೆಲಸಕ್ಕೆ ಕರೆಸಿ ತಾವು ಮಾತ್ರ ತಡವಾಗಿ ಬರುವ ಅಧಿಕಾರಿಗಳನ್ನು ಪಟ್ಟಿಯಲ್ಲಿ ವಿವರಿಸಲಾಗಿದೆ. ಕಾರ್ಟೂನ್ಗಳ ಮೂಲಕ ಅಂಥ ಅಧಿಕಾರಿಗಳಿಗೆ ಚಾಟಿ ಬೀಸಲಾಗಿದೆ.
ಮಹಿಳಾ ಸಹೋದ್ಯೋಗಿಗಳಿಗೆ ದಾಖಲೆಯೊಂದನ್ನು ತೋರಿಸುವ ನೆಪದಲ್ಲಿ, ಅವರಿಗೆ ಮುಜುಗರ ಉಂಟಾಗುವಷ್ಟು ಹತ್ತಿರಕ್ಕೆ ಬರುವಂತೆ ಕೇಳಿಕೊಳ್ಳುವ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಳ್ಳಲಾಗಿದೆ. ಸೋಮನಾಥನ್ ಅವರ ಈ ಕ್ರಮ ಕೆಲವು ಅಧಿಕಾರಿಗಳನ್ನು ಮುಜುಗರಕ್ಕೆ ದೂಡಿದೆ. ಕಚೇರಿಯ ಕೆಲಸದ ಸಂಸ್ಕೃತಿಯನ್ನು ಸುಧಾರಿಸಲು ಇಂಥ ವಿನೂತನ ಕ್ರಮ ಕೈಗೊಳ್ಳಲಾಗಿದೆ.






