ಪ್ರಯಾಗರಾಜ್ ಕುಂಭಮೇಳದಲ್ಲಿ 12 ಶಿಶುಗಳು ಜನಿಸಿವೆ. ಸೆಕ್ಟರ್ 2ರ ಆಸ್ಪತ್ರೆಯಲ್ಲಿ ಜನಿಸಿದ ಈ ಮಕ್ಕಳಿಗೆ ಕುಂಭ, ಕುಂಭ-2, ಗಂಗಾ, ಯಮುನಾ, ಬಸಂತ, ಬಸಂತಿ ಹೀಗೆ ವಿಶೇಷ ಹೆಸರುಗಳನ್ನು ಪೋಷಕರು ಇಡುತ್ತಿದ್ದಾರೆ. ಕುಂಭಮೇಳದಲ್ಲಿ ಜನಿಸಿದ ಮಕ್ಕಳು ಭಾಗ್ಯಶಾಲಿಗಳೆಂಬ ನಂಬಿಕೆಯಿಂದ ಗರ್ಭಿಣಿಯರು ಕುಂಭಕ್ಕೆ ಭೇಟಿ ನೀಡುತ್ತಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪ್ರಯಾಗರಾಜ್ (Prayagraj)ನಲ್ಲಿ ಮಹಾ ಕುಂಭ ಮೇಳ (Kumbh Mela)ದ ಸಂಭ್ರಮ ಮುಗಿಲು ಮುಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯವರೆಗೆ ಎಲ್ಲರೂ ಮಹಾ ಕುಂಭ ಮೇಳಕ್ಕೆ ಭೇಟಿ ನೀಡಿ, ತ್ರಿವೇಣಿ ಸಂಗಮ (Triveni Sangam)ದಲ್ಲಿ ಪುಣ್ಯ ಸ್ನಾನ ಮಾಡ್ತಿದ್ದಾರೆ. ಮಹಾ ಕುಂಭ ಮೇಳ ಸಾಕಷ್ಟು ವಿಶೇಷತೆಗೆ ಸಾಕ್ಷ್ಯವಾಗ್ತಾನೆ ಇದೆ. ಕುಂಭ ಮೇಳದಲ್ಲಿ ಪಾಲ್ಗೊಂಡ ಅನೇಕರು ರಾತ್ರೋರಾತ್ರಿ ಪ್ರಸಿದ್ಧಿಗೆ ಬಂದಿದ್ದಾರೆ. ನಾಗಾ ಸಾಧುಗಳ ಜೀವನಶೈಲಿ ಗಮನ ಸೆಳೆಯುತ್ತಿದೆ. ಈ ಮಧ್ಯೆ ಅತ್ಯಂತ ಖುಷಿಯ ವಿಷ್ಯವೊಂದು ಪ್ರಯಾಗರಾಜ್ ನಲ್ಲಿ ನಡೆದಿದೆ. ಜನವರಿ 13ರಿಂದ ಮಹಾಕುಂಭ ಮೇಳ ಶುರುವಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ 12 ಮಕ್ಕಳ ಜನನ (Birth)ವಾಗಿದೆ. ಕುಂಭ ಮೇಳದ ಸೆಕ್ಟರ್ 2ರಲ್ಲಿರುವ ಸೆಂಟ್ರಲ್ ಆಸ್ಪತ್ರೆಯಲ್ಲಿ 12 ಮಕ್ಕಳು ಜನಿಸಿವೆ ಎಂದು ಅಲ್ಲಿನ ವೈದ್ಯರು ಮಾಹಿತಿ ನೀಡಿದ್ದಾರೆ. 

ಭಾನುವಾರ ರಾತ್ರಿ 12ನೇ ಮಗು ಜನಿಸಿದೆ. ಫುಲ್ಪುರ್ ಜಿಲ್ಲೆಯ ಸರೈ ಚಾಂಡಿಯ ನಿವಾಸಿ ನೇಹಾ ಸಿಂಗ್, ಸೆಂಟ್ರಲ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಲ್ಲಿಯವರೆಗೆ ಜನಿಸಿದ ಎಲ್ಲ 12 ಮಕ್ಕಳು ಆರೋಗ್ಯವಾಗಿವೆ. ಎಲ್ಲವೂ ನಾರ್ಮಲ್ ಡಿಲೆವರಿ ಎಂದು ವೈದ್ಯರು ಹೇಳಿದ್ದಾರೆ.

ಕುಂಭದಲ್ಲಿ ಜನಿಸಿದ ಮಕ್ಕಳಿಗೆ ವಿಶೇಷ ಹೆಸರು : 144 ವರ್ಷಗಳಿಗೊಮ್ಮೆ ಬರುವ ಈ ಮಹಾ ಕುಂಭ ಮೇಳದ ಸಮಯದಲ್ಲಿ ಜನಿಸಿದ ಮಕ್ಕಳಿಗೆ ಅವರ ಪಾಲಕರು ವಿಶೇಷ ಹೆಸರುಗಳನ್ನು ಇಡ್ತಿದ್ದಾರೆ. ಕೆಲವರು ತಮ್ಮ ಮಕ್ಕಳಿಗೆ ಗಂಗಾ ಎಂದು ನಾಮಕರಣ ಮಾಡಿದ್ದಾರೆ. ಕೆಲವರು ಯಮುನಾ, ಭೋಲೆನಾಥ್, ಬಜರಂಗಿ ಎಂದು ಹೆಸರಿಡಲು ಮುಂದಾಗಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿದ ನೇಹಾ ಸಿಂಗ್ ಪತಿ, ತನ್ನ ಮಗುವಿಗೆ ಕುಂಭ ಎಂದು ನಾಮಕರಣ ಮಾಡಲು ಮುಂದಾಗಿದ್ದರು. ಆದ್ರೆ ಆಸ್ಪತ್ರೆಯಲ್ಲಿ ಜನಿಸಿದ ಒಂದು ಮಗುವಿಗೆ ಈಗಾಗಲೇ ಕುಂಭ ಎಂದು ನಾಮಕರಣ ಮಾಡಲಾಗಿದೆ ಎಂಬ ಸಂಗತಿ ತಿಳಿದ ಮೇಲೆ ಅವರು ತಮ್ಮ ಮಗುವಿಗೆ ಕುಂಭ್-2 ಎಂದು ಹೆಸರಿಡಲು ನಿರ್ಧರಿಸಿದ್ದಾರೆ. ಬಸಂತ ಪಂಚಮಿ ದಿನ ಎರಡು ಮಕ್ಕಳು ಜನಿಸಿದ್ದು, ಗಂಡು ಮಗುವಿಗೆ ಬಸಂತ ಹಾಗೂ ಹೆಣ್ಣು ಮಗುವಿಗೆ ಬಸಂತಿ ಎಂದು ನಾಮಕರಣ ಮಾಡಲಾಗಿದೆ. 

ಕುಂಭ ಮೇಳಕ್ಕೆ ಗರ್ಭಿಣಿಯರು ಬರೋದು ಏಕೆ? : ಮಹಾಕುಂಭ ಮೇಳದಲ್ಲಿ ಜನಿಸಿದ ಮಕ್ಕಳು ಭಾಗ್ಯಶಾಲಿಗಳು ಎನ್ನಲಾಗುತ್ತದೆ. ಅದೇ ಕಾರಣಕ್ಕೆ ಅನೇಕ ತುಂಬು ಗರ್ಭಿಣಿಯರು ಕುಂಭ ಮೇಳಕ್ಕೆ ಬಂದು ಕುಂಭ ಸ್ನಾನ ಮಾಡ್ತಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ ನಿಂದ ತುಂಬು ಗರ್ಭಿಣಿಯೊಬ್ಬರು ಮಹಾಕುಂಭ ಮೇಳಕ್ಕೆ ಬಂದಿದ್ದರು. ತ್ರಿವೇಣಿಯಲ್ಲಿ ಸ್ನಾನ ಮಾಡುವಾಗ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಂಬ್ಯುಲೆನ್ಸ್ ಸಹಾಯದಿಂದ ಅವರನ್ನು ಸೆಂಟ್ರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸರಸ್ವತಿ ಎಂದು ಮಗುವಿಗೆ ನಾಮಕರಣ ಮಾಡಲು ಮುಂದಾಗಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ : ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಚರ್ಚೆಗೆ ಕಾರಣವಾಗಿದೆ. ಜನರು ಪುಣ್ಯ ಗಳಿಸಲು ಮಹಾಕುಂಭಕ್ಕೆ ಬರ್ತಾರೆ. ಆದ್ರೆ ಅಲ್ಲಿಯೇ ಜನಿಸುವ ಮಕ್ಕಳು ಪುಣ್ಯವಂತರು. ಅವರಂಥ ಅದೃಷ್ಟಶಾಲಿಗಳು ಯಾರೂ ಇಲ್ಲ ಎಂದು ಕೆಲ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಈ ಮಕ್ಕಳಿಗೆ ಪರಮಾತ್ಮನ ಕೃಪೆ ಸದಾ ಇರುತ್ತೆ ಎಂಬುದು ಬಳಕೆದಾರರ ನಂಬಿಕೆ. ಮಹಾಕುಂಭ ಮೇಳದಲ್ಲಿ ಜನಸಂದಣಿ ಇದ್ದು, ಗರ್ಭಿಣಿಯರಿಗೆ ಇದ್ರಿಂದ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.