ಚೆನ್ನೈ(ಡಿ.13): 8 ವರ್ಷಗಳ ಹಿಂದೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದ್ದ 45 ಕೋಟಿ ರು. ಮೌಲ್ಯದ 103 ಕೇಜಿ ಚಿನ್ನ ಸಿಬಿಐ ವಶದಿಂದ ನಿಗೂಢವಾಗಿ ನಾಪತ್ತೆಯಾಗಿರುವ ಅಪರೂಪದ ಪ್ರಕರಣ ಚೆನ್ನೈನಲ್ಲಿ ನಡೆದಿದೆ. ಮದ್ರಾಸ್‌ ಹೈಕೋರ್ಟ್‌ ಈ ಬಗ್ಗೆ ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದ್ದು, ಈ ಮೂಲಕ ಪ್ರಕರಣ ಸಾರ್ವಜನಿಕ ವಲಯದಲ್ಲಿ ಬಹಿರಂಗವಾಗಿದೆ.

ಕೊರೋನಾ ಚಿಕಿತ್ಸೆ ವೇಳೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೃದಯಾಘಾತದಿಂದ ನಿಧನ!

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಚೆನ್ನೈನ ಸುರಾನಾ ಕಾರ್ಪೋರೆಷನ್‌ ಲಿಮಿಟೆಡ್‌ ಕಂಪನಿ ಮೇಲೆ 2012ರಲ್ಲಿ ದಾಳಿ ನಡೆಸಿದ್ದ ಸಿಬಿಐ, 400.5 ಕೇಜಿ ಚಿನ್ನ ವಶಪಡಿಸಿಕೊಂಡಿತ್ತು. ಸುರಾನಾ ಕಂಪನಿಯ ಸೇಫ್‌ ಲಾಕರ್‌ ಹಾಗೂ ವಾಲ್ಟ್‌ಗಳಲ್ಲಿ ಈ ಚಿನ್ನವನ್ನು ಇಡಲಾಗಿತ್ತು. ಸಿಬಿಐ ಸಂಸ್ಥೆಯೇ ಇದಕ್ಕೆ ಬೀಗ ಜಡಿದು ಸೀಲ್‌ ಹಾಕಿತ್ತು. ಆದರೆ ಈ ಬಗ್ಗೆ ಕೋರ್ಟ್‌ನಲ್ಲಿ ವ್ಯಾಜ್ಯ ನಡೆದು, ಚಿನ್ನ ಮರಳಿಸಲು ಸಿಬಿಐಗೆ ಆದೇಶಿಸಲಾಗಿತ್ತು. ಫೆ.27ರಿಂದ 29ರ ಅವಧಿಯಲ್ಲಿ 296.606 ಕೇಜಿ ಚಿನ್ನ ಮಾತ್ರ ಮರಳಿಸಲಾಗಿತ್ತು. ಉಳಿದ 103.864 ಕೇಜಿ ಚಿನ್ನ ಮರಳಿಸಿರಲಿಲ್ಲ. ಹೀಗಾಗಿ ಈ ಬಾಕಿ ಚಿನ್ನ ಮರಳಿಸುವಂತೆ ಸುರಾನಾ ಕಂಪನಿಯ ಲಿಕ್ವಿಡೇಟರ್‌ ಅವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

ಈ ಬಗ್ಗೆ ಕೋರ್ಟ್‌ಗೆ ಹೇಳಿಕೆ ನೀಡಿರುವ ಸಿಬಿಐ, ‘ಲಾಕರ್‌ ಹಾಗೂ ವಾಲ್ಟ್‌ನ 72 ಕೀಗಳನ್ನು ಚೆನ್ನೈ ಮುಖ್ಯ ವಿಶೇಷ ಕೋರ್ಟ್‌ಗೆ ನೀಡಿದ್ದೆವು. ಚಿನ್ನವನ್ನು ವಶಪಡಿಸಿಕೊಳ್ಳುವ ವೇಳೆ ಎಲ್ಲವನ್ನೂ ಸೇರಿಸಿ ತೂಕ ಮಾಡಲಾಗಿತ್ತು. ಬಳಿಕ ಸುರಾನಾ ಕಂಪನಿ ಎಸ್‌ಬಿಐನಲ್ಲಿ ಮಾಡಿದ ಸಾಲಕ್ಕೆ ಸಂಬಂಧಿಸಿದಂತೆ ಲಿಕ್ವಿಡೇಟರ್‌ ಒಬ್ಬರು ನೇಮಕವಾಗಿದ್ದರು. ಅವರಿಗೆ ಹಸ್ತಾಂತರಿಸುವ ವೇಳೆ ಪ್ರತಿ ಚಿನ್ನಾಭರಣವನ್ನು ಪ್ರತ್ಯೇಕವಾಗಿ ತೂಕ ಮಾಡಲಾಗಿತ್ತು. ಬಹುಶಃ ಈ ವೇಳೆಯೇ ಕಾಣೆ ಆಗಿರಬಹುದು’ ಎಂದು ಶಂಕೆ ವ್ಯಕ್ತಪಡಿಸಿದೆ.

ಬಿಜೆಪಿ ನಾಯಕ ಸಿಬಿಐ ವಶಕ್ಕೆ: ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಅಮಾನತು

ಆದರೆ ಸಿಬಿಐನ ಈ ಹೇಳಿಕೆ ಒಪ್ಪಲು ಹೈಕೋರ್ಟ್‌ ನಿರಾಕರಿಸಿದೆ. ‘ಈ ಬಗ್ಗೆ ಎಸ್‌ಪಿ ರಾರ‍ಯಂಕ್‌ ಅಧಿಕಾರಿ ನೇತೃತ್ವದಲ್ಲಿ ಸಿಬಿ-ಸಿಐಡಿ ತನಿಖೆ ನಡೆಯಬೇಕು. 6 ತಿಂಗಳಲ್ಲಿ ತನಿಖೆ ಮುಗಿಯಬೇಕು’ ಎಂದು ಸೂಚಿಸಿದೆ.

ಆದರೆ ಸ್ಥಳೀಯ ಪೊಲೀಸರಿಂದ ತನಿಖೆ ನಡೆಸಿದರೆ ತನ್ನ ಘನತೆಗೆ ಕುಂದು ಬರಲಿದೆ ಎಂದು ಸಿಬಿಐ ಆಕ್ಷೇಪಿಸಿತು. ಇದಕ್ಕೆ ಖಡಕ್ಕಾಗಿ ಉತ್ತರಿಸಿದ ನ್ಯಾ

ಪ್ರಕಾಶ್‌, ‘ಇಂತಹ ಅನುಮಾನಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಎಲ್ಲ ಪೊಲೀಸರನ್ನೂ ನಂಬಬೇಕು. ‘ಸಿಬಿಐಗೆ ವಿಶೇಷ ಕೋಡುಗಳಿವೆ. ಸ್ಥಳೀಯ ಪೊಲೀಸರಿಗೆ ಬಾಲ ಮಾತ್ರ ಇದೆ’ ಎಂದು ಭಾವಿಸಿದರೆ ತಪ್ಪು’ ಎಂದು ತರಾಟೆಗೆ ತೆಗೆದುಕೊಂಡಿತು.