ಪ್ರಧಾನಿ ಮೋದಿ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ದಿನಕ್ಕೂ ಮುನ್ನ 1,000 ಕೆಜಿ ಸ್ಫೋಟಕ ಪತ್ತೆ, ಹೆಚ್ಚಿದ ಆತಂಕ!
ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯ ದೌಸಾ ಸೊಹ್ನ ಮಾರ್ಗ ಉದ್ಘಾಟನೆಯನ್ನು ಪ್ರಧಾನಿ ಮೋದಿ ಫೆಬ್ರವರಿ 12ಕ್ಕೆ ಮಾಡಲಿದ್ದಾರೆ. ಈ ಕಾರ್ಯಕ್ರಮದ ತಯಾರಿ ನಡುವೆ ಆತಂಕಕಾರಿ ಬೆಳವಣಿಗೆಯಾಗಿದೆ. ಕಾರ್ಯಕ್ರಮ ಸ್ಥಳದ ಸಮೀಪದಲ್ಲೇ 1,000 ಕೆಜಿ ಸ್ಫೋಟಕ ಪತ್ತೆಯಾಗಿದೆ.
ನವದೆಹಲಿ(ಫೆ.09): ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇ ಅತೀ ದೊಡ್ಡ ಹೆದ್ದಾರಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 1,386 ಕಿಲೋಮೀಟರ್ ಉದ್ದದ ಎಕ್ಸ್‌ಪ್ರೆಸ್‌ವೇ ಈಗಾಗಲೇ ವಿಶ್ವದ ಗಮನಸೆಳೆದಿದೆ. ಈ ಎಕ್ಸ್‌ಪ್ರೆಸ್‌ವೇ ದೌಸಾ ಹಾಗೂ ಸೊಹ್ನ ಮಾರ್ಗದ ಉದ್ಘಾಟನೆಯನ್ನು ಫೆಬ್ರವರಿ 12ಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾಡಲಿದ್ದಾರೆ. ಮೋದಿ ಉದ್ಘಾಟನಾ ಕಾರ್ಯಕ್ರಮಕ್ಕೆ 2 ದಿನ ಮಾತ್ರ ಬಾಕಿ. ಇದರ ನಡುವೆ ಆತಂಕಕಾರಿ ಬೆಳವಣಿಗೆಯಾಗಿದೆ. ದೌಸಾ ಸೊಹ್ನ ಎಕ್ಸ್‌ಪ್ರೆಸ್‌ವೇ ಮಾರ್ಗದ ಸಮೀಪದಲ್ಲಿರುವ ಭಾಂಕ್ರಿ ರಸ್ತೆಯಲ್ಲಿ ಬರೋಬ್ಬರಿ 1,000 ಕೆಜಿ ತೂಕದ ಸ್ಫೋಟಕ ವಸ್ತು ಪತ್ತೆಯಾಗಿದೆ. ಇದೇ ವೇಳೆ ದೌಸಾ ನಿವಾಸಿಯೊಬ್ಬನನ್ನು ಭದ್ರತಾ ಪಡೆಗಳು ಬಂಧಿಸಿದೆ. ಮೋದಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವ ಮೊದಲೇ ಸ್ಫೋಟಕಗಳು ಪತ್ತೆಯಾಗಿರುವು ಆತಂಕ ಹೆಚ್ಚಿಸಿದೆ. ಆದರೆ ಇದು ಮೈನಿಂಗ್‌ಗಾಗಿ ಇಟ್ಟಿರುವ ಸ್ಫೋಟಕ ಎಂದು ಬಂಧಿತ ವ್ಯಕ್ತಿ ಪೊಲೀಸರ ಮುಂದೆ ಹೇಳಿದ್ದಾರೆ. ಇತ್ತ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.
ಬಂಧಿತ ವ್ಯಕ್ತಿಯಿಂದ ಎಲೆಕ್ಟ್ರಿಕ್ ಡೆಟೋನೇಟರ್, ಸ್ಫೋಟಕ ಬ್ಯಾಟರಿ, ವೈಯರ್ ವಶಕ್ಕೆ ಪಡೆಯಲಾಗಿದೆ. ಪೊಲೀಸರು ವಶಕ್ಕೆ ಪಡೆದಿರುವ ವ್ಯಕ್ತಿ ಈ ಕುರಿತು ಸ್ಪಷ್ಟನೆ ನೀಡಿದ್ದಾನೆ. ಇದು ಮೈನಿಂಗ್ ಸ್ಫೋಟಕ ವಸ್ತುಗಳಾಗಿದೆ. ಮೈನಿಂಗ್ ಕಾರಣಕ್ಕೆ ಬಳಸುತ್ತಿದ್ದೇನೆ. ಇತರ ಯಾವುದೇ ಕೃತ್ಯಕ್ಕೆ ಬಳಸುತ್ತಿಲ್ಲ. ತನ್ನ ಮೈನಿಂಗ್ ಕೆಲಸ ಹಾಗೂ ಕೆಲಸಗಾರರ ಕುರಿತು ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
1386 ಕಿ.ಮೀ ದೂರದ ದೇಶದ ಅತೀ ಉದ್ದದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇ ನೋಟ!
ಸ್ಫೋಟಕ ಪತ್ತೆಯಾಗಿರುವುದು ಒಂದು ಕ್ಷಣ ಆತಂಕ ತಂದಿತ್ತು. ಆದರೆ ಮೇಲ್ನೋಟಕ್ಕೆ ಇದು ಮೈನಿಂಗ್ ಸಂಬಂಧಿತ ವಸ್ತುಗಳಂತೆ ಕಂಡುಬರುತ್ತಿದೆ. ಆದರೆ ಭದ್ರತಾ ವಿಚಾರದಲ್ಲಿ ರಾಜಿಯಾಗದ ಪೊಲೀಸರು ಈ ಕುರಿತು ಖಚಿತ ಪಡೆಯಲು ತನಿಖೆ ನಡೆಸುತ್ತಿದ್ದಾರೆ. ಇನ್ನುಳಿದಂತೆ ಮೋದಿ ಕಾರ್ಯಕ್ರಮದ ಬಹುತೇಕ ಸಿದ್ದತೆಗಳು ಪೂರ್ಣಗೊಂಡಿದೆ.
ದೆಹಲಿ ಮುಂಬೈ ಎಕ್ಸ್‌ಪ್ರೆಸ್ ವೇ ಒಟ್ಟು 1,386 ಕಿಲೋಮೀಟರ್ ಉದ್ದದ ಹೆದ್ದಾರಿಯಾಗಿದೆ. ಈಗಾಗಲೇ ಈ ಎಕ್ಸ್‌ಪ್ರೆಸ್‌ವೇ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ವಿಶ್ವದರ್ಜೆಯ ರಸ್ತೆ ನಿರ್ಮಾಣವಾಗುತ್ತಿದೆ. ಈಗಾಗಲೇ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದೆ. ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ. ಮಾರ್ಚ್ ತಿಂಗಳಲ್ಲಿ ಪ್ರಧಾನಿ ಮೋದಿ ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ ಮಾಡಲಿದ್ದಾರೆ. ಇದರ ವೆಚ್ಚ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿ.
ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇ ಚಿತ್ರಗಳನ್ನ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಗಡ್ಕರಿ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನೂತನ ಎಕ್ಸ್‌ಪ್ರೆಸ್ ವೇ ಮೂಲಕ ದೆಹಲಿ ಹಾಗೂ ಮುಂಬೈ ನಡುವಿನ ಪ್ರಯಾಣ 12ಗಂಟೆಗೆ ಇಳಿಕೆಯಾಗಿದೆ. ಇಷ್ಟೇ ಅಲ್ಲ ವಿಶ್ವದರ್ಜೆ ಮಟ್ಟದ ರಸ್ತೆಯ ಪ್ರಯಾಣವೂ ಸುಖಕರವಾಗಿರಲಿದೆ.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಬೈಕ್ ಆಟೋಗೆ ಪ್ರವೇಶವಿಲ್ಲ!
ಮುಂಬೈ-ಬೆಂಗಳೂರು ಹೊಸ ಎಕ್ಸ್‌ಪ್ರೆಸ್‌ವೇ
ವಾಣಿಜ್ಯ ರಾಜಧಾನಿ ಮುಂಬೈ ಮತ್ತು ಐಟಿ ರಾಜಧಾನಿ ಬೆಂಗಳೂರು ನಡುವೆ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಯೋಜನೆ ಪ್ರಗತಿಯಲ್ಲಿದ್ದು, ಶೀಘ್ರವೇ ಇದಕ್ಕೆ ಅನುಮತಿ ನೀಡಲಾಗುವುದು. ಈ ಯೋಜನೆ ಜಾರಿಯಾದ ಬಳಿಕ ಉಭಯ ನಗರಗಳ ನಡುವಿನ ರಸ್ತೆ ಸಂಚಾರದ ಅವಧಿ ಕೇವಲ 5-6 ಗಂಟೆಗೆ ಇಳಿಯಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹಾಲಿ ಈ ಎರಡೂ ನಗರಗಳ ನಡುವಿನ 985 ಕಿ.ಮೀ ಸಂಚಾರಕ್ಕೆ ಕನಿಷ್ಠ 15-16 ಗಂಟೆ ಬೇಕಿದೆ. ಹಾಲಿ ಪುಣೆ ಮತ್ತು ಬೆಂಗಳೂರು ನಡುವೆ 45000 ಕೋಟಿ ರು.ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಇದೇ ಯೋಜನೆಯಲ್ಲಿ ಸಣ್ಣ ಬದಲಾವಣೆ ಮಾಡಿ ಅದನ್ನು ಮುಂಬೈ- ಬೆಂಗಳೂರು ಎಕ್ಸ್‌ಪ್ರೆಸ್‌ವೇ ಆಗಿ ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.