ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ತೊಗರಿ ಮತ್ತು ಉದ್ದು ಸೇರಿದಂತೆ ಕೆಲವು ಬೆಳೆಗಳನ್ನು ಸರ್ಕಾರವೇ ಶೇ.100ರಷ್ಟು ಖರೀದಿಸಲಿದೆ. ಅಲ್ಲದೆ, 48 ಗಂಟೆಗಳ ಒಳಗೆ ರೈತರಿಗೆ ಹಣ ಪಾವತಿಯಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಜೊತೆಗೆ ಜಾಗತಿಕ ಮಾರುಕಟ್ಟೆ ಅವಕಾಶಗಳನ್ನು ಬಳಸಿಕೊಳ್ಳಲು ಸರ್ಕಾರ ಕಾರ್ಯತಂತ್ರ ರೂಪಿಸುತ್ತಿದೆ.

ದೆಹಲಿ: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ರೈತರಿಗೆ ಭರ್ಜರಿ ಗುಡ್​​ ನ್ಯೂಸ್​​ ಕೊಟ್ಟಿದ್ದಾರೆ. ತೊಗರಿ, ಉದ್ದು ಸೇರಿ ಕೆಲವು ಆಹಾರ ಪದಾರ್ಥಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಶೇಕಡಾ 100ರಷ್ಟು ಸರ್ಕಾರವೇ ಖರೀದಿಸಲಿದೆ ಹಾಗೂ 48 ಗಂಟೆಗಳ ಒಳಗೆ ಪಾವತಿಗಳನ್ನು ಖಚಿತಪಡಿಸುವ ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ದೆಹಲಿಯಲ್ಲಿ ಇಂದು ನಡೆದ 'ರಾಷ್ಟ್ರೀಯ ಕೃಷಿ ಸಮ್ಮೇಳನ - ಮುಂಗಾರು ಅಭಿಯಾನ 2026'ರ ಎರಡನೇ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು, ರೈತರು ತಮ್ಮ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಬಹುಮುಖಿ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಈ ಕಾರ್ಯತಂತ್ರವು ಕೊಯ್ಲು ನಂತರದ ನಿರ್ವಹಣೆ, ವೈಜ್ಞಾನಿಕ ಉಗ್ರಾಣ ವ್ಯವಸ್ಥೆ ಮತ್ತು ಮಾರುಕಟ್ಟೆ ವ್ಯವಸ್ಥೆಗಳನ್ನು ಬಲಪಡಿಸುವುದನ್ನು ಒಳಗೊಂಡಿದೆ ಎಂದ್ದಿದ್ದಾರೆ.

ತೊಗರಿ, ಉದ್ದು ಕನಿಷ್ಠ ಬೆಳೆ

ಇದೇ ವೇಳೆ ಸಚಿವರು, ತೊಗರಿ, ಉದ್ದು ಮತ್ತು ಮಸೂರ ಬೇಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಶೇಕಡಾ 100ರಷ್ಟು ಸರ್ಕಾರವೇ ಖರೀದಿಸಲಿದೆ ಹಾಗೂ 48 ಗಂಟೆಗಳ ಒಳಗೆ ಪಾವತಿಗಳನ್ನು ಖಚಿತಪಡಿಸುವ ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು.

ಮಾರುಕಟ್ಟೆ ಬಳಸಲು ಅವಕಾಶ

ದೇಶದ ಕೃಷಿ ಉತ್ಪನ್ನಗಳು, ಹಣ್ಣುಗಳು, ತರಕಾರಿಗಳು ಮತ್ತು ಆಹಾರ ಧಾನ್ಯಗಳನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲು, ಅಂತರರಾಷ್ಟ್ರೀಯ ಮುಕ್ತ ವ್ಯಾಪಾರ ಒಪ್ಪಂದಗಳಿಂದ ಉದ್ಭವಿಸುವ ಹೊಸ ಮಾರುಕಟ್ಟೆ ಅವಕಾಶಗಳನ್ನು ಭಾರತ ಬಳಸಿಕೊಳ್ಳಲಿದೆ ಎಂದು ಹೇಳಿದರು. ಇದು ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಆದಾಯವನ್ನು ಪಡೆಯಲು ಸಹಾಯ ಮಾಡುವುದಲ್ಲದೆ, ಭಾರತವು ಜಗತ್ತಿಗೆ ಪ್ರಮುಖ ಆಹಾರ ಪೂರೈಕೆದಾರನಾಗಿ ಹೊರಹೊಮ್ಮಲು ಸಹಕಾರಿಯಾಗಲಿದೆ ಎಂದರು.