10000 ರು. ಆಕ್ಸಿಜನ್ ಸಿಲಿಂಡರ್ ಲಕ್ಷಕ್ಕೆ ಮಾರಾಟ!| ಬೇಡಿಕೆಯ ಲಾಭ ಪಡೆದು ಕಾಳಸಂತೆಯಲ್ಲಿ ಮಾರಾಟ
ಹೈದರಾಬಾದ್(ಜು14): ಮಹಾಮಾರಿ ಕೊರೋನಾವನ್ನು ಗೆದ್ದವರ 400 ಎಂ.ಎಲ್ ಪ್ಲಾಸ್ಲಾಗೆ 3 ಲಕ್ಷ ರು.ವರೆಗೆ ಆಫರ್ ನೀಡಿ ಸುದ್ದಿಯಾಗಿದ್ದ ಆಂಧ್ರದಲ್ಲಿ ಇದೀಗ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿರುವವರಿಗೆ ಅನಿವಾರ್ಯವಾದ ಆಕ್ಸಿಜನ್ ಸಿಲಿಂಡರ್ ಅನ್ನು 1 ಲಕ್ಷ ರು.ವರೆಗೂ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಈ ಸಂಬಂಧ ಆಮ್ಲಜನಕ ಸಿಲಿಂಡರ್‌ಗಳ ಅಕ್ರಮ ದಾಸ್ತಾನು ಇಟ್ಟಿದ್ದ ಉದ್ಯಮಿ ಶೇಖ್ ಅಕ್ಬರ್‌ನನ್ನು ಉತ್ತರ ವಲಯ ಕಾರ್ಯಪಡೆ ವಶಕ್ಕೆ ಪಡೆದಿದೆ. ನಗರದ ಗ್ಯಾಸ್ ಏಜೆನ್ಸಿ ಮಾಲಿಕರೊಬ್ಬರಿಂದ ಭಾರೀ ಪ್ರಮಾಣದ ಆಕ್ಸಿಜನ್ ಸಿಲಿಂಡರ್‌ಗಳನ್ನು ಅಕ್ಬರ್ ಖರೀದಿಸುತ್ತಿದ್ದ. ಬಳಿಕ ತೀರಾ ಅಗತ್ಯವಿರುವ ಕೊರೋನಾ ರೋಗಿಗಳಿಗೆ ಲಕ್ಷಾಂತರ ರು.ಗೆ ಮಾರುವುದನ್ನೇ ದಂಧೆಯಾಗಿಸಿಕೊಂಡಿದ್ದ. ಈ ಆಕ್ಸಿಜನ್ ಸಿಲಿಂಡರ್ ಅನ್ನು 1 ಲಕ್ಷ ರು.ವರೆಗೂ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.
ರೋಗಿ ದಾಖಲಿಸಿಕೊಳ್ಳದಿದ್ರೆ ಕ್ರಿಮಿನಲ್ ಕೇಸ್: ಸುಧಾಕರ್ ಎಚ್ಚರಿಕೆ!
ಸದ್ಯ ಅವನಿಂದ 19 ಆಕ್ಸಿಜನ್ ಸಿಲೆಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ನಗರದಲ್ಲಿ ಅಕ್ರಮ ಆಕ್ಸಿಜನ್ ಸಿಲಿಂಡರ್ ಮಾರಾಟ ದಂಧೆಯೇ ನಡೆಯುತ್ತಿದ್ದು, ಶನಿವಾರ 29 ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ತೆಲಂಗಾಣದ ಶೇ.60ರಷ್ಟುಕೊರೋನಾ ವೈರಸ್ ಪ್ರಕರಣಗಳು ಹೈದರಾಬಾದ್ ಒಂದರಲ್ಲೇ ದಾಖಲಾಗುತ್ತಿದೆ. ಹೀಗಾಗಿ ನಗರದಲ್ಲಿ ಆಕ್ಸಿಜನ್ ಸಿಲಿಂಡರ್‌ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಸಾಮಾನ್ಯ ಮಾರುಕಟ್ಟೆಯಲ್ಲಿ 46.7 ಲೀಟರ್‌ನ ಆಕ್ಸಿಜನ್ ಸಿಲಿಂಡರ್ ಬೆಲೆಯು 8500 ರು.ನಿಂದ 10,500 ರು.ವರೆಗೆ ಇರಲಿದೆ. ಆದರೆ, ಅದನ್ನು 10ಪಟ್ಟು ಹೆಚ್ಚು ಬೆಲೆಯಲ್ಲಿ ಅಕ್ಬರ್ ಮಾರಾಟ ಮಾಡುತ್ತಿದ್ದ.
