India@75: ದ. ಭಾರತದಲ್ಲಿ ಉಪ್ಪಿನ ಸತ್ಯಾಗ್ರಹಕ್ಕೆ ಅಂಕೋಲಾ ಸ್ಪೂರ್ತಿ

ಅಂಕೋಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ದೇಶಕ್ಕೇ ಮಾದರಿ. ಉಪ್ಪಿನ ಸತ್ಯಾಗ್ರಹ, ಕರಬಂದಿ ಸತ್ಯಾಗ್ರಹದಿಂದ ಅಂಕೋಲಾ ಕರ್ನಾಟಕದ ಬಾರ್ಡೋಲಿ ಎಂದು ಕರೆಸಿಕೊಂಡಿದೆ. ಈ ಹೋರಾಟದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಇಲ್ಲಿ ಸತ್ಯಾಗ್ರಹ ಸ್ಮಾರಕ ಭವನ ತಲೆ ಎತ್ತಿನಿಂತಿದೆ.

Uttara Kannada Ankola Proud of Its Role in Salt Satyagraha hls

ಅಂಕೋಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ದೇಶಕ್ಕೇ ಮಾದರಿ. ಉಪ್ಪಿನ ಸತ್ಯಾಗ್ರಹ, ಕರಬಂದಿ ಸತ್ಯಾಗ್ರಹದಿಂದ ಅಂಕೋಲಾ ಕರ್ನಾಟಕದ ಬಾರ್ಡೋಲಿ ಎಂದು ಕರೆಸಿಕೊಂಡಿದೆ. ಈ ಹೋರಾಟದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಇಲ್ಲಿ ಸತ್ಯಾಗ್ರಹ ಸ್ಮಾರಕ ಭವನ ತಲೆ ಎತ್ತಿನಿಂತಿದೆ.

ಸ್ವಾತಂತ್ರ್ಯ ಹೋರಾಟದ ಕಿಚ್ಚು ದೇಶಾದ್ಯಂತ ಆವರಿಸಿದಾಗ ಮಹಾತ್ಮಾ ಗಾಂಧೀಜಿ 1934ರಲ್ಲಿ ಅಂಕೋಲೆಗೆ ಬಂದಿದ್ದರು. ಆಗ ಇಲ್ಲಿನ ಕಟ್ಟೆಮೇಲೆ ಕುಳಿತು ಸಾವಿರಾರು ಜನರನ್ನುದ್ದೇಶಿಸಿ ಮಾತನಾಡಿದ್ದರು. ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸಿದ್ದರು. ಆ ಮೈದಾನ ಮುಂದೆ ಗಾಂಧಿ ಮೈದಾನವಾಯಿತು. ಅದೇ ಗಾಂಧಿ ಮೈದಾನದಲ್ಲಿ 1980ರ ದಶಕದಲ್ಲಿ ಸತ್ಯಾಗ್ರಹ ಸ್ಮಾರಕ ಭವನ ತಲೆ ಎತ್ತಿ ನಿಂತಿದೆ.

ಸತ್ಯಾಗ್ರಹ ಸ್ಮಾರಕ ಭವನಕ್ಕೆ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಶಿಲಾನ್ಯಾಸ ನೆರವೇರಿಸಿದಾಗ ಮೊರಾರ್ಜಿ ದೇಸಾಯಿ ಅದಕ್ಕೆ ಸಾಕ್ಷಿಯಾಗಿದ್ದರು. 1985-86ರಲ್ಲಿ ಭವ್ಯವಾದ ಸಭಾಭವನ, ಗಾಂಧೀಜಿ ಪ್ರತಿಮೆ, ಸ್ವಾತಂತ್ರ್ಯ ಹೋರಾಟ ನೆನಪಿಸುವ ಚಿತ್ರಗಳನ್ನೊಳಗೊಂಡ ಕಟ್ಟಡ ತಲೆಎತ್ತಿ ನಿಂತಿತು. ಅದಕ್ಕೆ ಸಮೀಪದಲ್ಲೇ ಈಚೆಗೆ ಗ್ರಂಥಾಲಯ ಹಾಗೂ ವಸ್ತು ಸಂಗ್ರಹಾಲಯವನ್ನೂ ನಿರ್ಮಿಸಲಾಗಿದೆ. ದೊಡ್ಡ ಚರಕವೊಂದನ್ನು ಸಂರಕ್ಷಿಸಿ ಇಡಲಾಗಿದೆ. ಅಂಕೋಲಾದ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿ ಈ ಸ್ಮಾರಕ ಭವನ ನಿರ್ಮಾಣವಾಗಿದೆ.

ಇಡೀ ದೇಶಕ್ಕೆ ಸ್ಫೂರ್ತಿ:

ಅಂಕೋಲಾದಲ್ಲಿ 1930ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಇಡೀ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿತು. ಪೂಜಗೇರಿ ಬಯಲಿನಲ್ಲಿ ಸಭೆ ಸೇರಿದ ಜನ ಅಲ್ಲಿಂದ ಸಮುದ್ರಕ್ಕೆ ಹೋಗಿ ಉಪ್ಪುನೀರು ತಂದು ತಹಸೀಲ್ದಾರ್‌ ಕಚೇರಿ ಎದುರು ಮೂರು ಕಲ್ಲುಗಳನ್ನಿಟ್ಟು ಬೆಂಕಿ ಹೊತ್ತಿಸಿ ಉಪ್ಪು ತಯಾರಿಸಿ ಸಂಭ್ರಮಿಸಿದರು. ಈ ಉಪ್ಪನ್ನು ನಂತರ ಹರಾಜು ಹಾಕಿ ಹೊನ್ನಪ್ಪ ದೇವಿ ನಾಯ್ಕ ಎಂಬ ಸ್ಥಳೀಯ ವ್ಯಕ್ತಿ ಖರೀದಿಸಿದರು.

ಈ ಮೂಲಕ ದಕ್ಷಿಣ ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ಶುರುವಾಯಿತು. ಈ ಹೋರಾಟಕ್ಕೆ ಬ್ರಿಟಿಷ್‌ ಅಧಿಕಾರಿಗಳೇ ಕಕ್ಕಾಬಿಕ್ಕಿಯಾಗಿದರು. ನಂತರ 1931ರಲ್ಲಿ ಕರಬಂದಿ ಚಳವಳಿ ಉಗ್ರ ರೂಪ ತಾಳಿತು. ಕರ ನಿರಾಕರಣೆ ಬಗ್ಗೆ ಅಂಕೋಲೆಯ ಜನತೆ ಸೂರ್ವೆ ದೇವಾಲಯದ ಬಳಿ ಸಭೆ ಸೇರಿದರು. ಬ್ರಿಟಿಷ್‌ ಅಧಿಕಾರಿಗಳು ಕರ ನಿರಾಕರಣೆ ಮಾಡಿದರೆ ಮನೆಗಳನ್ನು ಜಪ್ತಿ ಮಾಡುವುದಾಗಿ ಬೆದರಿಸಿದರು.

‘ಏನೇ ಮಾಡಿ ನಾವು ಕರ ಕೊಡುವುದಿಲ್ಲ’ ಎಂದು ಒಕ್ಕೊರಲಿನಿಂದ ಚಳವಳಿಗೆ ಧುಮುಕಿದರು. ವಾಸರೆ, ಕುದ್ರಗಿ, ಹಿಚ್ಕಡ ಮತ್ತಿತರ ಊರುಗಳ ನೂರಾರು ಮನೆಗಳಲ್ಲಿದ್ದ ಜನರನ್ನು ಹೊರದಬ್ಬಿ ಮನೆಗಳನ್ನು ಜಪ್ತಿ ಮಾಡಿದರು. ಬ್ರಿಟಿಷರ ದಬ್ಬಾಳಿಕೆಗೆ ಜಗ್ಗದೇ ಮುಂದುವರಿದ ಹೋರಾಟ ಯಶಸ್ವಿಯಾಯಿತು. ಈ ಎರಡು ಹೋರಾಟಗಳ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸತ್ಯಾಗ್ರಹ ಸ್ಮಾರಕ ಭವನ ತಲೆ ಎತ್ತಿ ನಿಂತು ಇಂದಿಗೂ ಹೋರಾಟದ ನೆನಪನ್ನು ಹಸಿರಾಗಿಟ್ಟಿದೆ.

- ವಸಂತಕುಮಾರ ಕತಗಾಲ

Latest Videos
Follow Us:
Download App:
  • android
  • ios