ದೇಶದಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನದಡಿ ಕೋಟ್ಯಂತರ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲಾಗಿದೆ. ಈ ಪೈಕಿ ಆನಂದ್ ಮಹೀಂದ್ರಾ, ಹಿರಿಯ ದಂಪತಿ ದ್ವಜ ಹಾರಿಸುತ್ತಿರುವ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. 

ದೇಶ ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಅಲ್ಲದೆ, ಆಗಸ್ಟ್‌ 13 ರಿಂದ 3 ದಿನಗಳ ಹರ್‌ ಘರ್ ತಿರಂಗಾ ಅಭಿಯಾನವನ್ನೂ ಆಯೋಜಿಸಲಾಗಿದೆ. ಈ ಹಿನ್ನೆಲೆ ದೇಶದ ಬಹುತೇಕ ಜನರು ಶನಿವಾರವೇ ತಮ್ಮ ಮನೆಗಳಲ್ಲಿ ಬಾವುಟ ಹಾರಿಸಿದ್ದರು. ಕೇಂದ್ರ ಸರ್ಕಾರದ ಹರ್‌ ಘರ್ ತಿರಂಗಾ ಅಭಿಯಾನ ಹಿನ್ನೆಲೆ ಉದ್ಯಮಿ ಆನಂದ್‌ ಮಹೀಂದ್ರಾ ಹಿರಿಯ ದಂಪತಿ ಬಾವುಟ ಹಾರಿಸುತ್ತಿರುವ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

ಆನಂದ್‌ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಫೋಟೋ ವೈರಲ್‌ ಆಗಿದ್ದು, ಇದಕ್ಕೆ ಲಕ್ಷಾಂತರ ಲೈಕ್ಸ್‌ಗಳು ಸಿಕ್ಕಿದ್ದು, ಹಾಗೂ ಹತ್ತಾರು ಸಾವಿರ ರೀಟ್ವೀಟ್‌ಗಳನ್ನು ಗಳಿಸಿದೆ. ಈ ಫೋಟೋದಲ್ಲಿ ನೋಡುವಂತೆ ವಯಸ್ಸಾದ ಅಜ್ಜಿ ಡ್ರಮ್‌ ಮೇಲೆ ನಿಂತುಕೊಂಡು ತಿರಂಗಾ ಧ್ವಜವನ್ನು ಹಾರಿಸುವ ಯತ್ನ ಮಾಡುತ್ತಾರೆ. ಇನ್ನೊಂದೆಡೆ, ಡ್ರಮ್‌ ಮೇಲೆ ನಿಂತುಕೊಂಡಿರುವ ಅಜ್ಜಿ ಕೆಳಗೆ ಬೀಳದಂತೆ ಅವರ ಪತಿ ಡ್ರಮ್‌ ಅನ್ನು ಹಿಡಿದುಕೊಂಡಿದ್ದು, ಧ್ವಜ ಹಾರಿಸಲು ಪತ್ನಿಯನ್ನು ಸಪೋರ್ಟ್‌ ಮಾಡಿದ್ದಾರೆ. 

ಇದನ್ನು ಓದಿ: ಭ್ರಷ್ಟಾಚಾರ, ಕುಟುಂಬ ರಾಜಕಾರಣ ಭಾರತದ 2 ದೊಡ್ಡ ಸವಾಲುಗಳು: ಪ್ರಧಾನಿ ಮೋದಿ

ವೈರಲ್‌ ಆಗಿರುವ ಆನಂದ್ ಮಹೀಂದ್ರಾ ಟ್ವೀಟ್‌ನಲ್ಲಿ ಏನಿದೆ..?

ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ, ‘’ಸ್ವಾತಂತ್ರ್ಯ ದಿನದ ಕುರಿತು ಏಕಿಷ್ಟು ಗದ್ದಲ ಎಂದು ನೀವು ಯಾವಾಗಲೂ ಗೊಂದಲಕ್ಕೊಳಗಾಗಿದ್ದರೆ, ನೀವು ಇವರಿಬ್ಬರನ್ನು ಕೇಳಿ. ಯಾವ ಉಪನ್ಯಾಸಕ್ಕಿಂತಲೂ ಚೆನ್ನಾಗಿ ಇವರು ವಿವರಿಸುತ್ತಾರೆ. ಜೈ ಹಿಂದ್’’ ಎಂದು ಅವರು ಟ್ವೀಟ್‌ ಮಾಡಿದ್ದು, ಹಿರಿಯ ದಂಪತಿ ಧ್ವಜ ಹಾರಿಸುತ್ತಿರುವ ಆ ಫೋಟೋವನ್ನೂ ಹಂಚಿಕೊಂಡಿದ್ದಾರೆ. 

ಆನಂದ್ ಮಹೀಂದ್ರಾ ಟ್ವೀಟ್‌ ಇಲ್ಲಿದೆ ನೋಡಿ..

Scroll to load tweet…

ಭಾರತದ ಖ್ಯಾತ ಉದ್ಯಮಿಯ ಈ ಪೋಸ್ಟ್‌ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವು ನೆಟ್ಟಿಗರು ಕಮೆಂಟ್‌ ವಿಭಾಗದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ, ಹಲವು ನೆಟ್ಟಿಗರು ‘ಹರ್ ಘರ್‌ ತಿರಂಗಾ’ ಅಭಿಯಾನದ ಕುರಿತ ಫೋಟೋ ಹಾಗೂ ವಿಡಿಯೋಗಳನ್ನು ಶೇರ್‌ ಮಾಡಿದ್ದಾರೆ. 

 ‘ಹರ್ ಘರ್ ತಿರಂಗಾ’ ಅಭಿಯಾನದಡಿ ಆಗಸ್ಟ್ 13 ರಿಂದ ಆಗಸ್ಟ್ 15 ರವರೆಗೆ ದೇಶಾದ್ಯಂತ 20 ಕೋಟಿಗೂ ಅಧಿಕ ಮನೆಗಳಲ್ಲಿ ತಿರಂಗಾ ಧ್ವಜವನ್ನು ಹಾರಿಸಲಾಗಿದೆ ಎಂದು ತಿಳಿದುಬಂದಿದೆ.. ಸರ್ಕಾರಿ ಹಾಗೂ ಸಾರ್ವಜನಿಕ ಸೆಕ್ಟರ್‌ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು, ಎನ್‌ಜಿಒ, ರೆಸ್ಟೋರೆಂಟ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಟೋಲ್ ಪ್ಲಾಜಾಗಳು ಮತ್ತು ಪೊಲೀಸ್ ಠಾಣೆಗಳನ್ನು ಇದು ಒಳಗೊಂಡಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ: ಪಂಚ ಪ್ರಾಣಗಳ ಈಡೇರಿಕೆಗೆ ಸಂಕಲ್ಪ ತೊಡೋಣ: ಪ್ರಧಾನಿ ಮೋದಿ

ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ನಲ್ಲಿ ಸಕ್ರಿಯರಾಗಿರುವ ಆನಂದ್‌ ಮಹೀಂದ್ರಾ 96 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ 47 ವರ್ಷಗಳ ಹಿಂದೆ ಅಂದರೆ 1975 ರಲ್ಲಿ ತೆಗೆದ ಸ್ಪೇನ್‌ನ ಟೊಲೆಡೋ ಚಿತ್ರವನ್ನು ಆನಂದ್‌ ಮಹೀಂದ್ರಾ ಹಂಚಿಕೊಂಡಿದ್ದರು. ವಿದ್ಯಾರ್ಥಿ ಪೋಟೋಗ್ರಫಿ ಪ್ರಾಜೆಕ್ಟ್‌ ಮಾಡುವ ವೇಳೆ ಈ ಚಿತ್ರ ತೆಗೆಯಲಾಗಿತ್ತು ಎಂಬ ಕ್ಯಾಪ್ಷನ್‌ ಅನ್ನು ಸಹ ಅವರು ನೀಡಿದ್ದರು. ಅವರ ಈ ಫೋಟೋ ಸಹ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಶನಿವಾರ ಹಂಚಿಕೊಂಡ ಈ ಪೋಸ್ಟ್‌ಗೆ ಹಲವು ನೆಟ್ಟಿಗರು ವಿಭಿನ್ನ ಕಮೆಂಟ್‌ಗಳನ್ನು ಮಾಡಿದ್ದರು. ಹಾಗೂ, ಈ ಫೋಟೋಗೆ ಸಾವಿರಾರು ಲೈಕ್‌ಗಳು ಹಾಗೂ ನೂರಾರು ಕಮೆಂಟ್‌ಗಳು ಸಹ ಬಂದಿದ್ದವು. ಹಲವು ನೆಟ್ಟಿಗರು ಈ ರೀತಿ ಫೊಟೋ ತೆಗೆಯಬಹುದಾಗಿತ್ತು ಎಂದು ತಮ್ಮ ಬಿಟ್ಟಿ ಸಲಹೆಗಳನ್ನು ಸಹ ನೀಡಿದ್ದಾರೆ.