5 ತಿಂಗಳಲ್ಲಿ 23 ಸಾವಿರ ಕಿ.ಮೀ ಬೈಕ್ ರೈಡ್: ತಂದೆಯ ಆಸೆ ಈಡೇರಿಸಿದ ಕರಾವಳಿ ಕುವರಿ!
ತನ್ನ ತಂದೆಯ ಆಸೆ ಈಡೇರಿಸುವ ಹೆಸರಲ್ಲಿ ಮತ್ತು ಸ್ವಾತೋಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ ಅರುಣಾಚಲ ಪ್ರದೇಶಕ್ಕೆ ಬೈಕ್ ಯಾತ್ರೆ ಹೊರಟ ಯುವತಿಯೊಬ್ಬಳು ಇದೀಗ ಇಡೀ ದೇಶ ಸುತ್ತಿ ತಾಯ್ನಾಡಿಗೆ ವಾಪಾಸಾಗಿದ್ದಾಳೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಆ.10): ತನ್ನ ತಂದೆಯ ಆಸೆ ಈಡೇರಿಸುವ ಹೆಸರಲ್ಲಿ ಮತ್ತು ಸ್ವಾತೋಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ ಅರುಣಾಚಲ ಪ್ರದೇಶಕ್ಕೆ ಬೈಕ್ ಯಾತ್ರೆ ಹೊರಟ ಯುವತಿಯೊಬ್ಬಳು ಇದೀಗ ಇಡೀ ದೇಶ ಸುತ್ತಿ ತಾಯ್ನಾಡಿಗೆ ವಾಪಾಸಾಗಿದ್ದಾಳೆ. ಬರೋಬ್ಬರಿ 23 ಸಾವಿರ ಕಿ.ಮೀಗಳನ್ನು ಐದು ತಿಂಗಳಿನಲ್ಲಿ ಕ್ರಮಿಸಿ ಇಂದು ಹುಟ್ಟೂರಿಗೆ ಆಗಮಿಸಿದ್ದು, ತಾನು ಕಲಿತ ಶಾಲೆಗೆ ಆಗಮಿಸಿ ತನ್ನ ಇಡೀ ಯಾತ್ರೆಯನ್ನ ಸೈನಿಕರಿಗೆ ಅರ್ಪಿಸಿದ್ದಾಳೆ.
ಮೂಲತಃ ಕಾಸರಗೋಡು ಜಿಲ್ಲೆಯ ಕುಂಬಳೆ ನಿವಾಸಿಯಾಗಿರುವ ಅಮೃತಾ ಜೋಷಿ ಬೈಕ್ ಯಾತ್ರೆ ಕೊನೆಯ ಹಂತದಲ್ಲಿ ಇಂದು ಮಂಗಳೂರು ಮೂಲಕವಾಗಿ ಕುಂಬಳೆ ತಲುಪಿ ಯಾತ್ರೆಯನ್ನ ಅಂತ್ಯಗೊಳಿಸಲಿದ್ದಾರೆ. ಫೆಬ್ರವರಿ 9 ರಂದು ಆರಂಭಗೊಂಡಿದ್ದ ಈ ಬೈಕ್ ಯಾತ್ರೆ ಅಪಘಾತವಾಗಿದ್ದ ಹಿನ್ನೆಲೆಯಲ್ಲಿ ಒಂದು ತಿಂಗಳು ಮೊಟುಕುಗೊಳಿಸಲಾಗಿತ್ತು. ಆದರೆ ಛಲ ಬಿಡದ ಅಮೃತಾ ಮತ್ತೊಮ್ಮೆ ಯಾತ್ರೆ ಮುಂದುವರೆಸಿ ಇದೀಗ ದೇಶದ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿ ವಾಪಾಸಾಗಿದ್ದಾರೆ. 17ನೇ ವಯಸ್ಸಿಲ್ಲೇ ಬೈಕ್ ರೈಡಿಂಗ್ ಕಲಿತಿರೋ ಈಕೆಗೆ ಸದ್ಯ 22ರ ಹರೆಯ. ಈಕೆಯ ಬೈಕ್ ಕ್ರೇಝ್‌ಗೆ ಸಂಪೂರ್ಣ ಸಹಕಾರ ನೀಡಿದ್ದು, ಅಮೃತಾ ಅವರ ತಂದೆ ಅಶೋಕ್ ಜೋಷಿ.
ಪ್ರವೀಣ್ ಹತ್ಯೆ ಕೇಸ್, ಪೊಲೀಸ್ರಿಗೆ ಪ್ರಮುಖ ಆರೋಪಿ ಸುಳಿವು, ಆಸ್ತಿ ಮುಟ್ಟುಗೋಲಿಗೆ ಸಜ್ಜು
ಮಗಳು ಬೈಕ್ ರೈಡಿಂಗ್ ಕಲಿಬೇಕು ಮತ್ತು ಬೈಕ್‌ನಲ್ಲಿ ದೇಶ ಸುತ್ತಬೇಕು ಅನ್ನೋದು ಆಸೆ ಅಶೋಕ್ ಜೋಷಿಯವರದ್ದಾಗಿತ್ತು. ಅದರೆ ಅಮೃತಾ ಪರಿಪೂರ್ಣವಾಗಿ ಬೈಕ್ ರೈಡಿಂಗ್ ಕಲಿಯುವ ವೇಳೆಗೆ ತಂದೆ ಅಶೋಕ್ ಜೋಷಿ ಇಹಲೋಕ ತ್ಯಜಿಸಿದ್ದಾರೆ. ಆ ಬಳಿಕ ತನ್ನ ಪದವಿ ಮುಗಿಸಿದ ಅಮೃತಾ ಜೋಷಿಗೆ ಈ ವೇಳೆ ಪ್ರೋತ್ಸಾಹ ನೀಡಿದ್ದು ತಾಯಿ ಅನ್ನಪೂರ್ಣ. ತಂದೆಯ ಆಸೆಯನ್ನು ಪೂರೈಸಬೇಕು ಹಾಗೂ ಬೈಕ್‌ನಲ್ಲೇ ದೇಶ ಪರ್ಯಟನೆ ಮಾಡಿ ಸಮಾಜಕ್ಕೆ ಸಂದೇಶ ನೀಡಬೇಕು ಅಂತ ತಾಯಿ ಪ್ರೋತ್ಸಾಹ ನೀಡಿದರು.
ಕೇರಳದ ಕ್ಯಾಲಿಕಟ್‌ನಿಂದ ಬೈಕ್ ಯಾತ್ರೆ ಶುರು!: ಕೇವಲ ಅರುಣಾಚಲ ಪ್ರದೇಶದವರೆಗೆ ಮಾತ್ರ ಸೀಮಿತವಾಗಿದ್ದ ಬೈಕ್ ಯಾತ್ರೆ ಜನರಿಂದ ಸಿಕ್ಕ ಪ್ರೋತ್ಸಾಹದಿಂದ ಇಡೀ ದೇಶ ಸುತ್ತುವ ಪ್ರೋತ್ಸಾಹ ನೀಡಿತು. ಫೆಬ್ರವರಿ 9ರಂದು ಕೇರಳದ ಕ್ಯಾಲಿಕಟ್ ನಲ್ಲಿ ಆರಂಭಗೊಂಡಿದ್ದ ಇವರ ಬೈಕ್ ಯಾತ್ರೆ ಎಪ್ರಿಲ್ 9ರಂದು ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಅಂತ್ಯಗೊಂಡಿತ್ತು. ಪ್ರತಿ ದಿನ 8 ಗಂಟೆಗಳ ಕಾಲ ಬೈಕ್ ರೈಡ್ ಮಾಡುತ್ತಿದ್ದ ಅಮೃತಾ ಅರುಣಾಚಲ ಪ್ರದೇಶ ತಲುಪುವವರೆಗೂ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಅರುಣಾಚಲ ತಲುಪಿದ ಬಳಿಕ ಅಲ್ಲಿನ ಜನರು ನೀಡಿದ ಆತಿಥ್ಯ ಹಾಗೂ ಪ್ರೀತಿ ಗೌರವ ಬೈಕ್ ಯಾತ್ರೆಯನ್ನು ಅಂತ್ಯಗೊಳಿಸಲು ಯೋಚಿಸಿದ್ದ ಅಮೃತಾ ಅವರಿಗೆ ಮತ್ತೆ ದೇಶ ಸುತ್ತಬೇಕು ಅನ್ನೋ ಪ್ರೇರಣೆ ನೀಡಿತ್ತು.
ದೇಶ ಸುತ್ತಲು ಹೊರಟವಳಿಗೆ ಅಪಘಾತ: ಛಲ ಬಿಡದ ಅಮೃತ!: ಅರುಣಾಚಲದ ತವಾಂಗ್ ನಲ್ಲಿ ಅಂತ್ಯಗೊಳ್ಳಬೇಕಾಗಿದ್ದ ಅಮೃತಾ ಬೈಕ್ ಪ್ರಯಾಣ ಮತ್ತೆ ಆರಂಭವಾಗಿತ್ತು. ದೇಶದ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡುವ ಹಿನ್ನೆಲೆಯಲ್ಲಿ ಲದಾಕ್, ಪಂಜಾಬ್ ದೆಹಲಿ ಮುಗಿಸಿ ಉತ್ತರ ಪ್ರದೇಶ ತಲುಪಿದ್ದ ಅಮೃತಾಗೆ ಹೈವೇಯಲ್ಲಿ ಅಪಘಾತವಾಗಿತ್ತು. ಹಿಂದಿನಿಂದ ಬಂದ ಸ್ಕಾರ್ಪಿಯೋ ವಾಹನವೊಂದು ಅಮೃತಾ ಓಡಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿತ್ತು. ಅಮೃತಾಗೂ ಗಂಭೀರ ಸ್ವರೂಪದ ಏಟುಗಳಾಗಿದ್ದ ಕಾರಣ ಮನೆಗೆ ವಾಪಾಸಾಗಿ ಒಂದು ತಿಂಗಳು ಮನೆಯಲ್ಲೇ ಇರುವಂತಾಗಿತ್ತು. ಹಾಗಂತ ದೇಶ ಸುತ್ತುವ ಕನಸು ಅಪೂರ್ಣವಾಗಲು ಬಿಡಬಾರದು ಅನ್ನೋ ಛಲವೂ ಇತ್ತು. ಇದೇ ವೇಳೆ ಅಮೃತಾಗೆ ಹೊಸ ಬಿಎಂಡಬ್ಲ್ಯೂ ಬೈಕ್ ನೀಡುವ ಮೂಲಕ ಪ್ರೋತ್ಸಾಹ ನೀಡಿದ್ದು ಅವರ ಭಾವಿ ಪತಿ.
ರಾಜ್ಯದಲ್ಲಿ ಸಿಎಂ ಬದಲಾವಣೆ: ನಳಿನ್ ಕುಮಾರ್ ಕಟೀಲ್ ಹೇಳಿದ್ದಿಷ್ಟು
ಎಲ್ಲಿ ಯಾತ್ರೆ ಮೊಟಕುಗೊಂಡಿತ್ತೋ ಅಲ್ಲಿಂದಲೇ ಮತ್ತೆ ಯಾತ್ರೆಯನ್ನ ಆರಂಭ ಮಾಡಲಾಗಿತ್ತು. ಇದೀಗ ಆಕೆ ಕಲಿತ ಮಂಗಳೂರಿನ ಕೆನರಾ ಹೆಣ್ಣುಮಕ್ಕಳ ಶಾಲೆಯಲ್ಲಿ ಅದ್ದೂರಿ ಸ್ವಾಗತ ನೀಡಿ ಗೌರವಿಸಲಾಗಿದೆ. ಪಾಕಿಸ್ತಾನ, ಚೀನಾ ಬಾಂಗ್ಲಾದೇಶ ಗಡಿ ಪ್ರದೇಶಗಳಲ್ಲಿ ಹಾದು ಹೋಗುವಾಗ ಅಮೃತಾ ಹಲವು ಸೈನಿಕರನ್ನು ಭೇಟಿಯಾಗಿದ್ದಾರೆ. ಈ ವೇಳೆ ಏಕಾಂಗಿಯಾಗಿ ಬೈಕ್ ಮೂಲಕ ದೇಶ ಸುತ್ತುವ ಈಕೆಯ ಧೈರ್ಯವನ್ನು ಅವರು ಕೊಂಡಾಡಿ ಬೆನ್ನು ತಟ್ಟಿದ್ದಾರೆ. ತನ್ನ ಬೈಕನಲ್ಲಿ ಐ ರೈಡ್ ಫಾರ್ ಇಂಡಿಯನ್ ಆರ್ಮಿ ಅಂತ ಬರೆದುಕೊಂಡಿದ್ದ ಅಮೃತಾ ಸೈನಿಕರ ಮನ ಗೆದ್ದಿದ್ದಾರೆ. ಅವರ ಜೊತೆ ಮಾತನಾಡಿ ಅವರ ಕಷ್ಟ ಸುಖವನ್ನೂ ವಿಚಾರಿಸಿದ್ದಾರೆ. ಹೀಗಾಗಿ ನನ್ನ ಈ ಯಾತ್ರೆ ಅದು ಸಂಪೂರ್ಣ ದೇಶದ ಸೈನಿಕರಿಗೆ ಅರ್ಪಿಸಿರುವುದಾಗಿ ಅಮೃತಾ ಹೇಳಿಕೊಂಡಿದ್ದಾರೆ.