ಕರ್ನಾಟಕದ ಕರಾವಳಿಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದು, ಹೆಚ್ಚಿಸಿದ್ದು ಉಪ್ಪು. ಸಮುದ್ರ ತೀರದಲ್ಲಿ ಯಥೇಚ್ಛವಾಗಿ ಉಚಿತವಾಗಿ ಸಿಗುತ್ತಿದ್ದ ಉಪ್ಪು, ಇಲ್ಲಿನ ಜನರ ಉಸಿರಿನಂತಿತ್ತು. ಅದರ ಮೇಲೂ ಬ್ರಿಟಿಷ್‌ ಸರ್ಕಾರ ತೆರಿಗೆ ವಿಧಿಸಿದಾಗ, ದೇಶಕ್ಕೆ ಉಪ್ಪು ತಯಾರಿಸಿ ಪೂರೈಸುತ್ತಿದ್ದ ದೇಶದ ಎರಡೂ ಸಮುದ್ರ ತೀರಗಳು ಅಸಹನೆಯಿಂದ ಮೈಕೊಡವಿಕೊಂಡು ಎದ್ದು ನಿಂತವು.

ಕರ್ನಾಟಕದ ಕರಾವಳಿಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದು, ಹೆಚ್ಚಿಸಿದ್ದು ಉಪ್ಪು. ಸಮುದ್ರ ತೀರದಲ್ಲಿ ಯಥೇಚ್ಛವಾಗಿ ಉಚಿತವಾಗಿ ಸಿಗುತ್ತಿದ್ದ ಉಪ್ಪು, ಇಲ್ಲಿನ ಜನರ ಉಸಿರಿನಂತಿತ್ತು. ಅದರ ಮೇಲೂ ಬ್ರಿಟಿಷ್‌ ಸರ್ಕಾರ ತೆರಿಗೆ ವಿಧಿಸಿದಾಗ, ದೇಶಕ್ಕೆ ಉಪ್ಪು ತಯಾರಿಸಿ ಪೂರೈಸುತ್ತಿದ್ದ ದೇಶದ ಎರಡೂ ಸಮುದ್ರ ತೀರಗಳು ಅಸಹನೆಯಿಂದ ಮೈಕೊಡವಿಕೊಂಡು ಎದ್ದು ನಿಂತವು.

ಗಾಂಧೀಜಿ 1930ರಲ್ಲಿ ಉಪ್ಪಿನ ಸತ್ಯಾಗ್ರಹಕ್ಕೆ ನೀಡಿದ್ದ ಕರೆ ಆಗಿನ ಕಾಂಗ್ರೆಸ್‌ ಪಕ್ಷದ ನೆಟ್ವರ್ಕ್ ಮೂಲಕ ದೇಶದ ಮೂಲೆ ಮೂಲೆಗೆ, ಅಂತೆಯೇ ಕರಾವಳಿಯನ್ನೂ ತಲುಪಿತ್ತು. ಗಾಂಧಿ ಸಬರಮತಿ ಆಶ್ರಮದಿಂದ 24 ದಿನ ಸಾವಿರಾರು ಮಂದಿಯೊಂದಿಗೆ ಕಾಲ್ನಡಿಗೆಯಲ್ಲಿ ದಂಡಿ ಸಮುದ್ರ ತೀರಕ್ಕೆ ಬಂದು ಏ.6ರಂದು ಉಪ್ಪು ತಯಾರಿಸಿ ಚಳವಳಿಗೆ ಚಾಲನೆ ನೀಡಿದ್ದರು.

India@75: ಪಿಕೆಟಿಂಗ್ ಚಳವಳಿಗೆ ಸಾಕ್ಷಿ ಮಂಡ್ಯದ ಫ್ರೆಂಚ್ ರಾಕ್ಸ್ ಸಂತೆ

ಆಗಿನ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ನ ನಿರ್ಧಾರದಂತೆ ಕರಾವಳಿಯಲ್ಲಿ ಉ.ಕ. ಜಿಲ್ಲೆಯ ಅಂಕೋಲದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಲಾಯಿತು. ಅದೇ ಮಾದರಿಯಲ್ಲಿ ಉಡುಪಿಯಲ್ಲಿಯೂ ಉಪ್ಪಿನ ಸತ್ಯಾಗ್ರಹಕ್ಕೆ ಸುಮಾರು 20 ದಿನಗಳ ಪೂರ್ವತಯಾರಿ, ಅಲ್ಲಲ್ಲಿ ಸಭೆಗಳು, ಪ್ರಭಾತ್‌ ಪೇರಿಗಳು ನಡೆದವು. ಗಾಂಧೀಜಿ ಕರೆಯಂತೆ ಸವಿನಯ ಕಾನೂನು ಭಂಗ ಮಾಡಿ ಸತ್ಯಾಗ್ರಹ ನಡೆಸಲು ಜನರಿಗೆ ತರಬೇತಿ ನೀಡಲಾಯಿತು. ಕರಾವಳಿಯ ಮುಂದಾಳುಗಳಾದ ಎಸ್‌.ಯು.ಪಣಿಯಾಡಿ, ಪಾಂಗಾಳ ಸಹೋದರರು, ಕಾರ್ನಾಡ್‌ ಸದಾಶಿವ ರಾಯರು, ವಿಠಲ ಕಾಮತ್‌ ಮಾರ್ಗದರ್ಶನ ಮಾಡಿದರು.

ಏ.13 ರಂದು ಬೆಳಗ್ಗೆ 6 ಗಂಟೆಗೆ ರಥಬೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿಂದ ನೂರಾರು ಜನರು ತ್ರಿವರ್ಣ ದ್ವಜ ಹಿಡಿದು, ವಂದೇ ಮಾತರಂ ಕೂಗುತ್ತಾ, ಮಲ್ಪೆ ಬೀಚಿಗೆ ಬಂದರು. ಸಮುದ್ರದಿಂದ ಪಾತ್ರೆಯಲ್ಲಿ ನೀರು ತುಂಬಿ ತಂದು ಅಲ್ಲಿನ ತೆಂಗಿನ ತೋಟದಲ್ಲಿ ಒಲೆ ಹಾಕಿ, ನೀರು ಕಾಯಿಸಿ ದಿನವಿಡೀ ಉಪ್ಪು ತಯಾರಿಸಿದರು. ಈ ಉಪ್ಪನ್ನು ಪೊಟ್ಟಣ ಕಟ್ಟಿಕೊಂಡು ಮತ್ತೆ ಮೆರವಣಿಗೆಯಲ್ಲಿ ಉಡುಪಿಗೆ ಮರಳಿ, ಇಲ್ಲಿನ ಜಟ್ಕಾ ಸ್ಟ್ಯಾಂಡ್‌ನಲ್ಲಿ ಹರಾಜು ಹಾಕಿದರು. ಬ್ರಿಟಿಷ್‌ ಸರ್ಕಾರದ ಪೊಲೀಸರು, ಲಾಠಿ ಚಾಜ್‌ರ್‍ ಮಾಡಿ, ಉಪ್ಪನ್ನು ಜಪ್ತಿ ಮಾಡಿದರು.

ಈ ಘಟನೆ ಕರಾವಳಿಯಲ್ಲಿ ಎಂತಹ ಪರಿಣಾಮ ಬೀರಿತೆಂದರೆ, ಮುಂದೆ ಪ್ರತಿದಿನ ಎಂಬಂತೆ ಸುಮಾರು ಒಂದೂವರೆ ತಿಂಗಳು ಪಡುಬಿದ್ರಿ, ಕಾಪು, ಉದ್ಯಾವರ, ಮಟ್ಟು, ಪಾಂಡೇಶ್ವರ, ಕುಂದಾಪುರ, ಮರವಂತೆ, ಕಾರವಾರ, ಭಟ್ಕಳ ಹೀಗೆ ಮಂಗಳೂರಿನಿಂದ ಭಟ್ಕಳದವರೆಗೆ ಎಲ್ಲೆಲ್ಲಿ ಸಮುದ್ರ ತೀರವಿದೆಯೋ ಅಲ್ಲಲ್ಲಿ ಜನರು ಗುಂಪು ಸೇರಿ ಉಪ್ಪು ತಯಾರಿಸಿ, ಬ್ರಿಟಿಷ್‌ ಸರ್ಕಾರಕ್ಕೆ ಸೆಡ್ಡು ಹೊಡೆಯಲಾರಂಭಿಸಿದರು.

India@75:ಹೋರಾಟಕ್ಕೆ ಶಕ್ತಿ ತುಂಬಿದ ಬಳ್ಳಾರಿಯ ಮಲ್ಲಸಜ್ಜನ ವ್ಯಾಯಾಮ ಶಾಲೆ

ಸಮುದ್ರ ತೀರದ ಜನರು ಮಾತ್ರವಲ್ಲದೇ ಮೂಡುಬಿದಿರೆ, ಕಾರ್ಕಳ, ಚಿಕ್ಕಮಗಳೂರು, ಶಿವಮೊಗ್ಗದ ಜನರು ಕೂಡ ಸಮುದ್ರ ತೀರಕ್ಕೆ ಬಂದು ತಾವೂ ಉಪ್ಪು ತಯಾರಿಯಲ್ಲಿ ಭಾಗವಹಿಸಿದ್ದು, ಈ ಸತ್ಯಾಗ್ರಹವು ಜನಸಾಮಾನ್ಯರಲ್ಲಿ ಹುಟ್ಟು ಹಾಕಿದ್ದ ಕಿಚ್ಚು ಕಾರಣವಾಗಿತ್ತು.

ಮಲ್ಪೆ ತಲುಪುವುದು ಹೇಗೆ?

ಉಡುಪಿ ನಗರದಿಂದ 5 ಕಿ.ಮೀ. ದೂರದಲ್ಲಿದೆ ಮಲ್ಪೆ

ಉಡುಪಿಯಿಂದ ಸಾಕಷ್ಟುಬಸ್‌ ವ್ಯವಸ್ಥೆಯಿದೆ

- ಸುಭಾಶ್ಚಂದ್ರ ಎಸ್‌.ವಾಗ್ಳೆ ಉಡುಪಿ