India@75: ಸ್ವಾತಂತ್ರ್ಯ ಸೇನಾನಿಗಳ ಅಡಗುತಾಣವಾಗಿದ್ದ ಮಧುಗಿರಿ ಕೋಟೆ
ಬಾಗೇಪಲ್ಲಿ, ತುಮಕೂರು ಹಾಗೂ ಕೋಲಾರ ಭಾಗಗಳ ಸಾವಿರಾರು ಮಂದಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದರು. ಬ್ರಿಟಿಷರು ಬಂಧಿಸಲು ಬಂದಾಗ ಸ್ವಾತಂತ್ರ್ಯ ಇವರೆಲ್ಲ ಮಧುಗಿರಿ ಕೋಟೆಗೆ ಹೋಗಿ ಅಲ್ಲಿರುವ ಗವಿಗಳು ಹಾಗೂ ಸುರಂಗಗಳಲ್ಲಿ ಅಡಗಿಕೊಂಡು ಮುಂದಿನ ಹೋರಾಟದ ರೂಪುರೇಷೆಗಳನ್ನು ತಯಾರು ಮಾಡುತ್ತಿದ್ದರು.
ದೇಶವ್ಯಾಪಿ ಹಬ್ಬಿದ್ದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಹೆಜ್ಜೆ ಗುರುತುಗಳು ತುಮಕೂರು ಜಿಲ್ಲೆ ಮಧುಗಿರಿಯಲ್ಲೂ ದಾಖಲಾಗಿದೆ. ಗವಿಗಳು, ಸುರಂಗಗಳು ಹೆಚ್ಚಾಗಿರುವ ಮಧುಗಿರಿ ಏಕಶಿಲಾ ಬೆಟ್ಟದಲ್ಲಿರುವ ಮಧುಗಿರಿ ಕೋಟೆ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಸ್ವಾತಂತ್ರ್ಯ ಸೇನಾನಿಗಳ ಅಡಗುತಾಣವಾಗಿತ್ತು.
ಬಾಗೇಪಲ್ಲಿ, ತುಮಕೂರು ಹಾಗೂ ಕೋಲಾರ ಭಾಗಗಳ ಸಾವಿರಾರು ಮಂದಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದರು. ಬ್ರಿಟಿಷರು ಬಂಧಿಸಲು ಬಂದಾಗ ಸ್ವಾತಂತ್ರ್ಯ ಇವರೆಲ್ಲ ಮಧುಗಿರಿ ಕೋಟೆಗೆ ಹೋಗಿ ಅಲ್ಲಿರುವ ಗವಿಗಳು ಹಾಗೂ ಸುರಂಗಗಳಲ್ಲಿ ಅಡಗಿಕೊಂಡು ಮುಂದಿನ ಹೋರಾಟದ ರೂಪುರೇಷೆಗಳನ್ನು ತಯಾರು ಮಾಡುತ್ತಿದ್ದರು.
ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಹೊಂದಿಕೊಂಡಿರುವ ಈ ಕೋಟೆಯನ್ನು 17ನೇ ಶತಮಾನದಲ್ಲಿ ಹಿರೇಗೌಡ ಎಂಬ ಪಾಳೇಗೌಡ ನಿರ್ಮಿಸಿದ್ದಾನೆ. ಬಳಿಕ ಹೈದರಾಲಿ, ಟಿಪ್ಪು ಸುಲ್ತಾನ್ ಹಾಗೂ ಮೈಸೂರು ಅರಸರ ಆಡಳಿತಾವಧಿಯಲ್ಲಿ ಇದು ಪುನರುಜ್ಜೀವನಗೊಂಡಿದೆ.
India@75: ಸ್ವಾತಂತ್ರ ಯೋಧರ ನೇಣಿಗೇರಿಸಿದ ಭೀಕರ ರಣಕಟ್ಟೆ
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ರೂಪಿಸಿದ್ದ ಸತ್ಯಾಗ್ರಹಿಗಳು ಈ ಕೋಟೆಯನ್ನು ಅಡಗುತಾಣ ಮಾಡಿಕೊಳ್ಳಲು ಮುಖ್ಯ ಕಾರಣ ಬೆಟ್ಟದಲ್ಲಿ ಯಥೇಚ್ಛವಾಗಿ ದೊರೆಯುತ್ತಿದ್ದ ಜೇನು ತುಪ್ಪಕ್ಕಾಗಿ. ಬೆಟ್ಟಹಾಗೂ ಬೆಟ್ಟಕ್ಕೆ ಹೊಂದಿಕೊಂಡಂತಿದ್ದ ಕೋಟೆಯಲ್ಲಿ ಯಥೇಚ್ಛವಾಗಿ ಜೇನು ಗೂಡು ಕಟ್ಟಿತ್ತು.
ಹೀಗಾಗಿ ಜೇನು ತುಪ್ಪ ಹೆಚ್ಚಾಗಿ ಸಿಗುತ್ತಿದ್ದರಿಂದ ಹಸಿವನ್ನು ನೀಗಿಸಿಕೊಳ್ಳಲು ಸಾಧ್ಯವಾಗಿತ್ತು. ಅಲ್ಲದೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ರೂಪಿಸಿದ್ದ ಸತ್ಯಾಗ್ರಹಿಗಳು ಟೆಲಿಗ್ರಾಫ್ ವೈರ್ಗಳನ್ನು ಕಡಿದು ಹಾಕಿ ಈ ಕೋಟೆಯಲ್ಲಿ ತಂದು ಹಾಕುತ್ತಿದ್ದರಂತೆ.
10 ವರ್ಷಗಳ ಹಿಂದೆಯಷ್ಟೇ ಎನ್.ವಿ.ಕೃಷ್ಣಮಾಚಾರಿ ಎಂಬ 96 ವರ್ಷದವರು ಸ್ವಾತಂತ್ರ್ಯ ದಿವಸದಂದು ಮಧುಗಿರಿಗೆ ಬಂದು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದರಂತೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇವರು ಕೂಡ ಭಾಗಿಯಾಗಿದ್ದರಂತೆ. ಆಗ ಟೆಲಿಗ್ರಾಫ್ ವೈರ್ಗಳನ್ನು ಕಡಿದು ಈ ಕೋಟೆ ಬಂಡೆ ಸಂದುಗಳಲ್ಲಿ ಹಾಕುತ್ತಿದ್ದನ್ನು ಸ್ಮರಿಸಿಕೊಂಡಿದ್ದರು.
2012ರ ಆಗಸ್ಟ್ 15 ರಂದು ಮಧುಗಿರಿಗೆ ಬಂದು ವಂದೇ ಮಾತರಂ ಘೋಷಣೆಯೊಂದಿಗೆ ಕೋಟೆಯಲ್ಲಿ ಬಾವುಟ ಹಾರಿಸಿದ್ದರಂತೆ. ಅಂದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಎನ್.ಆರ್.ಮ್ಯಾಥಾರ್ಡ್(90) ಹಾಗೂ ವಿ.ಎಸ್. ಹಳ್ಳಿ ಕೇರಿ(88) ಅವರು ಆಗಮಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಡಗುತಾಣವಾಗಿದ್ದ ಮಧುಗಿರಿ ಕೋಟೆ ಬಗ್ಗೆ ಮೆಲುಕು ಹಾಕಿದ್ದಾರೆ.
ತಲುಪುವುದು ಹೇಗೆ?
ಬೆಂಗಳೂರಿನಿಂದ 110 ಕಿ.ಮೀ. ದೂರದಲ್ಲಿದೆ ಮಧುಗಿರಿ. ಬೆಂಗಳೂರು, ತುಮಕೂರಿನಿಂದ ನೇರ ಬಸ್ ಸೌಕರ್ಯವಿದೆ. ಮಧುಗಿರಿ ಬಸ್ ನಿಲ್ದಾಣದಿಂದ ಕೇವಲ 1 ಕಿ.ಮೀ. ದೂರದಲ್ಲಿ ಈ ಕೋಟೆಯಿದೆ.
- ಉಗಮ ಶ್ರೀನಿವಾಸ್