India@75: ಸ್ವಾತಂತ್ರ್ಯ ಯೋಧರ ನೇಣಿಗೇರಿಸಿದ ಭೀಕರ ರಣಕಟ್ಟೆ
* ಗಲ್ಲಿಗೇರಿಸಿದ್ದ ದೇಹಗಳನ್ನು ಕೆಳಗಿಳಿಸಲು ಬಿಡದೆ ಕಾಗೆ, ಹದ್ದುಗಳಿಗೆ ತಿನ್ನಲು ಬಿಟ್ಟಿದ್ದ ಬ್ರಿಟಿಷರು
* ಸ್ವಾತಂತ್ರ್ಯ ಹೋರಾಟದ ರಕ್ತಸಿಕ್ತ ಇತಿಹಾಸಕ್ಕೆ, ಬ್ರಿಟಿಷರ ಕ್ರೌರ್ಯಕ್ಕೆ ಸಾಕ್ಷಿಯಾದ ಜಾಗವಿದು
* ಬ್ರಿಟಿಷರ ಅಮಾನವೀಯ ಕ್ರೌರ್ಯವನ್ನು ಸಾರಿದ ಕಟ್ಟೆ
ಸಂದೀಪ್ ವಾಗ್ಲೆ
ಮಂಗಳೂರು(ಜೂ.21): ಮಂಗಳೂರು ನಗರ ವ್ಯಾಪ್ತಿಯಲ್ಲೇ ಬರುವ ಬಿಕರ್ಣಕಟ್ಟೆಯ ಹೆಸರಿನ ಹಿಂದಿನ ತ್ಯಾಗ- ಬಲಿದಾನದ ಮಹತ್ವ ಹೆಚ್ಚಿನವರಿಗೆ ತಿಳಿದಿಲ್ಲ. ಸುಮಾರು ಎರಡು ಶತಮಾನದ ಹಿಂದೆ ಇದು ‘ಭೀಕರ ರಣಕಟ್ಟೆ’ಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಸ್ವಾತಂತ್ರ್ಯ ಹೋರಾಟದ ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಗಿದ್ದ ಕಟ್ಟೆ. ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿ, ಅವರ ಮೃತದೇಹಗಳನ್ನು ಕಾಗೆ- ಹದ್ದುಗಳಿಗೆ ತಿನ್ನಲುಬಿಟ್ಟ ಬ್ರಿಟಿಷರ ಅಮಾನವೀಯ ಕ್ರೌರ್ಯವನ್ನು ಸಾರಿದ ಕಟ್ಟೆ. ಜಿಲ್ಲೆಯ ರೈತ ಹೋರಾಟದ ಅಚ್ಚಳಿಯದ ಹೆಜ್ಜೆಗುರುತುಗಳು ಇದರ ಹಿಂದೆ ಅಡಗಿವೆ.
ಇನ್ನೂರು ವರ್ಷಗಳ ಹಿಂದೆ ಖಾಲಿ ಗುಡ್ಡೆಯಾಗಿದ್ದ ಬಿಕರ್ಣಕಟ್ಟೆಈಗ ಫ್ಲೈಓವರ್, ರಾಷ್ಟ್ರೀಯ ಹೆದ್ದಾರಿಗಳೆಡೆಯಲ್ಲಿ ಕಳೆದುಹೋಗಿದೆ. ಆದರೆ ಹೆದ್ದಾರಿ ಪಕ್ಕದಲ್ಲಿ ಅಶ್ವತ್ಥ ಮರವನ್ನು ಹೊಂದಿರುವ ಕಟ್ಟೆಯೊಂದಿದ್ದು ಅದನ್ನೇ ಭೀಕರ ರಣಕಟ್ಟೆಎಂದು ಕರೆಯಲಾಗುತ್ತಿದೆ. ಅದರ ಮೇಲೆ ಸ್ಥಳನಾಮ ಕೆತ್ತಿದ ಕಲ್ಲೂ ಇದೆ. ಈ ಕಟ್ಟೆಯ ಮೇಲೆ ಕೂರುವಂತಿಲ್ಲ. ಅದರ ಮೇಲಿನ ಅಶ್ವತ್ಥ ಮರವನ್ನು ಹತ್ತುವಂತಿಲ್ಲ, ಕಟ್ಟೆಯ ಮೇಲೆ ದೇವರ ಫೋಟೊಗಳನ್ನು ಇರಿಸುವಂತಿಲ್ಲ ಇತ್ಯಾದಿ ವಾಡಿಕೆಗಳು ನಡೆದುಕೊಂಡು ಬಂದಿವೆ.
India@75: ಸ್ವಾತಂತ್ರ್ಯಕ್ಕೆ 75 ವರ್ಷದ ನಿಮಿತ್ತ 75 ಕೇಂದ್ರ ಸಚಿವರ ಯೋಗ
1799ರಲ್ಲಿ ಬ್ರಿಟಿಷರ ಜತೆಗಿನ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಮೃತಪಡುತ್ತಾನೆ. ಮೈಸೂರು ವಶಕ್ಕೆ ಸಿಕ್ಕಿದ ಬಳಿಕ ಬ್ರಿಟಿಷರು ಉಪ್ಪು, ಹೊಗೆಸೊಪ್ಪಿಗೂ ಸುಂಕ ಹೇರಿದರು. ಉಳುಮೆಯ ಗೇಣಿಯನ್ನು ಹಣದ ರೂಪದಲ್ಲಿ ನೀಡಬೇಕು ಎಂಬ ಕಟ್ಟಾಜ್ಞೆ ಹೊರಡಿಸಿದರು. ಇದನ್ನು ವಿರೋಧಿಸಿ 1837ರಲ್ಲಿ ಕೆದಂಬಾಡಿ ರಾಮಯ್ಯ ಗೌಡ ಮತ್ತು ನಂಜಯ್ಯ ನೇತೃತ್ವದಲ್ಲಿ ‘ಅಮರ ಸುಳ್ಯ ರೈತ ದಂಗೆ’ ನಡೆದೇಬಿಟ್ಟಿತು. ಪುಟ್ಟಬಸಪ್ಪ ಎಂಬಾತನಿಗೆ ರಾಜಪೋಷಾಕು ಹಾಕಿ ಕಲ್ಯಾಣಸ್ವಾಮಿ ಎಂಬ ಹೆಸರಿಟ್ಟು ಬ್ರಿಟಿಷರ ವಿರುದ್ಧ ದಂಡೆತ್ತಿ ಹೋದರು. ಸುಳ್ಯದಿಂದ ಹೊರಟ ಈ ರೈತರ ಸೈನ್ಯ ಜನರನ್ನು ಸೇರಿಸುತ್ತ, ಬ್ರಿಟಿಷರನ್ನು ಸೋಲಿಸುತ್ತ 1837ರ ಏ.5ರಂದು ಮಂಗಳೂರು ತಲುಪಿತು. ಕಲ್ಯಾಣಸ್ವಾಮಿಗೆ ಪಟ್ಟಾಭಿಷೇಕವೂ ಆಯಿತು. ಎರಡು ವರ್ಷ ಗೇಣಿ, ಸುಂಕ ರದ್ದುಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು.
ಅವಮಾನಕ್ಕೀಡಾದ ಬ್ರಿಟಿಷರು ಎರಡೇ ವಾರದೊಳಗೆ ಭಾರೀ ಸೈನ್ಯ, ಅಸ್ತ್ರಗಳೊಂದಿಗೆ ಆಗಮಿಸಿ ಯುದ್ಧ ಸಾರಿದರು. ಈ ಭೀಕರ ಯುದ್ಧದಲ್ಲಿ ಕೆದಂಬಾಡಿ ರಾಮಪ್ಪ, ಹುಲಿಕುಂದ ನಂಜಯ್ಯ ಹುತಾತ್ಮರಾದರು. ನಂದಾವರ ಬಂಗರಸುವನ್ನು 1837ರ ಮೇ 27ರಂದು, ಕಲ್ಯಾಣ ಸ್ವಾಮಿ ಮತ್ತು ಉಪ್ಪಿನಂಗಡಿಯ ಮಂಜಪ್ಪರನ್ನು ಜೂ.19ರಂದು ಹಾಗೂ ಗುಡ್ಡೆಮನೆ ಅಪ್ಪಯ್ಯರನ್ನು ಅ.31ರಂದು ಬಿಕರ್ಣಕಟ್ಟೆಯಲ್ಲಿ ಗಲ್ಲಿಗೇರಿಸಲಾಯಿತು. ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ಜನ ಮುಂದಾಗಬಾರದು ಎಂದು ಭಯ ಹುಟ್ಟಿಸುವ ಉದ್ದೇಶದಿಂದ ಗಲ್ಲಿಗೇರಿಸಿದ ದೇಹಗಳನ್ನು ಕೆಳಗಿಳಿಸಲೂ ಬಿಡದೆ ಕಾಗೆ ಹದ್ದುಗಳು ತಿನ್ನುವಂತೆ ನೋಡಿಕೊಳ್ಳಲಾಯಿತು. ಬ್ರಿಟಿಷರ ಈ ಕ್ರೌರ್ಯಕ್ಕೆ ಸಾಕ್ಷಿಯಾದ ಕಟ್ಟೆಮುಂದೆ ‘ಭೀಕರ ರಣಕಟ್ಟೆ’ಯಾಗಿ ಈಗಲೂ ಇದೆ.
ತಲುಪುವುದು ಹೇಗೆ?
ಮಂಗಳೂರು ನಗರದ ಮಧ್ಯಭಾಗದಿಂದ 3 ಕಿ.ಮೀ. ದೂರದಲ್ಲಿ, ನಂತೂರಿನಿಂದ ಒಂದೇ ಕಿ.ಮೀ. ಅಂತರದೊಳಗೆ ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಬಿಕರ್ಣಕಟ್ಟೆಸಿಗುತ್ತದೆ. ಈ ಮಾರ್ಗವಾಗಿ ಸಾಗುವ ಸಾಕಷ್ಟುಸಿಟಿ ಬಸ್ಸುಗಳಿವೆ.