ದೇಶಭಕ್ತಿ ಹವಾ: ಇಂದು ಮನೆ ಮನೆಯಲ್ಲಿ ತಿರಂಗಾ ಹಾರಾ​ಟ. ಶಾಲಾ- ಕಾಲೇಜು, ಸರ್ಕಾರಿ ಕಚೇರಿಗಳು, ವಾಣಿಜ್ಯ-ಕೈಗಾರಿಕಾ ಕಟ್ಟಡಗಳು, ಕೋಟೆ ಕೊತ್ತಲಗಳು, ಐತಿಹಾಸಿಕ ಸ್ಥಳಗಳಲ್ಲೂ ಮೆರೆ​ಯ​ಲಿದೆ ರಾಷ್ಟ್ರ​ಧ್ವ​ಜ 

ಶಿವಮೊಗ್ಗ (ಆ.13): ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಶಾಲಾ- ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಕಟ್ಟಡಗಳಲ್ಲಿ, ಗ್ರಾಮ ಪಂಚಾ​ಯಿತಿ ಮಟ್ಟದಲ್ಲಿ, ಕೋಟೆ ಕೊತ್ತಲಗಳಲ್ಲಿ, ಐತಿಹಾಸಿಕ ಸ್ಥಳಗಳಲ್ಲಿ ಸೇರಿದಂತೆ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಾಡಲಿವೆ. ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡಬೇಕು ಎಂಬ ಪ್ರಧಾನಮಂತ್ರಿ ಮೋದಿ ಆಶಯದಂತೆ ಜಿಲ್ಲೆಯಲ್ಲೂ ‘ಹರ್‌ ಘರ್‌ ತಿರಂಗಾ’ ಧ್ವಜ ಶನಿವಾರದಿಂದ ಹಾರಾಡಲಿವೆ. ಇದಕ್ಕಾಗಿ ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ಸರ್ಕಾರದ ಜೊತೆ ಕೈ ಜೋಡಿಸಿವೆ. ಜನರು ಸ್ವಯಂಪ್ರೇರಿತರಾಗಿ ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ಹರ್ ಘರ್ ತಿರಂಗಾ: 7 ತಿಂಗಳು ಮೊದಲೇ ಐಡಿಯಾ ಕೊಟ್ಟಿದ್ದು ಹುಬ್ಬಳ್ಳಿಯ ದೀಪಕ್..!

ಬಿಜೆಪಿಯಿಂದ 4.5 ಲಕ್ಷ ಮನೆಗಳಿಗೆ ಧ್ವಜ: ಆ.13ರ ಬೆಳಗ್ಗೆಯಿಂದ ಆ.5ರ ಸಂಜೆವರೆಗೆ ನಿರಂತರವಾಗಿ ರಾಷ್ಟ್ರಧ್ವಜ ಹಾರಾಡುತ್ತದೆ. ಜಿಲ್ಲೆಯಲ್ಲಿ ಸುಮಾರು 4.5 ಲಕ್ಷ ಮನೆಗಳಿಗೆ ಬಿಜೆಪಿಯಿಂದ ಧ್ವಜ ನೀಡಲಾಗಿದೆ. ಧ್ವಜವನ್ನು ಹೇಗೆ ಹಾರಿಸಬೇಕೆಂಬ ನಿಯಮಗಳನ್ನು ಕೂಡ ಕಾರ್ಯಕರ್ತರ ಮೂಲಕ ತಿಳಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌ ತಿಳಿಸಿದ್ದಾರೆ. ಸಾಗರದಲ್ಲಿ 75 ಸಾವಿರ ರಾಷ್ಟ್ರಧ್ವಜಗಳನ್ನು ನೀಡಲಾಗುತ್ತದೆ. ಅದಲ್ಲದೇ, ಜಿಲ್ಲೆಯ ಭದ್ರಾವತಿ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಗ್ರಾಪಂ ಮಟ್ಟದಲ್ಲಿ, ಮಂಡಲಗಳಲ್ಲಿ, ಕೋಟೆ, ಕೊತ್ತಲಗಳಲ್ಲಿ, ಐತಿಹಾಸಿಕ ಸ್ಥಳಗಳಲ್ಲಿ ಅಲ್ಲಿನ ಮಾಹಿತಿಯೊಂದಿಗೆ ರಾಷ್ಟ್ರಧ್ವಜವನ್ನು ಹಾರಿಸಲಾಗುವುದು. ಹಾಗೆಯೇ ಈಸೂರಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಬಿಜೆಪಿ ಕಾರ್ಯಾಲಯದಲ್ಲೂ ವಿಶೇಷವಾಗಿ ಸ್ವಾತಂತ್ರ್ಯೋತ್ಸವ ನಡೆಯಲಿದೆ.

ಪಾಲಿಕೆ ವ್ಯಾಪ್ತಿಯಲ್ಲಿ 50 ಸಾವಿರ ಧ್ವಜ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೊದಲು 46 ಸಾವಿರ ಧ್ವಜವನ್ನು ತಯಾರಿಸಲಾಗಿತ್ತು. ಸರ್ಕಾರಿ ಕಚೇರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಕಚೇರಿಗಳಿಂದಲೂ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 5 ಸಾವಿರ ಧ್ವಜಗಳನ್ನು ವಿತರಿಸಲಾಗುತ್ತಿದೆ. ಈಗಾಗಲೇ ಬಹುತೇಕ ಕಡೆ ಧ್ವಜ ವಿತರಿಸಲಾಗಿದ್ದು, ಕೆಲವು ಬಡಾವಣೆಗಳ ನಿವಾಸಿಗಳಿಗೆ ಶನಿವಾರ ರಾತ್ರಿಯವರೆಗೂ ಧ್ವಜ ಹಂಚುವ ಕಾರ್ಯ ನಡೆಯಲಿದೆ.

ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!

ನಗರದ ಪಾಲಿಕೆ ವ್ಯಾಪ್ತಿಯ ಎಲ್ಲ 35 ವಾರ್ಡ್‌ಗಳಲ್ಲೂ ಆಯಾ ವಾರ್ಡ್‌ನ ಎಂಜಿನಿಯರ್‌, ಆರ್‌ಐಗಳು, ಪೌರಕಾರ್ಮಿಕ ಸಿಬ್ಬಂದಿ ಮನೆ, ಮನೆಗೆ ತೆರಳಿ ಧ್ವಜ ವಿತರಣೆ ಮಾಡುತ್ತಿದ್ದಾರೆ. ಆಯಾ ವಾರ್ಡ್‌ ಸದಸ್ಯರು ಇದರ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ಪ್ರತಿ ಮನೆಯಲ್ಲೂ ಧ್ವಜ ಹಾರಾಡಬೇಕು ಎಂಬುದು ನಮ್ಮ ಉದ್ದೇಶ ಎಂದು ಪಾಲಿಕೆ ಮೇಯರ್‌ ಸುನೀತ ಅಣ್ಣಪ್ಪ ತಿಳಿಸಿದ್ದಾರೆ. ಪ್ರತಿ ತಾಲೂಕು ಮತ್ತು ಗ್ರಾಪಂ ಮಟ್ಟದಲ್ಲಿ ಧ್ವಜ ತಯಾರಿಕೆ ನಡೆದಿದ್ದು, ಸ್ಥಳೀಯವಾಗಿ ವಿತರಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಅದರ ವ್ಯಾಪ್ತಿಯಲ್ಲಿ ಧ್ವಜ ಹಂಚಿಕೆ ನಡೆಸಿವೆ. ಧ್ವಜದ ಜೊತೆಗೆ ಅದರ ನಿಯಮ ಕೂಡ ತಿಳಿಸುವ ಕರಪತ್ರ ಇರಿಸಲಾಗಿದೆ.

ಈಸೂರಿನಲ್ಲಿ: ಸ್ವಾತಂತ್ರ್ಯೋತ್ಸವಕ್ಕೆ 75 ವರ್ಷ ತುಂಬಿರುವ ಸಂಭ್ರಮದ ಹಿನ್ನೆಲೆ ಆಚರಿಸಲಾಗುತ್ತಿರುವ ಈ ಕಾರ್ಯಕ್ರಮ ಅಂಗವಾಗಿ ದೇಶದಲ್ಲಿ 400 ಪ್ರಮುಖ ಸ್ವಾತಂತ್ರ್ಯ ಹೋರಾಟದ ಮಹತ್ವದ ಸ್ಥಳಗಳನ್ನು ಗುರುತಿಸಲಾಗಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮವೂ ಸೇರಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಸಂಸದ ಬಿ. ವೈ. ರಾಘವೇಂದ್ರ ಭಾನುವಾರ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಜೆಸಿಐನಿಂದ ಸಾವಿರ ಅಡಿ ತ್ರಿವರ್ಣ ಧ್ವಜ:

ಜೆಸಿಐ ಶಿವಮೊಗ್ಗ ಮಲ್ನಾಡ್‌ ವತಿಯಿಂದ 75 ವರ್ಷಗಳ ಸ್ವತಂತ್ರ ಭಾರತ ಸಂಭ್ರಮಾಚರಣೆ ಅಂಗವಾಗಿ ಒಂದು ಸಾವಿರ ಅಡಿ ತ್ರಿವರ್ಣ ಧ್ವಜದ ಜಾಥಾ ಆಯೋಜಿಸಲಾಗಿದೆ. ಆ.15ರ ಬೆಳಗ್ಗೆ 10 ಗಂಟೆಗೆ ಸಿಮ್ಸ್‌ ಕಾಲೇಜು ಆವರಣದಿಂದ ಜಾಥಾ ಆರಂಭವಾಗಲಿದೆ. ವಿವಿಧ ಶಾಲೆಗಳ 800ಕ್ಕೂ ಹೆಚ್ಚು ಮಕ್ಕಳು ಸೌಟ್ಸ್‌ ಅಂಡ್‌ ಗೈಡ್‌್ಸ ಹಾಗೂ ರೋಡ್‌ ಡ್ರಿಲ್‌ ಬೈಕ್‌ ಸಮೂಹ ಭಾಗಿಯಾಗುವರು. ವಿವಿಧ ಸಂಘ ಸಂಸ್ಥೆಗಳು ಜಾಥಾಕ್ಕೆ ಸಹಕಾರ ನೀಡುತ್ತಿವೆ ಎಂದು ಕಾರ್ಯಕ್ರಮದ ಸಂಚಾಲಕ ಶ್ರೀನಾಗ್‌ ತಿಳಿಸಿದ್ದಾರೆ.