India@75: ಹುಬ್ಬಳ್ಳಿಯಲ್ಲಿ ಕಿಚ್ಚು ಹಚ್ಚಿದ್ದ ಕ್ವಿಟ್‌ ಇಂಡಿಯಾ

ಹುಬ್ಬಳ್ಳಿಯಲ್ಲಿ ಕಿಚ್ಚು ಹಚ್ಚಿದ್ದ ‘ಕ್ವಿಟ್‌ ಇಂಡಿಯಾ’ ಚಳವಳಿಯಲ್ಲಿ ಬ್ರಿಟಿಷರು 14ರ ಬಾಲಕ ನಾರಾಯಣ ಡೋಣಿಯನ್ನು ದುರ್ಗದ ಬೈಲಿನ ನಟ್ಟನಡುವೆ ಗುಂಡಿಕ್ಕಿದ್ದರು. ಆತನ ಪುತ್ಥಳಿ ಇಲ್ಲಿಯೇ ಈಗ ವಿರಾಜಮಾನವಾಗಿದೆ.

Forgotten Tales of the Freedom Struggle in Hubballi hls

ಹುಬ್ಬಳ್ಳಿಯಲ್ಲಿ ಕಿಚ್ಚು ಹಚ್ಚಿದ್ದ ‘ಕ್ವಿಟ್‌ ಇಂಡಿಯಾ’ ಚಳವಳಿಯಲ್ಲಿ ಬ್ರಿಟಿಷರು 14ರ ಬಾಲಕ ನಾರಾಯಣ ಡೋಣಿಯನ್ನು ದುರ್ಗದ ಬೈಲಿನ ನಟ್ಟನಡುವೆ ಗುಂಡಿಕ್ಕಿದ್ದರು. ಆತನ ಪುತ್ಥಳಿ ಇಲ್ಲಿಯೇ ಈಗ ವಿರಾಜಮಾನವಾಗಿದೆ.

ಗಾಂಧೀಜಿ ‘ಕ್ವಿಟ್‌ ಇಂಡಿಯಾ’ ಚಳವಳಿಗೆ ಕರೆ ಕೊಟ್ಟಮೊದಲ ದಿನದಿಂದಲೇ ಹುಬ್ಬಳ್ಳಿಯಲ್ಲಿ ಸಂಘರ್ಷ ಹೊತ್ತಿಕೊಂಡಿತ್ತು. 1942ರ ಆ.8 ರಂದು ಹೋರಾಟಗಾರರು ಹುಬ್ಬಳ್ಳಿ- ನವಲಗುಂದ ನಡುವಿನ ಟೆಲಿಗ್ರಾಂ, ದೂರವಾಣಿ ತಂತಿ, ಕಂಬವನ್ನು ಸಂಪೂರ್ಣವಾಗಿ ಕಿತ್ತೊಗೆದಿದ್ದರು. ಮುಖಂಡರು ಬಂಧಿಸಲ್ಪಟ್ಟರು. ಆ. 9ರಂದು ಇದಕ್ಕೆ ಪ್ರತಿಯಾಗಿ ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯ ಪರಿಣಾಮ ಮಾತ್ರ ಘೋರ.

ದುರ್ಗದ ಬೈಲಿನಲ್ಲಿದ್ದ ಪ್ರತಿಭಟನೆಗೆ ಬಾಲಕ ನಾರಾಯಣ ಡೋಣಿ ತೆರಳಿದ್ದ. ಧ್ವಜ ಹಿಡಿದು ಓಡಾಡುತ್ತಿದ್ದ ಚೂಟಿ ಹುಡುಗನ ಕಂಡ ಮುಖಂಡರು ಮುಂಚೂಣಿಗೆ ಕರೆತಂದಿದ್ದರು. ಮೊದಲಿಗೆ ಬ್ರಿಟಿಷರ ಲಾಠಿ ಏಟು ಹೋರಾಟಗಾರರ ಸ್ವಾಗತಿಸಿತ್ತು. ಈ ನಡುವೆ ತೂರಿ ಬಂದ ಕಾಡತೂಸು ನಾರಾಯಣನಿಗೆ ತಗುಲಿತ್ತು. ಗುಂಡೇಟಿಗೆ ಗಂಭೀರ ಗಾಯಗೊಂಡಿದ್ದ ವೀರ ಬಾಲಕ ರಾತ್ರಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಮಡಿದಿದ್ದ.

India@75:ವಿಜಯಪುರದ ಕೋಟ್ನಾಳದಲ್ಲಿ ಕಟ್ಟಲಾಗಿತ್ತು ಬ್ರಿಟಿಷರ ವಿರುದ್ಧ ಸೈನ್ಯ

ಧಗಧಗಿಸಿತ್ತು ದಕ್ಷಿಣ ಮರಾಠಾ ರೈಲ್ವೆ:

ಅಂದು ನಾರಾಯಣನ ಸಾವು ಹೋರಾಟದ ಬೆಂಕಿಗೆ ತುಪ್ಪ ಸುರಿದಿತ್ತು. ದಕ್ಷಿಣ ಮರಾಠಾ ರೈಲ್ವೆ (ಈಗಿನ ನೈಋುತ್ಯ ರೈಲ್ವೆ) ಧಗಧಗಿಸಿತು. ಸೆ.18ರ ತಡರಾತ್ರಿ ಹೋರಾಟಗಾರರು ಸೇರಿ ಹುಬ್ಬಳ್ಳಿ ಬಳಿಯ ಅಳ್ನಾವರ, ದೇಸೂರು ಬಳಿ ರೈಲ್ವೆ ಹಳಿ ಕಿತ್ತೆಸೆದಿದ್ದರು. ಅಮರಗೋಳ, ಹೆಬಸೂರು, ಕುಸುಗಲ, ಬ್ಯಾಡಗಿಯಲ್ಲೂ ಹಳಿ ತಪ್ಪಿಸಲಾಗಿತ್ತು. ಹತ್ತು ದಿನಗಳ ಕಾಲ ರಾತ್ರಿ ಹುಬ್ಬಳ್ಳಿ-ಪುಣೆ ರೈಲು ರದ್ದಾಗಿತ್ತು. ಮೂರು ವಾರ ಹುಬ್ಬಳ್ಳಿ-ಹರಿಹರ-ಬೆಂಗಳೂರು-ಗುಂತಕಲ್‌ ರೈಲು ಸಂಚಾರ ನಿಂತಿತ್ತು. ಹೋರಾಟ ತಡೆಗೆ ಪೊಲೀಸರು ರೈಲ್ವೆ ನಿಲ್ದಾಣ ಮತ್ತು ಹಳಿಗಳ ಗುಂಟ ಶಸ್ತ್ರ ಸಜ್ಜಿತರಾಗಿ ನಿಂತಿದ್ದರು.

ಅಷ್ಟಾದರೂ ಸೆ. 15ರ ರಾತ್ರಿ ಕುಸುಗಲ, ಹೆಬಸೂರು, ಅಮರಗೋಳ ರೈಲ್ವೆ ನಿಲ್ದಾಣವನ್ನು ಸುಡಲಾಗಿತ್ತು. ರೈಲ್ವೆ ವರ್ಕ್ಶಾಪ್‌ನ 2500 ಕಾರ್ಮಿಕರು ಒಂದು ದಿನದ ಹರತಾಳ ನಡೆಸಿದ್ದರು. 1943ರ ಜ. 28ರಿಂದ ಜ. 30ರೊಳಗೆ ಶಿರೂರು, ಬ್ಯಾಹಟ್ಟಿಯ ಗ್ರಾಮ ಚಾವಡಿ ಸುಡಲಾಗಿತ್ತು. ಇದರಿಂದ ಕಂಗೆಟ್ಟಕಲೆಕ್ಟರ್‌ ಬೆಳಗಾವಿಯಿಂದ ಬೆಟಾಲಿಯನ್‌ನ ಒಂದು ಭಾಗವನ್ನು ಹುಬ್ಬಳ್ಳಿಗೆ ಕರೆಸಿದ್ದರು.

India@75:ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿಯ ತಾಣ ಮೈಸೂರಿನ ಸುಬ್ಬರಾಯನ ಕೆರೆ

ತಲುಪುವುದು ಹೇಗೆ?

ಚೆನ್ನಮ್ಮ ವೃತ್ತದಿಂದ 1.5 ಕಿ.ಮೀ. ಅಂತರದಲ್ಲಿರುವ ದುರ್ಗದ ಬಯಲಿನ ರಸ್ತೆಯ ಶಹರ ಪೊಲೀಸ್‌ ಠಾಣೆ ಪಕ್ಕದಲ್ಲಿ ನಾರಾಯಣ ಡೋಣಿ ಪುತ್ಥಳಿಯಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಾಯಿ ಗಂಗಮ್ಮ ಡೋಣಿ ಸಾವಿನ ಘಟನೆಯನ್ನು ಕಣ್ಣಾರೆ ಕಂಡಿದ್ದರು. 50ನೇ ಗಣರಾಜ್ಯೋತ್ಸವದ ವೇಳೆ ಅವರ ದೇಣಿಗೆಯಿಂದಲೇ ಇಲ್ಲಿ ಸಿಮೆಂಟ್‌ ಪುತ್ಥಳಿ ಸ್ಥಾಪಿಸಲಾಗಿತ್ತು. ಪ್ರಸ್ತುತ ಇಲ್ಲಿ ನಾರಾಯಣನ ಕಂಚಿನ ಪುತ್ಥಳಿ ಇದೆ.

- ಮಯೂರ ಹೆಗಡೆ

Latest Videos
Follow Us:
Download App:
  • android
  • ios