Asianet Suvarna News Asianet Suvarna News

India@75: ಹೋರಾಟಕ್ಕೆ ಶಕ್ತಿ ತುಂಬಿದ ಬೆಳಗಾವಿ ಗಣೇಶೋತ್ಸವ , ತಿಲಕರಿಂದ ಪ್ರಾರಂಭ

ಸ್ವಾತಂತ್ರ್ಯ ಆಂದೋಲನದ ಮುಂಚೂಣಿಯಲ್ಲಿದ್ದ ಲೋಕಮಾನ್ಯ ಬಾಲಗಂಗಾಧರ ತಿಲಕರ ಚಲನವಲನಗಳ ಮೇಲೆ ಬ್ರಿಟಿಷರ ಹದ್ದಿನ ಕಣ್ಣಿತ್ತು. ಅವರು ಒಂದು ಸಭೆ ಕರೆದರೂ ಬ್ರಿಟಿಷರು ಗೂಢಚಾರಿಕೆ ನಡೆಸುತ್ತಿದ್ದರು. 

Azadi ki Amrith Mahothsav Tilak commenced Ganesh festival celebrations in Belagavi hls
Author
Bengaluru, First Published Jun 24, 2022, 1:07 PM IST

ಸ್ವಾತಂತ್ರ್ಯ ಆಂದೋಲನದ ಮುಂಚೂಣಿಯಲ್ಲಿದ್ದ ಲೋಕಮಾನ್ಯ ಬಾಲಗಂಗಾಧರ ತಿಲಕರ ಚಲನವಲನಗಳ ಮೇಲೆ ಬ್ರಿಟಿಷರ ಹದ್ದಿನ ಕಣ್ಣಿತ್ತು. ಅವರು ಒಂದು ಸಭೆ ಕರೆದರೂ ಬ್ರಿಟಿಷರು ಗೂಢಚಾರಿಕೆ ನಡೆಸುತ್ತಿದ್ದರು. ಇದರಿಂದ ತಿಲಕರಿಗೆ ದೊಡ್ಡ ಸವಾಲು ಎದುರಾಯಿತು.

ಸ್ವಾತಂತ್ರ್ಯ ಆಂದೋಲನದಲ್ಲಿ ಯುವಕರನ್ನು ತೊಡಗಿಸುವ ವಿಚಾರ ಮತ್ತು ಸ್ವಾತಂತ್ರ್ಯದ ಅವಶ್ಯಕತೆಯ ವಿಚಾರಗಳನ್ನು ಯುವಕರಲ್ಲಿ ತುಂಬಲು ತಿಲಕರಿಗೆ ಒಂದು ವೇದಿಕೆ ಬೇಕಾಗಿತ್ತು. ಆಗ ಅವರ ತಲೆಯಲ್ಲಿ ಹೊಳೆದಿದ್ದೇ ಸಾರ್ವಜನಿಕ ಗಣಪತಿ ಉತ್ಸವ.

ಮೊದಲು ಮನೆಮನೆಗಳಲ್ಲಷ್ಟೇ ಗಣಪತಿ ಕೂಡಿಸುವ, ಹಬ್ಬ ಆಚರಿಸುವ ಸಂಪ್ರದಾಯ ಇತ್ತು. ತಿಲಕರ ವಿಚಾರ ಮತ್ತು ಪ್ರೋತ್ಸಾಹಕ ಮಾತುಗಳಿಂದಾಗಿ ಮುಂಬೈ ಪ್ರಾಂತ್ಯದ ಅನೇಕ ಕಡೆಗಳಲ್ಲಿ ಸಾರ್ವಜನಿಕ ಗಣಪತಿ ಉತ್ಸವಗಳು ಆರಂಭವಾದವು. ಅದೇ ಕಾಲಕ್ಕೆ ಮುಂಬೈ ಪ್ರಾಂತದ ಭಾಗವಾಗಿದ್ದ ಬೆಳಗಾವಿಯಲ್ಲೂ 1905ರಲ್ಲಿ ಮೊಟ್ಟಮೊದಲು ಸದ್ಯದ ಮಾರ್ಕೆಟ್‌ನಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಗಣಪತಿ ಉತ್ಸವ ಆರಂಭಿಸಲಾಯಿತು.

India@75:ಬ್ರಿಟಿಷ್ ಸಾಮ್ರಾಜ್ಯವನ್ನು ನಡುಗಿಸಿತ್ತು ನೌಕಾಪಡೆ ಸೈನಿಕರ ದಂಗೆ

ಸ್ವತಃ ತಿಲಕರೇ ಬೆಳಗಾವಿಗೆ ಬಂದು ಉತ್ಸವದ ಶುಭಾರಂಭ ಮಾಡಿದಾಗ ಕರ್ನಾಟಕದ ಸಿಂಹ ಗಂಗಾಧರರಾವ್‌ ದೇಶಪಾಂಡೆ ಹಾಗೂ ಗೋವಿಂದರಾವ್‌ ಯಾಳಗಿ ಅವರು ಈ ಭಾಗದ ಸ್ವಾತಂತ್ರ್ಯ ಆಂದೋಲನದ ರೂವಾರಿಯಾಗಿದ್ದರು. ಮೊದಲು ಯಾಳಗಿಯವರ ನಿವಾಸದಲ್ಲೇ ಸಾರ್ವಜನಿಕ ಗಣಪತಿ ಕೂಡಿಸಲಾಗುತ್ತಿತ್ತು. ಗಣಪತಿ ಉತ್ಸವವನ್ನು ಸ್ವಾತಂತ್ರ್ಯೋತ್ಸವ ವೇದಿಕೆಯನ್ನಾಗಿ ಮಾಡಿಕೊಂಡಿದ್ದರು. ಸಾರ್ವಜನಿಕ ಗಣೇಶೋತ್ಸವ ಇಲ್ಲಿನ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿತು.

1905ರಲ್ಲಿ ಮಾರ್ಕೆಟ್‌ ಪ್ರದೇಶದಲ್ಲಿ ಮೊದಲ ಸಾರ್ವಜನಿಕ ಗಣಪತಿ ಕೂಡಿಸಿದ ಸಂದರ್ಭದಲ್ಲಿ ಬ್ರಿಟಿಷ್‌ ಅಧಿಕಾರಿಗಳು ಹಾಜರಿದ್ದು ತಿಲಕರನ್ನು ಗಮನಿಸುತ್ತಿದ್ದರು. ಆದರೆ ತಿಲಕರು ಗಣಪತಿ ಕೂಡಿಸಿದ ಕೂಡಲೇ ಅಲ್ಲಿಂದ ತೆರಳಿಬಿಟ್ಟರು.

ಈಗ 11 ದಿನದ ಹಬ್ಬ:

ಅಂದು ಪ್ರಾರಂಭವಾದ ಗಣೇಶ ಹಬ್ಬ ಇಂದು 117 ವಸಂತಗಳನ್ನು ಪೂರೈಸಿದೆ. ಇಂದಿಗೂ ನಗರದ ಪ್ರಮುಖ ಸಾರ್ವಜನಿಕ ಹಬ್ಬವಾಗಿದ್ದು 11 ದಿನಗಳ ಕಾಲ ನಡೆಯುತ್ತಿದೆ. ಮಹಾರಾಷ್ಟ್ರದ ಪುಣೆಯ ನಂತರ ಕರ್ನಾಟಕದ ಬೆಳಗಾವಿಯೇ ದೇಶದಲ್ಲಿ ಗಣಪತಿ ಹಬ್ಬಕ್ಕೆ ಪ್ರಸಿದ್ಧಿ ಪಡೆದಿದೆ. ಬೆಳಗಾವಿ ಸುತ್ತಮುತ್ತಲಿನ ಮಾತ್ರವಲ್ಲದೆ ರಾಜ್ಯದ ಹೊರಗಿರುವ ಸಾವಿರಾರು ಜನರು ಹಬ್ಬಕ್ಕೆಂದೇ ಬೆಳಗಾವಿಗೆ ಬರುತ್ತಾರೆ. ಇಲ್ಲಿನ ಉತ್ಸವ ಈ ಭಾಗದ ಸ್ವಾತಂತ್ರ್ಯ ಹೋರಾಟದ ಸಂಕೇತವೂ ಹೌದು.

India@75:ಸ್ವಾತಂತ್ರ್ಯ ಸೇನಾನಿಗಳ ಅಡಗುತಾಣವಾಗಿದ್ದ ಮಧುಗಿರಿ ಕೋಟೆ

ತಲುಪುವುದು ಹೇಗೆ?

ಬೆಳಗಾವಿಯ ಟಿಳಕ ವೃತ್ತದ ಗಣೇಶ ಮಂಟಪ ನಗರ ರೈಲು ನಿಲ್ದಾಣದಿಂದ ಕೇವಲ 1 ಕಿ.ಮೀ. ಮತ್ತು ಬಸ್‌ ನಿಲ್ದಾಣದಿಂದ 2 ಕಿ.ಮೀ. ದೂರವಿದ್ದು ಕಾಲ್ನಡಿಗೆ ಅಥವಾ ಆಟೋ ಮೂಲಕ ತಲುಪಬಹುದು. ಸಾಂಬ್ರಾ ವಿಮಾನ ನಿಲ್ದಾಣದಿಂದ ಈ ಸ್ಥಳ 14 ಕಿ.ಮೀ. ದೂರದಲ್ಲಿದೆ.

- ಶ್ರೀಶೈಲ ಮಠದ

Follow Us:
Download App:
  • android
  • ios