India@75: ಧಾರವಾಡದ ಜಕಣಿಬಾವಿಯಲ್ಲಿದೆ ಹುತಾತ್ಮರ ಸ್ಮಾರಕ
ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ 1920ರ ಬಳಿಕ ದೇಶಾದ್ಯಂತ ನಡೆದ ಅಸಹಕಾರ ಚಳವಳಿ ರಾಜ್ಯದಲ್ಲೂ ತೀವ್ರವಾಗಿತ್ತು. ಆದರಲ್ಲೂ ಧಾರವಾಡದಲ್ಲಿ ಈ ಹೋರಾಟದ ಕಿಚ್ಚು ಬಹಳ ಜೋರಾಗಿತ್ತು. ಅದಕ್ಕೆ ಸಾಕ್ಷಿ ಧಾರವಾಡದ ಜಕಣಿಬಾವಿಯಲ್ಲಿರುವ ಹುತಾತ್ಮರ ಸ್ಮಾರಕ.
ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ 1920ರ ಬಳಿಕ ದೇಶಾದ್ಯಂತ ನಡೆದ ಅಸಹಕಾರ ಚಳವಳಿ ರಾಜ್ಯದಲ್ಲೂ ತೀವ್ರವಾಗಿತ್ತು. ಆದರಲ್ಲೂ ಧಾರವಾಡದಲ್ಲಿ ಈ ಹೋರಾಟದ ಕಿಚ್ಚು ಬಹಳ ಜೋರಾಗಿತ್ತು. ಅದಕ್ಕೆ ಸಾಕ್ಷಿ ಧಾರವಾಡದ ಜಕಣಿಬಾವಿಯಲ್ಲಿರುವ ಹುತಾತ್ಮರ ಸ್ಮಾರಕ.
ಅಸಹಕಾರ ಚಳವಳಿ ಭಾಗವಾಗಿ 1921ರ ಜುಲೈ 1 ರಂದು ಇಲ್ಲಿ ನಡೆದ ಪ್ರತಿಭಟನೆ ವೇಳೆ ಬ್ರಿಟಿಷರು ನಡೆಸಿದ ಗೋಲಿಬಾರ್‌ನಲ್ಲಿ ಮಲ್ಲಿಕಸಾಬ ಬಿನ್ ಮರ್ದಾನ ಸಾಬ್, ಗೌಸುಸಾಬ್ ಬಿನ್ ಖಾದರ ಸಾಬ್, ಅಬ್ದುಲ್ ಗಫಾರ ಚೌಕಥಾಯಿ ಎಂಬ ಮೂವರು ಸ್ವಾತಂತ್ರ್ಯ ಯೋಧರು ಬಲಿಯಾದರು. ಈ ಘಟನೆ ನಡೆದು ಇದೀಗ ಭರ್ತಿ 101 ವರ್ಷಗಳಾಗಿವೆ.
ಏನಿದು ಗೋಲಿಬಾರ್ ಘಟನೆ?:
ಆ ದಿನದಂದು ಧಾರವಾಡದಲ್ಲಿ ಹರತಾಳ ಆಚರಿಸಿ ಪ್ರತಿಭಟನಾ ಸಭೆ ನಡೆಸಲಾಯಿತು. ಸಭೆ ಶಾಂತವಾಗಿ ನಡೆಯುತ್ತಿದ್ದರೂ ಬ್ರಿಟಿಷರು ಮಾತ್ರ ಪ್ರತಿಭಟನಾಕಾರರು ಸಾರಾಯಿ ಅಂಗಡಿ ಸುಡಲು ಯತ್ನಿಸಿದರು, ದೊಂಬಿ ಮಾಡಿದರು ಎಂದೆಲ್ಲ ಸುಳ್ಳು ಕಾರಣ ಹೇಳಿ ಗೋಲಿಬಾರ್ ಮಾಡಿ ಮೂವರನ್ನು ಬಲಿ ತೆಗೆದುಕೊಂಡರು. ಆ ಮೂವರೂ ಖಿಲಾಫತ್ ಚಳವಳಿಯ ಕಾರ್ಯಕರ್ತರಾಗಿದ್ದರು. ದುರ್ಘಟನೆಯಲ್ಲಿ 39 ಜನರಿಗೆ ಗಾಯವಾಯಿತು. ಅಂದು ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಒಬ್ಬರಾಗಿದ್ದ ಶಿವಲಿಂಗಯ್ಯ ಅಯ್ಯಪ್ಪಯ್ಯ ಲಿಂಬೆಣ್ಣದೇವರಮಠ ಅವರ ಹೊಟ್ಟೆಗೆ ಗುಂಡು ತಗಲಿ ಒಂದು ತಿಂಗಳವರೆಗೆ ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದನ್ನು ಅವರ ಮಗ ಹಿರಿಯ ನಾಗರಿಕ ಸಂಗಮೇಶ್ವರಯ್ಯ ಈಗಲೂ ಅಭಿಮಾನದಿಂದ ಸ್ಮರಿಸುತ್ತಾರೆ.
ಘಟನೆ ಕುರಿತು ಸರ್ಕಾರ ವಿಚಾರಣೆ ನಡೆಸಬೇಕೆಂಬ ಬೇಡಿಕೆ ಬಂದಾಗ ಸರ್ಕಾರ ಹಾಗೆ ಮಾಡದಿರಲು ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯೇ ಅಬ್ಬಾಸ್ ತಯಬ್ಜಿ, ಭವಾನಿ ಶಂಕರ್ ನಿಯೋಗಿ ಮತ್ತು ಎಸ್.ಎಸ್.ಸೆಟ್ಲೂರ್‌ರನ್ನು ಒಳಗೊಂಡ ವಿಚಾರಣಾ ಆಯೋಗ ನೇಮಿಸಿತು. ಸರ್ಕಾರ 29 ಹೋರಾಟಗಾರರನ್ನು ಬಂಧಿಸಿ ದೊಂಬಿಯ ನೆಪಹೇಳಿ 27 ಜನರ ಮೇಲೆ ಸುಳ್ಳು ಖಟ್ಲೆ ಸಹ ಹಾಕಿತು. ಆ ಸಂದರ್ಭದಲ್ಲಿ ಧಾರವಾಡಕ್ಕೆ ಬಂದು ಕೈದಿಗಳನ್ನು ಭೇಟಿ ಮಾಡಿ ಧೈರ್ಯ ಹೇಳಿದ್ದ ಲಾಲಾ ಲಜಪತರಾಯ್ ಸಾರ್ವಜನಿಕ ಭಾಷಣ ಕೂಡ ಮಾಡಿದ್ದರು. ಬಂಧಿತರ ನೈತಿಕ ಧೈರ್ಯ ಕಂಡು ತನಗೆ ಸಂತಸವಾಗಿದೆ ಎಂದೂ ಅವರು ಹೇಳಿದ್ದು ಇತಿಹಾಸ ಪುಟಗಳಲ್ಲಿದೆ ಎಂದು ಸ್ಥಳೀಯರಾದ ಉದಯ ಯಂಡಿಗೇರಿ ಮಾಹಿತಿ ನೀಡುತ್ತಾರೆ.
ಅದಾದ ಬಳಿಕ ಅನೇಕ ವರ್ಷ ಜುಲೈ 1ರಂದು ಕರಾಳ ದಿನಾಚರಣೆ ನಡೆಸಿ ಜನಜಾಗೃತಿ ಮೂಡಿಸಲಾಯಿತು. ಪ್ರತಿವರ್ಷ ಹರತಾಳ, ಉಪವಾಸಗಳಿಗೆ ಕರೆ ಕೊಡಲಾಗುತ್ತಿತ್ತು. ಭಾರತ ಸರ್ಕಾರ 25ನೇ ಸ್ವಾತಂತ್ರ್ಯೋತ್ಸವ ಸ್ಮರಣೆಗಾಗಿ ಧಾರವಾಡದ ಜಕಣಿ ಬಾವಿ ಬಳಿ ಹುತಾತ್ಮರ ಸ್ಮಾರಕವನ್ನು ನಿರ್ಮಿಸಿದೆ.
ತಲುಪವುದು ಹೇಗೆ?
ಜಕಣಿಬಾವಿ ಧಾರವಾಡ ನಗರದ ಹೃದಯ ಭಾಗದಲ್ಲೇ ಇದೆ. ನಗರ ಬಸ್ ನಿಲ್ದಾಣದಿಂದ ಸುಭಾಷ್ ರಸ್ತೆಯಲ್ಲಿ 200 ಮೀ. ದೂರ ಸಾಗಿದರೆ ಸ್ಮಾರಕ ಇರುವ ಸ್ಥಳ ಸಿಗುತ್ತದೆ.