ಸ್ವಾತಂತ್ರ್ಯ ಹೋರಾಟಕ್ಕೆ ಪ್ರಮುಖ ಕೊಡುಗೆಗಳನ್ನು ನೀಡಿದ ಶಿಕ್ಷಣ ಸಂಸ್ಥೆಗಳಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಕೂಡ ಒಂದು. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊಂದಿದ್ದ ನಗರದ ಸಾವಿರಾರು ವಿದ್ಯಾರ್ಥಿ ಮತ್ತು ಅಧ್ಯಾಪಕ ಹೋರಾಟಗಾರರಿಗೆ ನ್ಯಾಷನಲ್ ಹೈಸ್ಕೂಲ್ ಕೇಂದ್ರ ಬಿಂದುವಾಗಿತ್ತು.
ಬೆಂಗಳೂರು (ಜು. 24): ಸ್ವಾತಂತ್ರ್ಯ ಹೋರಾಟಕ್ಕೆ ಪ್ರಮುಖ ಕೊಡುಗೆಗಳನ್ನು ನೀಡಿದ ಶಿಕ್ಷಣ ಸಂಸ್ಥೆಗಳಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಕೂಡ ಒಂದು. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊಂದಿದ್ದ ನಗರದ ಸಾವಿರಾರು ವಿದ್ಯಾರ್ಥಿ ಮತ್ತು ಅಧ್ಯಾಪಕ ಹೋರಾಟಗಾರರಿಗೆ ನ್ಯಾಷನಲ್ ಹೈಸ್ಕೂಲ್ ಕೇಂದ್ರ ಬಿಂದುವಾಗಿತ್ತು.
1942ರಲ್ಲಿ ಮಹಾತ್ಮ ಗಾಂಧೀಜಿ ಯವರು ಕ್ವಿಂಟ್ ಇಂಡಿಯಾ ಚಳವಳಿ ಆರಂಭಿಸಿದಾಗ ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿಗಳು ಸುಮಾರು 2 ತಿಂಗಳ ಕಾಲ ತರಗತಿಗಳಿಗೆ ಹಾಜರಾಗದೆ ಹೋರಾಟಕ್ಕೆ ಸಾಥ್ ನೀಡಿದ್ದರು. ಇಲ್ಲಿ ಉಪಾಧ್ಯಾಯರಾಗಿದ್ದ ಕೆ.ಶ್ರೀನಿವಾಸರಾವ್ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಸೆರೆವಾಸ ಅನುಭವಿಸಿದ್ದರು.
India@75:ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿ ತರೀಕೆರೆ ಹಳೆ ತಾಲೂಕು ಕಚೇರಿ
ಮದ್ರಾಸಿನ ಥಿಯೊಸಾಫಿಕಲ್ ಸೊಸೈಟಿಯ ಸದಸ್ಯರಾಗಿದ್ದ ಡಾ.ಆ್ಯನಿಬೆಸೆಂಟ್ ಕೋರಿಕೆಯ ಮೇರೆಗೆ ಬೆಂಗಳೂರಿನ ದೊಡ್ಡಣ ಶೆಟ್ಟಿಸಂಸ್ಥೆಗಳ ಆವರಣದಲ್ಲಿ 1917ರಲ್ಲಿ ದೇಶಿಯ ಶಾಲೆಯನ್ನು ಆರಂಭಿಸಲಾಯಿತು. ಅದೇ ಬಳಿಕ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಆಗಿ ಹೆಸರುವಾಸಿಯಾಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ಫೂರ್ತಿಯಾದ ಸಂಘ ಸಂಸ್ಥೆಗಳಲ್ಲಿ ಈ ಶಾಲೆ ಪ್ರಮುಖ ಸ್ಥಾನ ಪಡೆದಿದೆ.
ಹಿಂದೂಸ್ತಾನಿ ಸೇವಾದಳದಲ್ಲಿದ್ದ ಇಲ್ಲಿನ ವಿದ್ಯಾರ್ಥಿಗಳು ಬಾಪೂಜಿಯವರು ಅಧ್ಯಕ್ಷತೆ ವಹಿಸಿದ್ದ ಬೆಳಗಾವಿಯ 1924ರ ಅಖಿಲ ಭಾರತ ಕಾಂಗ್ರೆಸ್ ಸಮಾವೇಶದಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಿದ್ದರು. ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತ ಖಾದಿ ಪ್ರದರ್ಶನವನ್ನು ಸ್ವತಃ ಗಾಂಧೀಜಿಯೇ ಉದ್ಘಾಟಿಸಿದ್ದರು. ಸ್ವಾತಂತ್ರ್ಯ ಚಳವಳಿಯ ಅನೇಕ ಸಭೆ, ಸಮಾರಂಭಗಳಿಗೆ ಇಲ್ಲಿನ ಆವರಣ ಯಾವಾಗಲೂ ಬಳಕೆಯಾಗುತ್ತಿತ್ತು.
ಉಪಾಧ್ಯಾಯ ಹುದ್ದೆಗೆ ರಾಜೀನಾಮೆ: 1930ರಲ್ಲಿ ದಂಡಿ ಸತ್ಯಾಗ್ರಹ (ಉಪ್ಪಿನ ಸತ್ಯಾಗ್ರಹ) ನಡೆದ ಸಂದರ್ಭದಲ್ಲಿ ನ್ಯಾಷನಲ್ ಹೈಸ್ಕೂಲ್‌ನ ಉಪಾಧ್ಯಾಯರಾಗಿದ್ದ ಕೆ.ವೆಂಕಟರಾಮಯ್ಯ ಮತ್ತು ಎಚ್.ಅನಂತರಾವ್ ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಟ್ಟು ಸತ್ಯಾಗ್ರಹದಲ್ಲಿ ಭಾಗವಹಿಸಲು ಗುಜರಾತಿನ ಸಬರಮತಿ ಆಶ್ರಮದತ್ತ ಹೋಗಿದ್ದರು.
ವಿದ್ಯಾರ್ಥಿಗಳ ಸತ್ಯಾಗ್ರಹ: 1942ರ ಕ್ವಿಟ್ ಇಂಡಿಯಾ ಚಳವಳಿ ವೇಳೆ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಮತ್ತು ಸೆಂಟ್ರಲ್ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದರು. ಸುಮಾರು ಒಂದೂವರೆ ಕಿ.ಮೀ ಉದ್ದದ ಸಾಲುಗಳಲ್ಲಿ ವಿದ್ಯಾರ್ಥಿಗಳು ಸತ್ಯಾಗ್ರಹದ ಮೆರವಣಿಗೆ ನಡೆಸಿದ್ದು ಅಂದಿನ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಹಾಗಾಗಿ ವಿದ್ಯಾರ್ಥಿಗಳ ಹೋರಾಟ ಹತ್ತಿಕ್ಕಲು ಲಾಠಿ ಚಾಜ್‌ರ್, ಗೋಲಿಬಾರ್ ಮತ್ತು ಆಶ್ರುವಾಯು ನಡೆಸಲಾಗಿತ್ತು ಎಂದು ವಿವಿಧ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ.
ಗಾಂಧಿಸ್ಕೂಲ್!: 1935ರಲ್ಲಿ ನಡೆದ ಖಾದಿ ಗ್ರಾಮೋದ್ಯೋಗ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಮಹತ್ವದ ಪಾತ್ರವಹಿಸಿದ್ದರು. ಗಾಂಧೀಜಿಯವರ ದರ್ಶನಕ್ಕಾಗಿ ಶಾಲೆಯ ವಿದ್ಯಾರ್ಥಿಗಳು ಬೆಂಗಳೂರಿನ ರೇಸ್‌ವ್ಯೂ ಮೈದಾನಕ್ಕೆ ಹೋಗಿದ್ದಾಗ ಸ್ವಾತಂತ್ರ್ಯ ಹೋರಾಟಗಾರ ಎಚ್.ನರಸಿಂಹಯ್ಯ ವಿದ್ಯಾರ್ಥಿಯಾಗಿದ್ದರು. ಉಪಾಧ್ಯಾಯರು, ವಿದ್ಯಾರ್ಥಿಗಳು ಖಾದಿ ಉಡುಪು ಧರಿಸಿ ಗಾಂಧೀಜಿಯನ್ನು ಭೇಟಿಯಾಗಿದ್ದರು. ಈ ಶಾಲೆಯೊಂದಿಗೆ ಗಾಂಧೀಜಿಯವರ ನಿಕಟ ಸಂಪರ್ಕ, ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಸ್ವಯಂ ಸೇವಕರ ಸೇವಾ ಕಾರ್ಯಗಳಿಂದಾಗಿ ಈ ಶಾಲೆಯನ್ನು ಸಾರ್ವಜನಿಕರು ಗಾಂಧಿ ಸ್ಕೂಲ್ ಎಂದೇ ಗುರುತಿಸುತ್ತಿದ್ದದ್ದು ವಿಶೇಷ.
India@75:ಹುತಾತ್ಮ ರಾಯಣ್ಣನ ಚರಿತ್ರೆ ಹೇಳುವ ಬೆಳಗಾವಿಯ ನಂದಗಡ
ತಲುಪುವುದು ಹೇಗೆ?
ಬೆಂಗಳೂರಿನ ಹೃದಯಭಾಗದಲ್ಲೇ ಇರುವುದರಿಂದ ತಲುಪುವುದು ಕಷ್ಟವೇನಲ್ಲ. ಕೆಂಪೇಗೌಡ ಬಸ್ ನಿಲ್ದಾಣದಿಂದ ಸಾಕಷ್ಟುಸಿಟಿ ಬಸ್‌ಗಳಿವೆ. ಇನ್ನು ನ್ಯಾಷನಲ್ ಹೈಸ್ಕೂಲ್ ಸನಿಹದಲ್ಲೇ ಮೆಟ್ರೋ ರೈಲು ನಿಲ್ದಾಣ ಇರುವುದರಿಂದ ಮೆಜೆಸ್ಟಿಕ್‌ನಿಂದ ಇಲ್ಲಿಗೆ ಶೀಘ್ರವಾಗಿ ತಲುಪಬಹುದು.
- ಸಂಪತ್ ತರೀಕೆರೆ
